ADVERTISEMENT

ನೀರು ಬಂದು ರೈತರ ಬದುಕು ಹಸನಾಗಲಿ

ಹಿರಿಯೂರು: ವಾಣಿವಿಲಾಸ ಜಲಾಶಯಕ್ಕೆ ಪೂಜೆ ಸಲ್ಲಿಸಿದ ರಾಜಮಾತೆ ಪ್ರಮೋದಾದೇವಿ ಒಡೆಯರ್

​ಪ್ರಜಾವಾಣಿ ವಾರ್ತೆ
Published 29 ಮೇ 2017, 4:14 IST
Last Updated 29 ಮೇ 2017, 4:14 IST
ಹಿರಿಯೂರು:  ‘ಬಯಲುಸೀಮೆಯ ಜನ ನೀರಿನ ಬವಣೆಯಿಂದ ಕಂಗೆಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗಿ ರೈತರ ಸಂಕಷ್ಟಗಳು ಕೊನೆಯಾಗಿ, ಬದುಕು ಹಸನಾಗಲಿ ಎಂದು ದೇವತೆಗಳಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಮೈಸೂರು ಸಂಸ್ಥಾನದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದರು. 
 
ತಾಲ್ಲೂಕಿನ ವಾಣಿವಿಲಾಸ ಪುರದಲ್ಲಿಇರುವ ಕಣಿವೆ ಮಾರಮ್ಮ ದೇವಿಯ ಸನ್ನಿಧಿಯಲ್ಲಿ ವಾಣಿ ವಿಲಾಸ ಜಲಾಶಯಕ್ಕೆ ವರುಣನ ಕೃಪೆಯಿಂದ ನೀರು ಬರಲಿ ಎಂದು ಭಾನುವಾರ ಹಮ್ಮಿಕೊಂಡಿದ್ದ ಚಂಡಿಕಾ ಹೋಮ, ಮಹಾ ಪೂರ್ಣಾಹುತಿ, ಮಹಾ ಮಂಗಳಾರತಿ ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 
 
‘1981ರಲ್ಲಿ ನೀರಿಗಾಗಿ ರೈತರು ಹಮ್ಮಿಕೊಂಡಿದ್ದ ಪೂಜೆಯಲ್ಲಿ ಅನಿವಾರ್ಯ ಕಾರಣಗಳಿಂದ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ದೈವೀಕೃಪೆಯಿಂದ ಇಂದು ಅಂಥ ಅವಕಾಶ ಸಿಕ್ಕಿದೆ. ಪೂಜೆಯ ಫಲ ಎಲ್ಲರಿಗೂ ದೊರೆಯಲಿ’ ಎಂದು ಅವರು ಹಾರೈಸಿದರು. 
 
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ‘ನಮ್ಮ ವಂಶದ ಹಿರಿಯರು ಮಾಡಿರುವ ಕೆಲಸವನ್ನು ಜನ ಇನ್ನೂ ಮರೆತಿಲ್ಲ. ಉತ್ತಮ ಕೆಲಸ ಮಾಡಿದವರನ್ನು ಜನ ಸದಾ ಸ್ಮರಿಸುತ್ತಾರೆ ಎಂಬುದಕ್ಕೆ ಇದೇ ಉತ್ತಮ ನಿದರ್ಶನ. ಕಣಿವೆ ಮಾರಮ್ಮ ದೇವಿಯ ಅನುಗ್ರಹದಿಂದ ಜಲಾಶಯಕ್ಕೆ ನೀರು ಬಂದು ಜನರಿಗೆ ಸಿರಿ ಸಮೃದ್ಧಿ ಸಿಗಲಿ’ ಎಂದರು.
 
ಕೋಡಿಹಳ್ಳಿ ಸಂತೋಷ್ ಮಾತನಾಡಿ, ‘ಮೈಸೂರು ಒಡೆಯರ್ ರಾಜಮನೆತನದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇತ್ತು. ಒಡವೆ ಮಾರಿ ಕೆಆರ್ಎಸ್ ಕಟ್ಟಿದ್ದು ಒಡೆಯರ್ ಅವರ ಸಾರ್ವಜನಿಕ ಬದ್ಧತೆಗೆ ಸಾಕ್ಷಿಯಾಗಿದೆ.
 
