ADVERTISEMENT

‘ನೀರು ಕೊಡಿ; ಇಲ್ಲವಾದರೆ ಕುರ್ಚಿ ಬಿಡಿ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 9:11 IST
Last Updated 12 ಸೆಪ್ಟೆಂಬರ್ 2017, 9:11 IST
ದಾವಣಗೆರೆಗೆ ಕುಡಿಯುವ ನೀರು ಪೂರೈಸುವಲ್ಲಿ ಮಹಾನಗರ ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಸೋಮವಾರ ಮಹಿಳಾ ಕಾರ್ಯಕರ್ತೆಯರು ಗಾಂಧಿ ವೃತ್ತದಲ್ಲಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ದಾವಣಗೆರೆಗೆ ಕುಡಿಯುವ ನೀರು ಪೂರೈಸುವಲ್ಲಿ ಮಹಾನಗರ ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಸೋಮವಾರ ಮಹಿಳಾ ಕಾರ್ಯಕರ್ತೆಯರು ಗಾಂಧಿ ವೃತ್ತದಲ್ಲಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.   

ದಾವಣಗೆರೆ: ನಗರಕ್ಕೆ ಕುಡಿಯುವ ನೀರು ಪೂರೈಸುವಲ್ಲಿ ಮಹಾನಗರ ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಸೋಮವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಕ್ಷದ ಕಚೇರಿಯಿಂದ ಆರಂಭವಾದ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು. ಕೈನಲ್ಲಿ ಕೊಡ ಹಿಡಿದ ಮಹಿಳೆಯರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ನೀರು ಕೊಡಿ, ಇಲ್ಲವಾದರೆ ಕುರ್ಚಿ ಬಿಟ್ಟುಕೊಡಿ’ ಎಂದು ಘೋಷಣೆ ಕೂಗಿದರು.

ಪಾಲಿಕೆ ಎದುರು ಜಮಾಯಿಸಿದ ಪ್ರತಿಭಟನಾಕಾರರು ಕಾಂಗ್ರೆಸ್‌ ಆಡಳಿತ ವೈಖರಿಯನ್ನು ಖಂಡಿಸಿದರು. ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್ ಮಾತನಾಡಿ, ’ಪಾಲಿಕೆಯ ನಿರ್ಲಕ್ಷ್ಯದಿಂದ ಹಿಂದೆಂದೂ ಕಾಣದಂತಹ ನೀರಿನ ಸಮಸ್ಯೆ ನಿರ್ಮಾಣವಾಗಿದೆ. ಕುಂದವಾಡ, ಟಿ.ವಿ ಸ್ಟೇಷನ್‌ ಕೆರೆಗಳಿಗೆ ನೀರು ತುಂಬಿಸಲು ಮೂಲಗಳಿದ್ದರೂ ಜನರಿಗೆ ನೀರು ಕೊಡದೆ ತೊಂದರೆ ನೀಡಲಾಗುತ್ತಿದೆ’ ಎಂದು ಆರೋಪಿಸಿದರು.

ಭದ್ರಾ ನಾಲೆಯ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಎಂದು ರೈತರ ಬೆಳೆಗಳಿಗೂ ನೀರು ನೀಡಲಿಲ್ಲ. ಪರಿಣಾಮ ರೈತರು ಕಳೆದ ಮೂರು ಬೆಳೆಗಳನ್ನೇ ಬೆಳೆಯಲಿಲ್ಲ. ಜನರ ತಾಳ್ಮೆ ಪರೀಕ್ಷಿಸಬೇಡಿ. ನೀರು ಕೊಡದಿದ್ದರೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ‘ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ತುಂಗಭದ್ರಾ ನದಿಯಿಂದ ನೀರು ದೊರೆಯುತ್ತಿದ್ದರೂ ಸಮರ್ಪಕವಾಗಿ ಬಳಸಿಕೊಂಡು ಪೂರೈಸಲು ಪಾಲಿಕೆಗೆ ಸಾಧ್ಯವಾಗುತ್ತಿಲ್ಲ. ಸುಸ್ಥಿಯಲ್ಲಿರುವ ಬೋರ್‌ವೆಲ್‌ಗಳನ್ನೂ ನಿರ್ವಹಣೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ₹ 200 ಕೋಟಿ ವಿಶೇಷ ಅನುದಾನ ತಂದು ಅಭಿವೃದ್ಧಿ ಕಾಮಗಾರಿ ನಡೆಸಲಾಗಿತ್ತು. ಆದರೆ ಕಾಂಗ್ರೆಸ್‌ ನಾಯಕರು ಇತರ ಕ್ಷೇತ್ರಗಳಿಗೆ ವೆಚ್ಚ ಮಾಡಬೇಕಾದ ಅನುದಾನವನ್ನು ಸಿಮೆಂಟ್‌ ರಸ್ತೆ ಕಾಮಗಾರಿಗೆ ಬಳಸುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದ ಜಾಧವ್‌, ಪಾಲಿಕೆಯಲ್ಲಿ ನಾಮಕಾವಸ್ತೆಯ ಆಡಳಿತ ನಡೆಯುತ್ತಿದ್ದು, ಸಚಿವರ ನಿವಾಸದಲ್ಲಿ ನೈಜ ಅಧಿಕಾರ ಚಲಾಯಿಸಲಾಗುತ್ತಿದೆ’ ಎಂದರು.

‘ಮಲಿನತೆಯಿಂದಾಗಿ ಡೆಂಗಿ ರೋಗ ಉಲ್ಭಣಗೊಂಡಿದ್ದು, ಹಲವರು ಮೃತಪಟ್ಟಿದ್ದಾರೆ. ಅಧಿಕಾರಿಗಳು ಹಂದಿ ಹಿಡಿಸಲು ಹೋದರೆ, ಕಾಂಗ್ರೆಸ್‌ ಮುಖಂಡರೇ ಹಲ್ಲೆ ನಡೆಸುತ್ತಾರೆ. ಇದುವರೆಗೂ ಎಷ್ಟು ಹಂದಿಗಳನ್ನು ಹಿಡಿಯಲಾಗಿದೆ ಎಂದು ಪಾಲಿಕೆ ಸಾರ್ವಜನಿಕರಿಗೆ ಲೆಕ್ಕ ನೀಡಬೇಕು ’ ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡರಾದ ಡಾ.ಎ.ಎಚ್‌.ಶಿವಯೋಗಿ ಸ್ವಾಮಿ, ಬಸವರಾಜ ನಾಯ್ಕ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಮ್ಮ, ಮಾಜಿ ಮೇಯರ್ ಸುಧಾ ಜಯರುದ್ರೇಶ್‌, ಸಹನಾ ರವಿ, ಪಾಲಿಕೆ ಸದಸ್ಯ ಡಿ.ಕೆ.ಕುಮಾರ್, ರಾಜನಹಳ್ಳಿ ಶಿವಕುಮಾರ್, ವೀರೇಶ್‌ ಪೈಲ್ವಾನ್‌, ಸುರೇಶ್‌, ರಮೇಶ್‌ ನಾಯ್ಕ, ನಾಗರಾಜ್‌, ಸಿದ್ದೇಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.