ADVERTISEMENT

ನಾಲ್ಕೂವರೆ ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ: ವಡ್ನಾಳ್

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 7:04 IST
Last Updated 6 ಡಿಸೆಂಬರ್ 2017, 7:04 IST

ಚನ್ನಗಿರಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಒಂದು ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ವಡ್ನಾಳ್ ರಾಜಣ್ಣ ತಿಳಿಸಿದರು.

ತಾಲ್ಲೂಕಿನ ಹಿರೇಮಳಲಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಗಳವಾರ ನಡೆದ ಹಿರೇಮಳಲಿ–ಮಲ್ಲಿಗೆರೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ದರ ₹ 300ರೊಳಗೆ ಇತ್ತು. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹ 800ಕ್ಕೆ ಏರಿದೆ. ಬಿಜೆಪಿ ಸರ್ಕಾರಕ್ಕೆ ಜನರ ಕಷ್ಟಗಳ ಬಗ್ಗೆ ಅರಿವು ಇಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡೀಸೆಲ್, ಪೆಟ್ರೋಲ್ ದರ ಕಡಿಮೆ ಇದ್ದರೂ ಬೆಲೆ ಕಡಿಮೆ ಮಾಡಿಲ್ಲ ಎಂದು ದೂರಿದರು.

ADVERTISEMENT

‘ಇಂದು ಅಮ್ಮನಗುಡ್ಡ–ನಲ್ಲೂರು ರಸ್ತೆ ₹ 2 ಕೋಟಿ, ಹಿರೇಮಳಲಿ–ಮಲ್ಲಿಗೆರೆ ರಸ್ತೆ ₹ 2.60 ಕೋಟಿ ಹಾಗೂ ಜಯಂತಿ ನಗರ–ಎನ್.ಚಿರಡೋಣಿ ರಸ್ತೆ ಅಭಿವೃದ್ಧಿಗೆ ₹ 92 ಲಕ್ಷ ಅನುದಾನ ಬಿಡುಗಡೆಯಾಗಿದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ತೃಪ್ತಿ ನನಗಿದೆ. ಈ ಚುನಾವಣೆ ನನ್ನ ಪಾಲಿಗೆ ಅಂತಿಮ ಚುನಾವಣೆಯಾಗಿದ್ದು, ಜನರು ಬೆಂಬಲ ನೀಡಿ ಗೆಲ್ಲಿಸಿದರೆ ಈ ಕ್ಷೇತ್ರದ ಬಗ್ಗೆ ನಾನು ಕಂಡಿರುವ ಕನಸನ್ನು ನನಸು ಮಾಡುತ್ತೇನೆ’ ಎಂದರು.

ನಲ್ಲೂರು ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಎನ್. ಲೋಕೇಶ್ವರಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯ ಆರ್. ಷಡಕ್ಷರಿ, ಗುತ್ತಿಗೆದಾರ ಆರ್. ಪರಮೇಶ್, ಲೋಕೋಪಯೋಗಿ ಇಲಾಖೆ ಎಇಇ ಶಂಕರಮೂರ್ತಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಕಮ್ಮ, ಶಾಮನೂರಪ್ಪ, ಚನ್ನಬಸಪ್ಪ, ದಾಸಪ್ಪ, ಜಿ.ಆರ್. ಲೋಕೇಶಪ್ಪ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.