ADVERTISEMENT

ಪುರಾಣಗಳಿಂದ ಬಾಯಿ ಮುಚ್ಚಿಸುವ ಕೆಲಸ

ದಾವಣಗೆರೆ: ‘ತತ್ವ ತರ್ಕ’ ಕಾರ್ಯಕ್ರಮದಲ್ಲಿ ಚಂಪಾ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 4:30 IST
Last Updated 28 ಮಾರ್ಚ್ 2017, 4:30 IST
ದಾವಣಗೆರೆ: ‘ಪುರಾಣಗಳು ಜನರ ಬಾಯಿ ಮುಚ್ಚುವ ಕೆಲಸ ಮಾಡಿವೆ ಹೊರತು ಸ್ವಂತ ವಿಚಾರಗಳಿಗೆ ಅವಕಾಶ ಕೊಟ್ಟಿಲ್ಲ’ ಎಂದು ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್ ಅಭಿಪ್ರಾಯಪಟ್ಟರು.
 
ನಗರದ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ‘ತತ್ವ ತರ್ಕ’ ಸಂಘಟನೆ ಉದ್ಘಾಟಿಸಿ ಅವರು ಮಾತನಾಡಿದರು.
 
ಪೂರ್ವಜರು ಕಪೋಕಲ್ಪಿತ ಸಂಗತಿ ಗಳನ್ನು ಸೃಷ್ಟಿಸಿದ್ದಾರೆ. ಅವರ ವಿಚಾರ ಗಳನ್ನು ಇಂದಿಗೂ ಪುರಾಣ ರೂಪದಲ್ಲಿ ವ್ಯಕ್ತಪಡಿಸಲಾಗುತ್ತಿದೆ. ಆದರೆ, ಇವು ಸಮಾಜದ ಸುಧಾರಣೆಗೆ ಪ್ರೇರಕವಾಗದೆ ಕಟ್ಟಿಹಾಕುವಂತಹ ಸಿದ್ಧಾಂತ ಹೊಂದಿವೆ. ಜನರು ದೇವರು, ಪುರಾಣ, ಪಾಪ–ಪುಣ್ಯ ಹಾಗೂ ಪವಾಡಗಳಂತಹ ಭ್ರಮೆಗಳಿಂದ ಹೊರ ಬರಬೇಕು ಎಂದು ಸಲಹೆ ನೀಡಿದರು.
 
ತರ್ಕ ಎನ್ನುವುದು ಜ್ಞಾನದ ಹಾಗೂ ಅರಿವಿನ ಗಳಿಗೆ. ಪ್ರಶ್ನೆ ಹುಟ್ಟು ಹಾಕುವ ಮೂಲಕ ವ್ಯಕ್ತಿತ್ವ ವಿಕಾಸನ ಹೆಚ್ಚಿಸುತ್ತದೆ. ವೈಜ್ಞಾನಿಕ ಮತ್ತು ವೈಚಾರಿಕತೆಯ ಮನೋಭಾವ ಬೆಳೆಸುತ್ತದೆ. ತತ್ವ ಮತ್ತು ತರ್ಕ ಕ್ರಮಬದ್ಧವಾಗಿದ್ದರೆ ಮಾನವೀ ಯತೆ ಮೌಲ್ಯಗಳನ್ನು ಗಟ್ಟಿಗೊಳಿ ಸಬಹುದು ಎಂದು ಅವರು ಹೇಳಿದರು.
 
