ADVERTISEMENT

ನಾಲ್ಕು ವರ್ಷದಲ್ಲಿ ನಾಲ್ಕು ಚಿರತೆ ಬಲಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 5:06 IST
Last Updated 21 ಏಪ್ರಿಲ್ 2017, 5:06 IST
ನಾಲ್ಕು ವರ್ಷದಲ್ಲಿ ನಾಲ್ಕು ಚಿರತೆ ಬಲಿ
ನಾಲ್ಕು ವರ್ಷದಲ್ಲಿ ನಾಲ್ಕು ಚಿರತೆ ಬಲಿ   

ಜಗಳೂರು: ತಾಲ್ಲೂಕಿನ ಕುರುಚಲು ಅರಣ್ಯ ಪ್ರದೇಶದಲ್ಲಿ ವಿನಾಶದ ಅಂಚಿನಲ್ಲಿರುವ ಕೊಂಡುಕುರಿ ಸೇರಿದಂತೆ ಸಾಕಷ್ಟು ವನ್ಯಸಂಕುಲ ಶತಮಾನಗಳಿಂದ ನೆಲೆಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳ ಮೇಲಿನ ಜನರ ಅಸಹನೆ ಹೆಚ್ಚುತ್ತಿದ್ದು, ಅಪರೂಪದ ವನ್ಯ ಪ್ರಾಣಿಗಳ ಜೀವಕ್ಕೆ ಕುತ್ತು ಬಂದಿದೆ.ಕೊಂಡುಕುರಿ ವನ್ಯಧಾಮ ವ್ಯಾಪ್ತಿಯಲ್ಲಿ ರಂಗಯ್ಯನ ದುರ್ಗ ಅರಣ್ಯ ಹಾಗೂ ಅಣಬೂರು, ಕ್ಯಾಸೇನಹಳ್ಳಿ ವಲಯದ ಅರಣ್ಯ ಮುಖ್ಯವಾಗಿವೆ.

ಕೊಂಡುಕುರಿ ಅಲ್ಲದೆ ಚಿರತೆ, ಕತ್ತೆ ಕಿರುಬ, ತೋಳ, ಕರಡಿ, ಕಾಡುಬೆಕ್ಕು, ಕೃಷ್ಣಮೃಗ, ಗುಳ್ಳೆನರಿ, ಮುಳ್ಳುಹಂದಿ, ಚಿಪ್ಪು ಹಂದಿ, ನಕ್ಷತ್ರ ಆಮೆ ಹಾಗೂ ಅತಿ ವಿರಳವಾಗಿರುವ ದೊರವಾಯನ ಹಕ್ಕಿ ಇಲ್ಲಿ ಆಶ್ರಯ ಪಡೆದಿವೆ.ಮನುಷ್ಯ, ವನ್ಯಜೀವಿಗಳ ಸಂಘರ್ಷದ ಪರಿಣಾಮ ನಾಲ್ಕು ವರ್ಷಗಳಲ್ಲಿ ನಾಲ್ಕು ಚಿರತೆಗಳನ್ನು ಕೊಲ್ಲಲಾಗಿದೆ. ಆಗಾಗ್ಗೆ ಸದ್ದಿಲ್ಲದೆ ಕೊಂಡುಕುರಿಗಳ ಬೇಟೆ ಆಡುವುದು ಮುಂದುವರಿದಿದೆ.

ಈ ತಾಲ್ಲೂಕಿನಲ್ಲಿ ಚಿರತೆ ಸೇರಿದಂತೆ ಯಾವುದೇ ಮಾಂಸಾಹಾರಿ ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ನಡೆಸಿದ ಉದಾಹರಣೆಗಳು ಕಡಿಮೆ.ಆಹಾರಕ್ಕಾಗಿ ಮೇಕೆ ಮುಂತಾದ ಜಾನುವಾರು ಹೊತ್ತೊಯ್ದ ಸಂದರ್ಭದಲ್ಲಿ ಜನರು ಗುಂಪುಗಳಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ತಾಲ್ಲೂಕಿನಲ್ಲಿ ಎರಡು ಚಿರತೆಗಳನ್ನು ಹತ್ಯೆ ಮಾಡಿದ್ದಾರೆ. ತಾರೇಹಳ್ಳಿ ಅರಣ್ಯದಲ್ಲಿ 2012ರಲ್ಲಿ ಸಿಡಿಮದ್ದು ಇಟ್ಟು, ಗಂಡು ಚಿರತೆಯನ್ನು ಕೊಲ್ಲಲಾಗಿತ್ತು. 6 ತಿಂಗಳ ಹಿಂದೆ ಅಣಬೂರು ಬೆಟ್ಟದ ಪ್ರದೇಶದಲ್ಲಿ ಹಣೆ ಭಾಗಕ್ಕೆ ಗುಂಡು ಹೊಡೆದ ಕಾರಣ ಚಿರತೆ ಸಾವನ್ನಪ್ಪಿತ್ತು.

ADVERTISEMENT

ಅಪರೂಪದ ವನ್ಯ ಹಾಗೂ ಸಸ್ಯ ಪ್ರಭೇದ ಹೊಂದಿರುವ 8 ಸಾವಿರ ಹೆಕ್ಟೇರ್‌ ವಿಸ್ತೀರ್ಣದ ರಂಗಯ್ಯನ ದುರ್ಗ ಅರಣ್ಯವನ್ನು ಸರ್ಕಾರ ಕೊಂಡುಕುರಿ ಅಭಯಾರಣ್ಯವಾಗಿ 2010ರಲ್ಲಿ ಘೋಷಿಸಿದೆ. ಪ್ರತಿ ವರ್ಷ ವನ್ಯಜೀವಿಗಳ ಸಂರಕ್ಷಣೆಗಾಗಿ ಸರ್ಕಾರ  ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡುತ್ತಿದೆ. ಆದಾಗ್ಯೂ ಕಾಡುಪ್ರಾಣಿಗಳ ರಕ್ಷಣೆಯಲ್ಲಿ ಹೆಚ್ಚಿನ ಸುಧಾರಣೆ ಸಾಧ್ಯವಾಗಿಲ್ಲ ಎನ್ನುವುದು ವನ್ಯಜೀವಿ ಆಸಕ್ತರ ದೂರು.

ನಾಲ್ಕು ದಿನಗಳ ಹಿಂದೆ ಮೇಕೆ ಮರಿಯನ್ನು ಹೊತ್ತೊಯ್ದಿದೆ ಎನ್ನುವ ಕಾರಣಕ್ಕೆ ಆಕ್ರೋಶಗೊಂಡ ಕುರಿಗಾಹಿ ಗಳು ಚಿರತೆಯನ್ನು ಕೊಂದು, ಪೆಟ್ರೋಲ್‌ ಸುರಿದು ಸುಟ್ಟು ಹಾಕಿರುವುದು ಆತಂಕಕಾರಿ.ಜನರ ತೊಂದರೆಗಳಿಗೆ ತಾಳ್ಮೆ ಯಿಂದ ಕಿವಿಗೊಟ್ಟರೆ ಪ್ರತೀಕಾರದ ಹಾದಿಯನ್ನು ತಡೆಯಬಹುದು. ಸಂಘರ್ಷವಿಲ್ಲದ ಸಮಯದಲ್ಲಿ ಜನ ರೊಡನೆ ಉತ್ತಮ ಬಾಂಧವ್ಯ ಹೊಂದ ಬೇಕು.  ಜಾನುವಾರನ್ನು ವನ್ಯಜೀವಿ ಗಳಿಂದ ರಕ್ಷಿಸಿಕೊಳ್ಳಬಹುದಾದ ಮಾರ್ಗಗಳ ಬಗ್ಗೆ ಸ್ಥಳೀಯರಿಗೆ ಸೂಕ್ತ ಶಿಕ್ಷಣ ಹಾಗೂ ಮಾಹಿತಿ ನೀಡಬೇಕು’ ಎಂದು ರಾಜ್ಯ ವನ್ಯಜೀವಿ ಸಲಹಾ ಮಂಡಳಿ ಸದಸ್ಯ ಸಂಜಯಗುಬ್ಬಿ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

‘ವನ್ಯಜೀವಿ ಸಂಘರ್ಷವನ್ನು ತಾಳಿಕೆಯ ಮಟ್ಟಕ್ಕೆ ತರುವುದು ಮುಖ್ಯ. ರಾಜ್ಯದ ಕೆಲವೆಡೆ ಈಗಾಗಲೇ ಕೆಲವು ಅಧಿಕಾರಿಗಳು ಇದನ್ನು ಸಾಧಿಸಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಕೊಡಗು ಜಿಲ್ಲೆ’  ಎಂದು ಅವರು  ಹೇಳುತ್ತಾರೆ.ಚಿರತೆ ಹತ್ಯೆ ನಡೆದಿದ್ದರೂ ಸ್ಥಳಕ್ಕೆ ಸ್ಥಳೀಯ ಅಧಿಕಾರಿ ಹೊರತುಪಡಿಸಿ ಜಿಲ್ಲಾ ಮಟ್ಟದ ಯಾವುದೇ ಅಧಿಕಾರಿ ಭೇಟಿ ನೀಡಲಿಲ್ಲ. ಇದರಿಂದಾಗಿ ಸಿಬ್ಬಂದಿಯ ಸ್ಥೈರ್ಯ ಕುಗ್ಗಿದೆ.  ಹಲವು ವರ್ಷಗಳಿಂದ ಬೀಡುಬಿಟ್ಟಿರುವ ಜಿಲ್ಲಾ ಮಟ್ಟದ ಮೇಲಧಿಕಾರಿಗಳಿಗೆ ಇಲಾಖೆ ಕೆಲಸದ ಬಗ್ಗೆ ಆಸಕ್ತಿಯೇ ಇಲ್ಲವಾಗಿದೆ. ಹೀಗಾಗಿ ಸೂಕ್ತ ಉಸ್ತುವಾರಿ ಕೊರತೆಯಿದೆ. ಇದರಿಂದಾಗಿ ಅರಣ್ಯ ಸಂರಕ್ಷಣೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯ ವೈಫಲ್ಯ ಎದ್ದುಕಾಣುತ್ತಿದೆ ಎಂಬ ಆರೋಪಗಳಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.