ಇದೇ ರೀತಿಯ ಬದ್ಧತೆಯನ್ನು ಶಾಸಕ ಡಿ. ಸುಧಾಕರ್ ಅವರು 2009ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 5 ಟಿಎಂಸಿ ಅಡಿ ನೀರು ಮೀಸಲಿಡುವ ಆದೇಶ ಮಾಡಿಸುವ ಮೂಲಕ ತೋರಿಸಿದ್ದಾರೆ. ಶೇ 10ರಷ್ಟಿದ್ದ ನೀರಾವರಿ ಸೌಲಭ್ಯ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಂಡಾಗ ಶೇ 70ಕ್ಕೆ ಹೆಚ್ಚಲಿದೆ. 1.85 ಲಕ್ಷ ಎಕರೆ ನೀರಾವರಿಗೆ ಒಳಪಡಲಿದೆ. 225 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿದೆ’ ಎಂದು ಹೇಳಿದರು. 
 
ಅಧ್ಯಕ್ಷತೆ ವಹಿಸಿದ್ದ ಡಿ. ಸುಧಾಕರ್, ‘ಪೂಜೆಗೆ ರಾಜಮಾತೆ, ಮಹಾರಾಜರು ಬಂದಿರುವುದಕ್ಕೆ ಸಂತಸವಾಗಿದೆ. ಒಡೆಯರ್ ಮನೆತನಕ್ಕೆ ಈ ಭಾಗದ ಜನ ಸದಾ ಋಣಿಗಳು. ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಯಾರು ಎಷ್ಟೇ ಟೀಕೆ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮುಂದಿನ ವರ್ಷ ನೀರು ಬರುವುದು ನಿಶ್ಚಿತ. ಒಂಬತ್ತು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವುದಕ್ಕೆ ನನಗೆ ತೃಪ್ತಿ ಇದೆ’ ಎಂದರು.
 
ನಂಜಾವಧೂತ ಸ್ವಾಮೀಜಿ, ಕಬೀರಾನಂದ ಸ್ವಾಮೀಜಿ, ಮಂಗಳನಾಥಾನಂದ ಸ್ವಾಮೀಜಿ, ಸಚ್ಚಿದಾನಂದ ಸ್ವಾಮೀಜಿ, ಡಾ. ಭಾನುಪ್ರಕಾಶ್ ಶರ್ಮ, ಜಯಮ್ಮ ಬಾಲರಾಜು, ಸೌಭಾಗ್ಯ ಬಸವರಾಜನ್, ಎಂ.ಕೆ. ಶ್ರೀರಂಗಯ್ಯ, ಪಾಪಣ್ಣ, ಶಶಿಕಲಾ ಸುರೇಶ್ ಬಾಬು, ಗೀತಾ ನಾಗಕುಮಾರ್, ಚಂದ್ರಪ್ಪ, ಇ. ಮಂಜುನಾಥ್, ಎ. ಮಂಜುನಾಥ್, ಸುಂದರ್, ಹೊನ್ನಯ್ಯ, ಡಾ. ಪ್ರಕಾಶ್, ಹರ್ಷಿಣಿ ಸುಧಾಕರ್ ಅವರೂ ಹಾಜರಿದ್ದರು. ಬಿಇಒ ಹನುಮಂತರಾಯಪ್ಪ ಕಾರ್ಯಕ್ರಮ ನಿರೂಪಿಸಿದರು. ನಾಗೇಂದ್ರನಾಯ್ಕ ಸ್ವಾಗತಿಸಿದರು. ಮುಕುಂದ ವಂದಿಸಿದರು.
****
ಹಿರಿಯರು ಕಟ್ಟಿಸಿದ ಅಣೆಕಟ್ಟೆ ನೋಡುವುದೇ ಸೌಭಾಗ್ಯ: ಯದುವೀರ

‘ನಮ್ಮ ಪೂರ್ವಜರು ಜನರಿಗಾಗಿ ನಿರ್ಮಿಸಿದ ಅಣೆಕಟ್ಟೆಗಳನ್ನು ನೋಡುವುದೇ ನನಗೆ ಒಂದು ಸೌಭಾಗ್ಯ’ ಎಂದು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಜಲಾಶಯದಲ್ಲಿ ಗಂಗಾ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದಾಗ ಈ ರೀತಿ ಪ್ರತಿಕ್ರಿಯಿಸಿದರು.
 
‘ಒಡೆಯರು ಆರಂಭಿಸಿದ್ದ ಮೈಸೂರು ಬ್ಯಾಂಕ್ ಈಗ ನೆನಪು ಮಾತ್ರ. ಮೈಸೂರು ಸಂಸ್ಥಾನ ಆರಂಭಿಸಿರುವುದು ಕಣ್ಮರೆ ಆಗುತ್ತಿರುವುದಕ್ಕೆ ಬೇಸರವಾಗುತ್ತಿ
ಲ್ಲವೇ’ ಎಂಬ ಪ್ರಶ್ನೆಗೆ, ‘ಮೈಸೂರು ಸಂಸ್ಥಾನದ ಆಸ್ತಿಗಳನ್ನು ಉಳಿಸಿಕೊಳ್ಳಲು ಗಂಭೀರ ಯತ್ನ ಮಾಡುತ್ತೇವೆ. ನಮ್ಮ ಹಿರಿಯರಂತೆ ನನಗೂ ಜನಸೇವೆ ಮಾಡುವ ಅಂತಹ ಅವಕಾಶಗಳು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಉತ್ತರಿಸಿದರು.

‘ನೀವೂ ರಾಜಕೀಯ ಪ್ರವೇಶ ಮಾಡುತ್ತೀರಾ’ ಎಂಬ ಪ್ರಶ್ನೆಗೆ ‘ಸದ್ಯಕ್ಕೆ ಅಂತಹ ಯೋಚನೆ ಇಲ್ಲ. ಸಮಯ ಬಂದಾಗ ನೋಡೋಣ’ ಎಂದು ಪ್ರತಿಕ್ರಿಯಿಸಿದರು.

‘ವಾಣಿ ವಿಲಾಸ ಜಲಾಶಯ ನೋಡಬೇಕು ಎಂಬ ತುಡಿತವಿತ್ತು. ಈಗ ಕಾಲ ಕೂಡಿ ಬಂದಿದೆ. ಒಳ್ಳೆಯ ಮಳೆಯಾಗಿ, ನಾಡಿನ ಜನ ನೆಮ್ಮದಿಯಿಂದ ಬದುಕು ನಡೆಸಲಿ ಎಂಬುದಷ್ಟೇ ನನ್ನ ಬಯಕೆ’ ಎಂದು ಪ್ರಮೋದಾದೇವಿ ತಿಳಿಸಿದರು.
****
‘ಶತಮಾನದ ಹಿಂದಿನ ಗಾರೆ ಗಟ್ಟಿಯಾಗಿದೆ; 3 ವರ್ಷಗಳ ಹಿಂದಿನ ಸಿಮೆಂಟ್ ಕಿತ್ತು ಹೋಗಿದೆ..!’

‘ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ 110 ವರ್ಷಗಳ ಹಿಂದೆ ನಿರ್ಮಿಸಿದ್ದ ವಾಣಿ ವಿಲಾಸ ಜಲಾಶಯದ ಅಣೆಕಟ್ಟೆಯ ಗಾರೆ ಇನ್ನೂ ಗಟ್ಟಿಯಾಗಿದೆ. ಮೂರು ವರ್ಷಗಳ ಹಿಂದೆ ದುರಸ್ತಿಗಾಗಿ ಅಲ್ಲಲ್ಲಿ ಹಾಕಿದ್ದ ಸಿಮೆಂಟ್ ಕಿತ್ತು ಹೋಗಿದೆ’ ಎಂದು ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ವಿಷಾದಿಸಿದರು.