ಸಮಾಜದ ಮೌಢ್ಯತೆಗಳನ್ನು ಶಮನಗೊಳಿಸುವ ಕಾರ್ಯ ವಾಗಬೇಕಾಗಿದೆ. ಸರ್ವರಿಗೂ ಸಮಾನತೆಯ ಶಿಕ್ಷಣ ದೊರಕಬೇಕು. ಗುರು–ಶಿಷ್ಯರಲ್ಲಿ ಆತ್ಮೀಯತೆ ಗುಣಗಳು ಬೆಳೆದು ಪರಸ್ಪರಾವಲಂಬಿಗಳಾಗಬೇಕು. ವೈಚಾರಿಕತೆ ನೆಲೆಗಟ್ಟಿನ ಚಿಂತನೆಗಳು ಪ್ರಬಲಗೊಳ್ಳಬೇಕು ಎಂದು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಣೇಹಳ್ಳಿಮಠದ ಪಂಡಿತಾರಧ್ಯ ಸ್ವಾಮೀಜಿ, ತತ್ವ, ಪವಾಡ, ಭವಿಷ್ಯ ಹೇಳುತ್ತ ಜನರಲ್ಲಿ ಮೌಢ್ಯ ತುಂಬುವರರ ವಿರುದ್ಧ ಜಾಗೃತಿಗೊಳ್ಳಬೇಕು’ ಎಂದರು.
 
ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಇನ್ನೊಬ್ಬರನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾನೆ. ಇಲ್ಲ–ಸಲ್ಲದ ಆಚಾರ, ವಿಚಾರಗಳನ್ನು ಹೇಳಿ ಸಮಾಜಿಕ ಮೌಲ್ಯಗಳ ಕುಸಿತಕ್ಕೆ ಪ್ರೇರಣೆಯಾಗುತ್ತಿದ್ದಾನೆ ಇಂತಹ ಮೂಢನಂಬಿಕೆಗಳ ಬಿತ್ತುವ ವರ್ಗವನ್ನು ವಿರೋಧಿಸಬೇಕು ಎಂದು ಅವರು ಹೇಳಿದರು.
 
ತತ್ವ ಮತ್ತು ತರ್ಕ ಬೇರೆಯಾಗಿದ್ದರೂ ಒಂದೇ ನಾಣ್ಯದ ಎರಡು ಮುಖ. ಇವೆರಡರ ಸಮನ್ವಯದಿಂದ ಮನುಷ್ಯನಿಗೆ ಶಕ್ತಿ ಬರುತ್ತದೆ. ತಾರ್ಕಿಕ ನೆಲೆಗಟ್ಟು ಅಗತ್ಯವಾಗಿದೆ ಎಂದರು.
 
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘಟನೆ ಸಂಸ್ಥಾಪಕ, ಸಂಘಟನಾ ಕಾರ್ಯದರ್ಶಿ ಎ.ಎಚ್.ಸಾಗರ್‌, ‘ಜನರಲ್ಲಿ ವೈಚಾರಿಕ, ಪ್ರಶ್ನಾರ್ಥಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಸಂಘಟನೆ ಕೆಲಸ ಮಾಡಲಿದೆ.
 
ಶಾಲಾ–ಕಾಲೇಜುಗಳಲ್ಲಿ ಅಭಿಯಾನ ಆರಂಭಿಸಿ ಶಿಕ್ಷಣ ಪದ್ಧತಿ, ಜಾತೀಯತೆ, ಹೆಣ್ಣು ಮಕ್ಕಳ ಶೋಷಣೆ ವಿರುದ್ಧ ವಿಚಾರ ಸಂಕಿರಣಗಳನ್ನು ನಡೆಸಿ ಅವರಲ್ಲಿ ಹೋರಾಟದ ಮನೋಭಾವ ಬೆಳೆಸಲಾಗುವುದು’ ಎಂದು  ವಿವರಿಸಿದರು.
 
ನಿವೃತ್ತ ಪ್ರಾಂಶುಪಾಲರಾದ ಪ್ರೊ.ಭಿಕ್ಷಾವರ್ತಿಮಠ, ಪ್ರೊ.ಕೆ.ಎಸ್. ಈಶ್ವರಪ್ಪ, ಎವಿಕೆ ಕಾಲೇಜಿನ ಪ್ರೊ.ಪಿ.ಎಂ.ಅನುರಾಧ, ಬಸವರಾಜ್ ಬಣಕಾರ್ ಮಾತನಾಡಿದರು. ಪ್ರಾಂಶುಪಾಲ ಪ್ರೊ.ಪ್ರಕಾಶ್ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.