ADVERTISEMENT

‘ಧರ್ಮಸ್ಥಳ ಯೋಜನೆಯಿಂದ ಹೊನ್ನಾಳಿಗೆ ₹ 37 ಕೋಟಿ ಆರ್ಥಿಕ ಸಹಾಯಧನ’

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 9:03 IST
Last Updated 21 ಮಾರ್ಚ್ 2018, 9:03 IST

ಹೊನ್ನಾಳಿ: ‘ತಾಲ್ಲೂಕಿನಲ್ಲಿ 2018ನೇ ಸಾಲಿನಲ್ಲಿ ಒಟ್ಟು 9,655 ಕುಟುಂಬಗಳಿಗೆ ₹ 37.39 ಕೋಟಿ ಆರ್ಥಿಕ ಸಹಾಯಧನವನ್ನು ನಮ್ಮ ಸಂಸ್ಥೆ ಹಾಗೂ ಯೂನಿಯನ್ ಬ್ಯಾಂಕ್ ಮೂಲಕ ನೀಡಲಾಗಿದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯಶಂಕರ್ ಶರ್ಮಾ ಹೇಳಿದರು.

ಹಿರೇಕಲ್ಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸ್ವಉದ್ಯೋಗ ವಿಚಾರ ಸಂಕಿರಣ ಹಾಗೂ ಅನುದಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೇಶ ಅಲಂಕಾರ ಅಂಗಡಿಗಳು, ಬ್ಯೂಟಿ ಪಾರ್ಲರ್, ಎತ್ತಿನಗಾಡಿ ಖರೀದಿ, ಸಣ್ಣ ವ್ಯಾಪಾರ, ಬಡಗಿ ಉದ್ಯೋಗ, ಹಸು ಖರೀದಿ, ಜಾನುವಾರು ಹಟ್ಟಿ ನಿರ್ಮಾಣ, ಹೈನುಗಾರಿಕೆ, ಅಲಂಕಾರಿಕ ಸ್ವಉದ್ಯೋಗ, ವಿದ್ಯುತ್ ಮತ್ತು ನೀರು ಸೌಲಭ್ಯ, ಪುಷ್ಪ ಕೃಷಿ, ಪೀಠೋಪಕರಣ ಮಳಿಗೆ, ಆಡು, ಕುರಿ ಸಾಕಣೆ, ಹಾರ್ಡ್ ವೇರ್ ಶಾಪ್, ಹೋಟೆಲ್ ಸೇರಿ ಅನೇಕ ಸ್ವ ಉದ್ಯೋಗ ಕೈಗೊಳ್ಳುವ ಯುವಕ– ಯುವತಿಯರಿಗೆ ಸಾಲ ಸೌಲಭ್ಯ ನೀಡಲಾಗಿದೆ ಎಂದರು.

ADVERTISEMENT

‘ರಾಜ್ಯದ 42 ಲಕ್ಷ ಸದಸ್ಯರು ₹ 12 ಸಾವಿರ ಕೋಟಿ ಉಳಿತಾಯ ಮಾಡಿದ್ದಾರೆ. ಈ ಮೂಲ ಧನ ಬಳಕೆ ಮಾಡಿಕೊಂಡು ಬ್ಯಾಂಕ್ ಮೂಲಕ ₹ 40 ಸಾವಿರ ಕೋಟಿ ಸಾಲ ಪಡೆದು ಅದನ್ನು ಮರುಬಳಕೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಹೊಸಕೇರಿ ಸುರೇಶ್ ಮಾತನಾಡಿ, ‘ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತದಾರರಿಗೆ ಮದ್ಯ ಹಂಚಬಾರದು. ಈ ಹಿಂದೆ ಹಿರೇಕಲ್ಮಠದಲ್ಲಿ ನಡೆದ ಮದ್ಯವರ್ಜನಾ ಶಿಬಿರದಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಅವರು ಈ ಬಗ್ಗೆ ಮಾತು ಕೊಟ್ಟಿದ್ದರು. ಅದನ್ನು ನಡೆಸಿಕೊಡುವ ಕಾಲ ಬಂದಿದೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ‘ಇಂದು ವೇದಿಕೆಯಲ್ಲಿ ನಾನೊಬ್ಬನೇ ಇದ್ದೇನೆ. ಈ ಹಿಂದೆ ನಾನು ನೀಡಿದ್ದ ಮಾತಿಗೆ ಬದ್ಧವಾಗಿದ್ದೇನೆ. ಇತರ ಅಭ್ಯರ್ಥಿಗಳೂ ಈ ಬಗ್ಗೆ ಸ್ಪಷ್ಟಪಡಿಸಲಿ. ಇಲ್ಲಿ ಸೇರಿರುವ ಎಲ್ಲಾ ಮಹಿಳೆಯರೂ ಈ ಬಗ್ಗೆ ಮಾತು ಕೊಡಬೇಕು’ ಎಂದು ಹೇಳಿದರು.

ಸಮಾರಂಭದ ಸಾನ್ನಿಧ್ಯವನ್ನು ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಅರಬಗಟ್ಟೆ ಗ್ರಾಮದ ರೈತ ಮಹಿಳೆ ಮಲ್ಲಮ್ಮ ಅವರಿಗೆ ಶ್ರೇಷ್ಠ ಕೃಷಿ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಿಲ್ಲಾ ಯೋಜನಾ ನಿರ್ದೇಶಖ ಜಯಂತ್ ಪೂಜಾರ್, ತಾಲ್ಲೂಕು ಯೋಜನಾ ನಿರ್ದೇಶಕ ಕೆ. ಗುಣಕರ್, ಮುಖ್ಯಸ್ಥ ದಯಾನಂದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.