ADVERTISEMENT

ನಿಯಮ ಮೀರಿದರೆ ಮನೆಗೇ ನೋಟಿಸ್‌

ಆಟೋಮೆಟೆಡ್‌ ಟ್ರಾಫಿಕ್‌ ಚಲನಿಂಗ್ ಸಿಸ್ಟಂ ಜಾರಿಗೆ ಸಿದ್ಧತೆ: ಎಸ್‌ಪಿ

ಎಚ್.ಬಾಲಚಂದ್ರ
Published 13 ಮಾರ್ಚ್ 2017, 5:32 IST
Last Updated 13 ಮಾರ್ಚ್ 2017, 5:32 IST
ವಿದ್ಯಾರ್ಥಿಗೆ ಹೆಲ್ಮೆಟ್‌ ತೊಡಿಸುತ್ತಿರುವ ಪೊಲೀಸ್‌.            (ಸಂಗ್ರಹ ಚಿತ್ರ)
ವಿದ್ಯಾರ್ಥಿಗೆ ಹೆಲ್ಮೆಟ್‌ ತೊಡಿಸುತ್ತಿರುವ ಪೊಲೀಸ್‌. (ಸಂಗ್ರಹ ಚಿತ್ರ)   

ದಾವಣಗೆರೆ: ಹೆಲ್ಮೆಟ್ ಧರಿಸದೆ ಪ್ರಯಾಣ ಮಾಡುವ ದ್ವಿಚಕ್ರ ವಾಹನ ಸವಾರರಿಗೆ ‘ಶಾಕ್‌’ ನೀಡಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ. ಹೆಲ್ಮೆಟ್‌ ಧರಿಸದೆ ಬೈಕ್‌ ಓಡಿಸಿ, ಪೊಲೀಸರ ಕೈಗೆ ಸಿಕ್ಕಿಬೀಳದೆ ಮನೆ ಸೇರಿಕೊಂಡರೂ, ನಿಮ್ಮ ಮನೆಗೆ ದಂಡದ ನೋಟಿಸ್‌ ತಪ್ಪದೆ ಬರಲಿದೆ. ಇಂತಹ ಯೋಜನೆ ಯೊಂದು ಒಂದೆರಡು ತಿಂಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಎಸ್‌.ಗುಳೇದ.

ಎಟಿಸಿಎಸ್‌ ಕಣ್ಗಾವಲು: ನಗರದಲ್ಲಿ ಹೆಲ್ಮೆಟ್‌ ಕಡ್ಡಾಯ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪಣ ತೊಟ್ಟಿರುವ ಪೊಲೀಸ್ ಇಲಾಖೆ ಎಟಿಸಿಎಸ್‌ (ಆಟೋಮೆಟೆಡ್‌ ಟ್ರಾಫಿಕ್‌ ಚಲನಿಂಗ್ ಸಿಸ್ಟಂ) ವ್ಯವಸ್ಥೆ ಜಾರಿಗೆ ಮುಂದಾಗಿದ್ದು, ಈ ವ್ಯವಸ್ಥೆಯಡಿ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಸುಲಭವಾಗಿ ಪತ್ತೆ ಹಚ್ಚಿ ದಂಡ ವಿಧಿಸಬಹುದು.

ಏನಿದು ಎಟಿಸಿಎಸ್‌?: ‘ಎಟಿಸಿಎಸ್‌’ ಸರ್ವರ್ ಆಧಾರಿತ ತಂತ್ರಜ್ಞಾನವಾಗಿದ್ದು, ಆ್ಯಪ್‌ ಸಹಾಯದಿಂದ ಕಾರ್ಯ ನಿರ್ವಹಿಸುತ್ತದೆ. ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳ ವಿವರ, ಮಾಲೀಕರ ಹೆಸರು, ವಿಳಾಸ ಈ ಸರ್ವರ್‌ನಲ್ಲಿ ಲಭ್ಯವಿರುತ್ತದೆ. ಈ ಮಾಹಿತಿಯನ್ನು ಬಳಸಿಕೊಂಡು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದವರಿಗೆ ಪೊಲೀಸರು ದಂಡ ಕಟ್ಟುವಂತೆ ನೋಟಿಸ್‌ ನೀಡಲಿದ್ದಾರೆ.

ಕಾರ್ಯ ನಿರ್ವಹಣೆ ಹೇಗೆ?: ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಿ ಅವರ ಕೈಗೆ ‘ಎಟಿಸಿಎಸ್‌’ ಸರ್ವರ್ ಆಧಾರಿತ ಮೊಬೈಲ್‌ಗಳನ್ನು ನೀಡಲಾಗುತ್ತದೆ. ಇವು ಡಿವೈಎಸ್‌ಪಿ ಕಚೇರಿ ಹಾಗೂ ಸಂಚಾರ ಪೊಲೀಸ್‌ ಠಾಣೆಗಳ ಸರ್ವರ್ ಜತೆ ಸಂಪರ್ಕ ಹೊಂದಿರುತ್ತವೆ. ಹೆಲ್ಮೆಟ್ ಧರಿಸದೆ ವಾಹನ ಸವಾರಿ ಮಾಡಿದರೆ, ಟ್ರಾಫಿಕ್‌ ಸಿಗ್ನಲ್ ಜಂಪ್‌ ಮಾಡಿದರೆ ಪೊಲೀಸರು ಸವಾರರನ್ನು ಹಿಡಿಯುವುದಿಲ್ಲ. ಬದಲಾಗಿ, ಅಂತಹ ವಾಹನಗಳ ಚಿತ್ರವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸರ್ವರ್‌ಗೆ ರವಾನೆ ಮಾಡಲಿದ್ದಾರೆ.

