ADVERTISEMENT

ಪ್ರಕೃತಿ ಮಡಿಲಿಗೆ ಹಾಕಲು ಸೀಡ್‌ಬಾಲ್‌ ಸಿದ್ಧತೆ

‘ನಿಸರ್ಗದೊಡನೆ ಜನರ ಬೆಸುಗೆ, ನೀರಿಗಾಗಿ ಅರಣ್ಯ’ ಅಭಿಯಾನ

ಎಲ್‌.ಮಂಜುನಾಥ್‌.ಸಾಸಲು, ದೊಡ್ಡಬಳ್ಳಾಪುರ ತಾ.
Published 29 ಮೇ 2017, 4:07 IST
Last Updated 29 ಮೇ 2017, 4:07 IST
ಪ್ರಕೃತಿ ಮಡಿಲಿಗೆ ಹಾಕಲು ಸೀಡ್‌ಬಾಲ್‌ ಸಿದ್ಧತೆ
ಪ್ರಕೃತಿ ಮಡಿಲಿಗೆ ಹಾಕಲು ಸೀಡ್‌ಬಾಲ್‌ ಸಿದ್ಧತೆ   
ದಾವಣಗೆರೆ: ಮುಂಜಾನೆಯ ವಾಯುವಿಹಾರಕ್ಕೆ ಬಂದಿದ್ದ ಮಹಿಳೆಯರ, ಪುರುಷರ ಹಾಗೂ ವಿದ್ಯಾರ್ಥಿಗಳ ದೊಡ್ಡ ಬಳಗವೇ ಅಲ್ಲಿ ನೆರೆದಿತ್ತು.
 
ಪರಿಸರಕ್ಕೆ ನಾವೇನಾದರೂ ಕೊಡುಗೆ ನೀಡಬೇಕು ಎಂಬ ಭಾವನೆಯಿಂದ ಬಂದಿದ್ದ ಅವರು, ಸಾಲಾಗಿ ಕುಳಿತು ಕೆಮ್ಮಣ್ಣಿನ ಕೆಸರಿನಲ್ಲಿ ಶ್ರೀಗಂಧ, ಹೊಂಗೆ ಹಾಗೂ ಹುಣಸೆ ಬೀಜಗಳನ್ನಿಟ್ಟು ಹದವಾಗಿ ಉಂಡೆ ಮಾಡಿದರು.
 
ನೋಡು ನೋಡುತ್ತಿದ್ದಂತೆ 300ಕ್ಕೂ ಹೆಚ್ಚು ಜನರು ಈ ಕಾರ್ಯಕ್ಕೆ ಕೈಜೋಡಿಸಿದರು. ಬೆಳಿಗ್ಗೆ 9ಗಂಟೆಯೊಳಗೆ 8 ಸಾವಿರಕ್ಕೂ ಅಧಿಕ ಮಣ್ಣಿನ ಬೀಜದ ಉಂಡೆಗಳು ತಯಾರಾದವು. ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಈ ದೃಶ್ಯ ಕಂಡು ಬಂದಿತ್ತು.
 
‘ನಿಸರ್ಗದೊಡನೆ ಜನರ ಬೆಸುಗೆ’ ಹಾಗೂ ‘ನೀರಿಗಾಗಿ ಅರಣ್ಯ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಅಭಿಯಾನದಲ್ಲಿ  ಶ್ರೀ ಪತಂಜಲಿ ಯೋಗ ಫೌಂಡೇಷನ್‌, ಡಿಸಿಸಿ ವಾಕರ್ಸ್‌ ಫೋರಂ, ‘ಅರಿವು’ ಬಳಗದ ಸದಸ್ಯರು ಹಾಗೂ ವಿಶ್ವಚೇತನ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಪರಿಸರ ಪೋಷಣೆ ಕಾರ್ಯಕ್ಕೆ ಕೈ ಜೋಡಿಸಿದರು.
 
‘ಪರಿಸರ ನಾಶದಿಂದಾಗಿ ಮಳೆಯ ಪ್ರಮಾಣ ತುಂಬಾ ಕಡಿಮೆಯಾಗಿದೆ. ‘ನಿಸರ್ಗದೊಡನೆ ಜನರ ಬೆಸುಗೆ’ ಎಂಬ ಧೈಯದೊಂದಿಗೆ ಪ್ರತಿ ತಾಲ್ಲೂಕಿನಲ್ಲಿ ಮಣ್ಣಿನ ಬೀಜದ ಉಂಡೆ ತಯಾರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.
 