‘ಈ ಭಾಗದಲ್ಲಿ ಒಡೆಯರ್‌ ನಿರ್ಮಿಸಿರುವ ವಾಣಿ ವಿಲಾಸ ಜಲಾಶಯ, ಗಾಯತ್ರಿ ಜಲಾಶಯ, ರಾಣಿಕೆರೆ ಜಲಾಶಯಗಳು ಅವರ ಬದ್ಧತೆ, ಇಚ್ಛಾಶಕ್ತಿಯನ್ನು ತೋರಿಸುತ್ತದೆ. ಕೆ.ಆರ್.ಎಸ್. ಜಲಾಶಯ ಇಲ್ಲದಿದ್ದರೆ ಬೆಂಗಳೂರಿಗೆ ಕುಡಿಯುವ ನೀರನ್ನು ಎಲ್ಲಿಂದ ಪೂರೈಸಬೇಕಿತ್ತು?. ಈಗ ನಮ್ಮನ್ನು ಆಳುವವರು ತಮ್ಮ ಕುಟುಂಬಗಳ ಬಗ್ಗೆ ಮಾತ್ರ ನೋಡಿಕೊಳ್ಳುತ್ತಿದ್ದಾರೆ’ ಎಂದು ವಿಷಾದಿಸಿದರು.

‘ವಾಣಿ ವಿಲಾಸ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಒಡ್ಡುಗಳನ್ನು ನಿರ್ಮಿಸಿರುವುದರಿಂದ ಜಲಾಶಯಕ್ಕೆ ನೀರು ಹರಿದು ಬರುತ್ತಿಲ್ಲ. ಜಲಾಶಯಕ್ಕೆ ನೀರು ತರದೆ ಚಳ್ಳಕೆರೆ, ಚಿತ್ರದುರ್ಗಕ್ಕೆ ಹಾಗೂ ಕೇಂದ್ರದ ಯೋಜನೆಗಳಿಗೆ ನೀರು ಕೊಡುವುದು ಹಾಸ್ಯಾಸ್ಪದವಾಗಿದೆ’ ಎಂದು ಸ್ವಾಮೀಜಿ ಟೀಕಿಸಿದರು.

‘ವಿ.ವಿ ಜಲಾಶಯಕ್ಕೆ ನೀರು ತುಂಬಿಸಿದರೆ ಮೂರು ಜಿಲ್ಲೆಗಳನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಬಹುದು. ಆರು ತಿಂಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವುದಾಗಿ ಸರ್ಕಾರ ಹೇಳುತ್ತಿದೆ. ಇನ್ನೂ ಒಂದು ಕಿ.ಮೀ ಸುರಂಗ ಕಾಮಗಾರಿ ಬಾಕಿ ಇದೆ. ದಿನಕ್ಕೆ ಕೇವಲ ಒಂದು ಮೀಟರ್ ಕಾಮಗಾರಿ ನಡೆಯುತ್ತಿದೆ. ಸುಳ್ಳು ಹೇಳುವ ಮೂಲಕ ಜನರನ್ನು ದಿಕ್ಕು ತಪ್ಪಿಸುವುದು ಬೇಡ.
 
ಈ ಭಾಗದ ಜನ ಪಕ್ಷಾತೀತವಾಗಿ ಹೋರಾಟ ನಡೆಸಿ ಎರಡು– ಮೂರು ವರ್ಷಗಳಲ್ಲಿ ನೀರು ತರುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕು. 20 ವರ್ಷಗಳ ಹಿಂದೆ ₹ 1,200 ಕೋಟಿ ಇದ್ದ ಕಾಮಗಾರಿ ವೆಚ್ಚ ಈಗ ₹12,000 ಕೋಟಿಗೆ ಏರಿದೆ. ಇದು  ಮತ್ತಷ್ಟು ಹೆಚ್ಚುವುದು ಬೇಡ’ ಎಂದು ಹೇಳಿದರು.
ಚಿತ್ರದುರ್ಗದ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಆದಿಚುಂಚನಗಿರಿ ಕ್ಷೇತ್ರದ ಮಂಗಳಾನಂದನಾಥ ಸ್ವಾಮೀಜಿ ಮಾತನಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.