ಸರ್ವರ್‌ಗೆ ಅಪ್‌ಲೋಡ್ ಆದ ಚಿತ್ರವನ್ನು ಸಂಚಾರ ಠಾಣೆಗಳಲ್ಲಿ ಅಳವ ಡಿಸಲಾಗಿರುವ ಕಂಪ್ಯೂಟರ್‌ನಲ್ಲಿ ಪರಿಶೀ ಲಿಸುವ ಸಿಬ್ಬಂದಿ, ವಾಹನ ಮಾಲೀಕ ರನ್ನು ಪತ್ತೆಹಚ್ಚಿ ಅವರ ವಿಳಾಸಕ್ಕೆ ದಂಡ ಕಟ್ಟುವಂತೆ ನೋಟಿಸ್‌ ಕಳುಹಿಸಲಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರ ಕೈನಿಂದ ತಪ್ಪಿಸಿಕೊಂಡರೂ, ದಂಡ ಕಟ್ಟುವುದರಿಂದ ತಪ್ಪಿಸಿಕೊಳ್ಳು ವುದು ಸಾಧ್ಯವಿಲ್ಲ ಎನ್ನುತ್ತಾರೆ ಎಸ್‌ಪಿ.

ಎಲ್ಲೆಲ್ಲಿ ದಂಡ ಕಟ್ಟಬಹುದು?: ನೋಟಿಸ್‌ ಪಡೆದ ಸವಾರರು ನಿರ್ದಿಷ್ಟ ಅವಧಿ ಯೊಳಗೆ ಸಂಚಾರ ಠಾಣೆಗಳಿಗೆ ಬಂದು ದಂಡಕಟ್ಟಿ ರಶೀದಿ ಪಡೆಯ ಬಹುದು. ‘ದಾವಣಗೆರೆ ಒನ್‌’ ಕೇಂದ್ರದಲ್ಲೂ ದಂಡ ಕಟ್ಟಲು ವ್ಯವಸ್ಥೆ ಮಾಡಲಾಗು ವುದು. ಪದೇ ಪದೇ ನಿಯಮಗಳನ್ನು ಉಲ್ಲಂಘಿಸಿ, ದಂಡವನ್ನೂ ಕಟ್ಟದಿದ್ದರೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್‌ಪಿ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಹೆಲ್ಮೆಟ್‌ ಕಡ್ಡಾಯ ಬಳ ಕೆಗೆ ಸಾರ್ವಜನಿಕರಿಗೆ ಅರಿವು ಮೂಡಿಸ ಲಾಗಿದೆ. ಕಾರ್ಯಾಗಾರಗಳನ್ನು ನಡೆಸಲಾ ಗಿದೆ. ಅಂತಿಮವಾಗಿ ‘ದಂಡಾಸ್ತ್ರ’ ಪ್ರಯೋಗಿಸಲಾಗುತ್ತಿದೆ. ನಾಗರಿಕರು ಸ್ವಹಿತಕ್ಕಾಗಿ ಪೊಲೀಸರ ಜತೆ ಕೈಜೋಡಿಸ ಬೇಕು. ವ್ಯವಸ್ಥೆಗೆ ಹೊಂದಿಕೊಳ್ಳಬೇಕು ಎಂದು ಮನವಿ ಮಾಡುತ್ತಾರೆ ಎಸ್‌ಪಿ.

‘ಡಿ’ ಟ್ರ್ಯಾಕ್‌ ಪ್ರಸ್ತಾವ
ಸುಗಮ ಸಂಚಾರಕ್ಕೆ ‘ಡಿ’ ಟ್ರ್ಯಾಕ್‌ ಮಾದರಿ ಜಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಹಂತಹಂತವಾಗಿ ನಗರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗುವುದು. ‘ಪಬ್ಲಿಕ್‌ ಐ’ ಎಂಬ ಆ್ಯಪ್‌ ಸಿದ್ಧಪಡಿಸಲಾಗುತ್ತಿದ್ದು, ನಾಗರಿಕರನ್ನೂ ಸಂಚಾರ ನಿಯಮಗಳ ಬಗ್ಗೆ ಜಾಗೃತಿಗೆ ಬಳಸಿಕೊಳ್ಳಲಾಗುವುದು ಎನ್ನುತ್ತಾರೆ ಎಸ್‌ಪಿ ಡಾ.ಭೀಮಾಶಂಕರ ಎಸ್‌.ಗುಳೇದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT