ADVERTISEMENT

ತೆಂಗು: ವೈಜ್ಞಾನಿಕ ಬೆಂಬಲ ಬೆಲೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 8:47 IST
Last Updated 20 ಜನವರಿ 2017, 8:47 IST
ತೆಂಗು: ವೈಜ್ಞಾನಿಕ ಬೆಂಬಲ ಬೆಲೆಗೆ ಆಗ್ರಹ
ತೆಂಗು: ವೈಜ್ಞಾನಿಕ ಬೆಂಬಲ ಬೆಲೆಗೆ ಆಗ್ರಹ   

ದಾವಣಗೆರೆ: ‘ಬೆಲೆ ಕುಸಿತ, ಕೀಟ ಮತ್ತು ರೋಗ ಬಾಧೆಯಿಂದ ತೆಂಗು ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದು ತೆಂಗಿನ ಕಾಯಿಗೆ  ₹ 5 ಕೂಡ ಬೆಳೆಗಾರರಿಗೆ ಸಿಗುತ್ತಿಲ್ಲ. ಕೂಡಲೇ ತೆಂಗಿನ ಕಾಯಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡಬೇಕು’ ಎಂದು ಕಲ್ಪತರು ತೆಂಗು ಬೆಳೆಗಾರರ ಸಂಘದ ಕಾರ್ಯದರ್ಶಿ ವೈ.ಸುರೇಶ್‌ ಆಗ್ರಹಿಸಿದರು.

‘ಮಧ್ಯವರ್ತಿಗಳು ಒಂದು ಎಳನೀರು ಕಾಯಿಯನ್ನು ₹ 7ಕ್ಕೆ ನಮ್ಮಿಂದ ಖರೀದಿ ಮಾಡಿ ನಗರ ಪ್ರದೇಶಗಳಲ್ಲಿ ₹ 20ಕ್ಕೆ ಮಾರಾಟ ಮಾಡುತ್ತಿದ್ದಾರೆ. ಬೆಳೆಗಾರರಿಗಿಂತ ಮಧ್ಯವರ್ತಿಗಳಿಗೇ ಹೆಚ್ಚು ಲಾಭವಾಗುತ್ತಿದೆ. ಎಳನೀರು ಕಾಯಿ ಹಾಗೂ ತೆಂಗಿನ ಕಾಯಿಯಲ್ಲಿ ನಮಗೆ ಸಾಕಷ್ಟು ವಂಚನೆ ಮಾಡಲಾಗುತ್ತಿದೆ. ಸರ್ಕಾರ ಮಧ್ಯಪ್ರವೇಶಿಸಿ ಪ್ರತಿ ತೆಂಗಿನ ಕಾಯಿ ಹಾಗೂ ಎಳನೀರು ಕಾಯಿಗೆ ₹ 20 ನಿಗದಿ ಮಾಡಬೇಕು’ ಎಂದು ಗುರುವಾರ ಪತ್ರಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ತೆಂಗು ಬೆಳೆಗಾರರ ರಕ್ಷಣೆಗಾಗಿ ಈಚೆಗೆ ಅಣಬೇರು ಗ್ರಾಮದಲ್ಲಿ ನೂತನವಾಗಿ ‘ಕಲ್ಪತರು ತೆಂಗು ಬೆಳೆಗಾರರ ಸಂಘ’ವನ್ನು ಆರಂಭಿಸಲಾಗಿದೆ. ಸಂಘದಿಂದ ತೆಂಗು ಬೆಳೆಯ ಬಗ್ಗೆ ವೈಜ್ಞಾನಿಕ ತರಬೇತಿ ಆಯೋಜಿಸುವುದು.

ತೆಂಗಿನ ಉಪ ಉತ್ಪನ್ನ ಹಾಗೂ ಸಂರಕ್ಷಣೆ ಬಗ್ಗೆ ರೈತರಿಗೆ ಅರಿವು ಮೂಡಿಸುವುದು. ಬೆಳೆಗಾರರನ್ನು ಒಗ್ಗೂಡಿಸಿ ತೆಂಗು ಉತ್ಪಾದಕರ ಕಂಪೆನಿ ಸ್ಥಾಪಿಸುವುದು ಹೀಗೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ಕೆ.ಸಿ.ಮಲ್ಲೇಶಪ್ಪ, ಸದಸ್ಯರಾದ ಲಕ್ಷ್ಮಣ್‌, ಶಮಿವುಲ್ಲಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.