ADVERTISEMENT

ನೀರಿನ ನಿರೀಕ್ಷೆಯಲ್ಲಿಯೇ ಕಂಗೆಟ್ಟ ರೈತರು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 9:43 IST
Last Updated 11 ಸೆಪ್ಟೆಂಬರ್ 2017, 9:43 IST
ಬಸವಾಪಟ್ಟಣದ ಭದ್ರಾ ನಾಲೆ ನೀರಿಲ್ಲದೇ ಒಣಗಿರುವುದು
ಬಸವಾಪಟ್ಟಣದ ಭದ್ರಾ ನಾಲೆ ನೀರಿಲ್ಲದೇ ಒಣಗಿರುವುದು   

ಬಸವಾಪಟ್ಟಣ: ಈ ಬಾರಿ ಮಳೆ ಬಂದು ಭದ್ರಾ ನಾಲೆಯಲ್ಲಿ ನೀರು ಹರಿಯಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರು ನೀರಿಲ್ಲದೇ ಕಂಗೆಟ್ಟಿದ್ದಾರೆ. ಇಲ್ಲಿನ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನಾಲ್ಕು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಎರಡು ವರ್ಷದಿಂದ ಉಂಟಾದ ಮಳೆ ಕೊರತೆಯಿಂದ ಭದ್ರಾ ಜಲಾಶಯ ತುಂಬದೇ ಅಚ್ಚುಕಟ್ಟು ಪ್ರದೇಶಕ್ಕೆ ನೀರಿಲ್ಲದಂತಾಗಿದೆ.

ಈ ಬಾರಿ ಜೂನ್‌ ತಿಂಗಳಿನಿಂದ ಆಗಾಗ ಬೀಳುತ್ತಿದ್ದ ಮಳೆಯಿಂದ ಭದ್ರಾ ಜಲಾಶಯ ತುಂಬಬಹುದು ಎಂಬ ಆಶಾ ಭಾವನೆಯಿಂದ ಅಚ್ಚುಕಟ್ಟು ಪ್ರದೇಶದ ರೈತರು ಭತ್ತದ ಬೀಜಗಳನ್ನು ಚೆಲ್ಲಿ ಸಸಿಗಳನ್ನು ಬೆಳೆಸಿದ್ದರು. ಅಂತರ್ಜಲವೂ ಕುಸಿದಿರುವುದರಿಂದ ಪಂಪ್‌ಸೆಟ್‌ ಮೂಲಕ ನೀರು ಹಾಯಿಸಿಕೊಳ್ಳಬೇಕೆಂಬ ಅವರ ನಿರೀಕ್ಷೆ ಹುಸಿಯಾಯಿತು.

ಆರಂಭದಲ್ಲಿಯೇ ಮಳೆ ಕೊರತೆ ಕಂಡು ಬಂದಿದ್ದರಿಂದ ಈ ಬಾರಿ ಮಳೆಗಾಲದ ಬೆಳೆಗೆ ನೀರು ಕೊಡಲಾಗುವುದಿಲ್ಲ ಎಂದು ರೈತರಿಗೆ ತಿಳಿಸಲಾಗಿದೆ. ಆದರೂ ಅವರು ನಾಟಿಗೆ ಮುಂದಾಗಿದ್ದರು ಎನ್ನುತ್ತಾರೆ ನೀರಾವರಿ ಇಲಾಖೆ ಅಧಿಕಾರಿಗಳು.

ADVERTISEMENT

ಅಲ್ಪ ಸ್ವಲ್ಪವಾದರೂ ಮಳೆ ಬರಬಹುದೆಂಬ ಧೈರ್ಯದಿಂದ ಭತ್ತದ ಗದ್ದೆಗಳಲ್ಲಿ ಮೆಕ್ಕೆಜೋಳ ಬಿತ್ತಿದ್ದ ಕೆಲ ರೈತರು ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಿನಲ್ಲಿ ಬಿದ್ದ ಮಳೆಯಿಂದ ಮೆಕ್ಕೆಜೋಳ ಕೈಗೆ ಬರುವ ಸೂಚನೆ ಇದೆ. ಭತ್ತ ಇಲ್ಲವಾದರೂ ಮೆಕ್ಕೆಜೋಳವೇ ಆಧಾರ. ಆದರೆ ಇದಕ್ಕೆ ಉತ್ತಮವಾದ ಬೆಲೆ ಸಿಕ್ಕರೆ ಮಾತ್ರ ಶ್ರಮ ಸಾರ್ಥಕವಾಗುತ್ತದೆ ಎನ್ನುತ್ತಾರೆ.

ನಮ್ಮ ಗದ್ದೆಗಳು ತಗ್ಗು ಪ್ರದೇಶದಲ್ಲಿರುವುದರಿಂದ ಭತ್ತ ಮಾತ್ರ ಬೆಳೆಯಲು ಸಾಧ್ಯ. ಮೆಕ್ಕೆ ಜೋಳ ಇಲ್ಲಿ ಬೆಳೆಯುವುದಿಲ್ಲ. ಆದ್ದರಿಂದ ಭೂಮಿಯನ್ನು ಪಾಳು ಬಿಡಬೇಕಾಗಿದೆ. ಮೋಡ ಬಿತ್ತನೆಯೂ ಈ ಭಾಗದಲ್ಲಿ ಸಫಲವಾಗಿಲ್ಲ ಎಂದು ಇಲ್ಲಿನ ಕೆಲವರು ತಿಳಿಸಿದರು.

ಈಗ ಭದ್ರಾ ಜಲಾಶಯದಲ್ಲಿ 163 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಬೇಸಿಗೆ ಹಂಗಾಮಿನಲ್ಲಿ ಕಳೆದ ವರ್ಷದಂತೆ ನೀರು ಕೊಟ್ಟರೆ ಅಡಿಕೆ, ತೆಂಗು ಮತ್ತು ಬಾಳೆ ತೋಟಗಳನ್ನು ಉಳಿಸಿಕೊಳ್ಳಲು ಸಾಧ್ಯ ಎನ್ನುತ್ತಾರೆ ತೋಟಗಳ ಮಾಲೀಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.