ಮೊದಲ ದಿನವೇ ಸಾರ್ವಜನಿಕರು ಆಸಕ್ತಿಯಿಂದ ಈ ಕಾರ್ಯದಲ್ಲಿ ಭಾಗವಹಿಸಿ ಸುಮಾರು ಎಂಟು ಸಾವಿರ ಬೀಜದ ಉಂಡೆಗಳನ್ನು ತಯಾರಿಸಿದ್ದಾರೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ ವಿಭಾಗ) ಎನ್‌.ಬಿ.ಮಂಜುನಾಥ ಮಾಹಿತಿ ನೀಡಿದರು.
 
ಶಾಲಾ ಮಕ್ಕಳಲ್ಲಿಯೂ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮೇ 29ರಿಂದ ಶಾಲೆಗಳಿಗೂ ಕೆಸರು ಹಾಗೂ ವೃಕ್ಷದ ಬೀಜಗಳನ್ನು ನೀಡಿ, ಮಕ್ಕಳಿಂದ ಸೀಡ್‌ಬಾಲ್‌ ಮಾಡಿಸಲಾಗುವುದು. ಇದರೊಂದಿಗೆ ನಗರದ ಪ್ರಮುಖ ಉದ್ಯಾನಗಳಲ್ಲಿಯೂ ಈ ಅಭಿಯಾನ ಹಮ್ಮಿಕೊಳ್ಳಲಾಗುವುದು’ ಎನ್ನುತ್ತಾರೆ ಅವರು. 
 
‘ಇದೊಂದು ಉತ್ತಮ ಅಭಿಯಾನ. ಶಾಲೆ ವಿದ್ಯಾರ್ಥಿಗಳಲ್ಲಿಯೂ ಈ ಬಗ್ಗೆ ಅರಿವು ಮೂಡಿಸುವ ಅವಶ್ಯವಿದೆ’ ಎಂದು ಸೀಡ್‌ಬಾಲ್‌ ತಯಾರಿಕೆಯಲ್ಲಿ ಭಾಗವಹಿಸಿದ್ದ ಅರಿವು ಬಳಗದ ಅಧ್ಯಕ್ಷ ಡಾ.ವಿಶ್ವನಾಥ ಹೇಳಿದರು.
 
ನಗರೀಕರಣದಿಂದಾಗಿ ಗಿಡ–ಮರಗಳು ನಾಶವಾಗಿವೆ. ಆಮ್ಲಜನಕದ ಕೊರತೆಯಾಗಿ, ಇಂಗಾಲ ಆಮ್ಲವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗಿದೆ. ಇದರ ನಿಯಂತ್ರಣಕ್ಕೆ ಎಲ್ಲರೂ ಪರಿಸರ ಸಂರಕ್ಷಣೆಗೆ ಕೈ ಜೋಡಿಸಲೇಬೇಕು ಎಂದು ಅಭಿಯಾನ
ದಲ್ಲಿ ಭಾಗವಹಿಸಿದ್ದ ಶ್ರೀ ಪತಂಜಲಿ ಯೋಗ ಫೌಂಡೇಷನ್‌ ಅಧ್ಯಕ್ಷ ಮಂಜುನಾಥ ಮನವಿ ಮಾಡಿದರು. 
 
ಪ್ರಗತಿಯ ಹೆಸರಿನಲ್ಲಿ ನಾಶವಾಗಿರುವ ಮರ ಗಿಡಗಳನ್ನು ಮತ್ತೆ ಮರು ಸೃಷ್ಟಿಸುವ ಹೊಣೆ ಎಲ್ಲರ ಮೇಲಿದೆ ಎಂದು ಡಿಸಿಸಿ ವಾಕರ್ಸ್‌ ಫೋರಂ ಅಧ್ಯಕ್ಷ ಬಿ.ಒ.ಮಲ್ಲಿಕಾರ್ಜುನ ಹೇಳಿದರು.
 
ಅರಣ್ಯದಲ್ಲಿ 100 ಸೀಡ್‌ಬಾಲ್‌ಗಳನ್ನು ಎಸೆದರೆ, ಕನಿಷ್ಠ 40 ಉಂಡೆಗಳಲ್ಲಿನ ಬೀಜಗಳು ಮೊಳಕೆ ಒಡೆದು, ಸಸಿಯಾಗುತ್ತವೆ ಎಂದು ಡಾ.ಸುದರ್ಶನ್‌ ದನಿ ಗೂಡಿಸಿದರು.
****
ಒಂದು ಲಕ್ಷ ಸೀಡ್‌ಬಾಲ್‌ ತಯಾರಿಸುವ ಗುರಿ ಇದೆ. ಪ್ರತಿ ಭಾನುವಾರ ಕಚೇರಿ ಆವರಣದಲ್ಲಿ ಈ ಕಾರ್ಯ ಹಮ್ಮಿಕೊಳ್ಳಲಾಗುವುದು
ಎನ್‌.ಬಿ.ಮಂಜುನಾಥ, ