ADVERTISEMENT

ನದಿಪಾತ್ರದಲ್ಲಿ ನಿಷೇಧಾಜ್ಞೆ ಜಾರಿ

ಭದ್ರಾ ಜಲಾಶಯದಿಂದ ತುಂಗಭದ್ರೆಗೆ ನೀರು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 5:19 IST
Last Updated 23 ಮಾರ್ಚ್ 2017, 5:19 IST

ಹರಪನಹಳ್ಳಿ: ತುಂಗಭದ್ರಾ ನದಿಗೆ ಭದ್ರಾ ನೀರನ್ನು ಬಿಡಲಾಗಿದ್ದು ಮಾರ್ಚ್‌ 23ರ ಒಳಗೆ ತಾಲ್ಲೂಕಿನ ನದಿಪಾತ್ರದ ಪ್ರದೇಶಗಳಿಗೆ ತಲುಪಲಿದೆ. ಅಕ್ರಮ ಪಂಪ್‌ಸೆಟ್‌ಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲು ನದಿ ಪಾತ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿ ವಿವಿಧ ಇಲಾಖೆಯ ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್‌ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಬುಧವಾರ ತಾಲ್ಲೂಕಿನ ವಿವಿಧ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
‘ನದಿ ನೀರನ್ನು ಕೃಷಿಗೆ ಬಳಸಿಕೊಳ್ಳದೆ, ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿಗೆ ಮಾತ್ರ ಬಳಸಲು ಜಿಲ್ಲಾಧಿಕಾರಿ ನೀಡಿರುವ ಆದೇಶವನ್ನು ಪಾಲಿಸಬೇಕು.

ನದಿ ಪಾತ್ರದ ಗ್ರಾಮಗಳಾದ ಹಲುವಾಗಲು, ಗರ್ಭಗುಡಿ, ವಳತಾಂಡ, ನಂದ್ಯಾಲ, ನಿಟ್ಟೂರು, ತಾವರಗುಂದಿ ಸೇರಿದಂತೆ ಎಲ್ಲಾ ಹಳ್ಳಿಗಳ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಡಂಗುರ ಹಾಕಿ ನದಿ ನೀರು ಬಳಕೆ ಬಗ್ಗೆ ಎಚ್ಚರಿಕೆ ನೀಡಬೇಕು. ಬೆಸ್ಕಾಂ, ಗ್ರಾಮ ಪಂಚಾಯ್ತಿ ಅಧಿಕಾರಿಗಳೊಂದಿಗೆ ಸಹಕ ರಿಸಲು ಪೊಲೀಸ್ ಇಲಾಖೆ ಸಿಬ್ಬಂದಿ ಸಿದ್ಧರಿರುತ್ತಾರೆ.  ಸಾರ್ವಜನಿಕರು ಸಹಕ ರಿಸಿ ನೀರು ಹಂಚಿಕೊಂಡು ಉಳಿದ ಜಿಲ್ಲೆಗಳ ಜನರಿಗೂ ನೀರು ದೊರೆಯು ವಂತೆ ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

‘ನದಿಯಿಂದ ನೀರನ್ನು ಎತ್ತಿ ಟ್ಯಾಂಕರ್ ಮೂಲಕ ತೋಟಗಳಿಗೆ ಹಾಯಿಸುವುದನ್ನು ತಡೆಗಟ್ಟುವ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಂತಹ ಟ್ಯಾಂಕರ್‌ ಅನ್ನು ವಶಪಡಿಸಿಕೊಳ್ಳಬೇಕು. ಪಂಪ್‌ಸೆಟ್ ಮೂಲಕ ನೀರು ಎತ್ತುವುದನ್ನು ತಡೆಯಲು ಬೆಸ್ಕಾಂ ಹಾಗೂ ನೀರಾವರಿ ಇಲಾಖೆಯಿಂದ ಅಗತ್ಯ ಕ್ರಮ ಜರುಗಿಸಬೇಕು’ ಎಂದು ತಿಳಿಸಿದರು.

ತಹಶೀಲ್ದಾರ್‌ ಕೆ.ಗುರುಬಸವರಾಜ, ಪ್ರಭಾರ ಇಒ ಹಾಗೂ ಸಹಾಯಕ ಕೃಷಿ ನಿದೇರ್ಶಕ ತಿಪ್ಪೇಸ್ವಾಮಿ, ಬೆಸ್ಕಾಂ ಎಇಇ ಭೀಮಪ್ಪ, ಪುರಸಭೆ ಮುಖ್ಯಾಧಿಕಾರಿ ಐ.ಬಸವರಾಜ ಹಲುವಾಗಲು ಪಿಎಸ್‌ಐ ಸಣ್ಣಿಂಗಣವರ, ಹೋಂ ಗಾರ್ಡ್ ಅಧಿಕಾರಿ ಪಿ.ವಾಗೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.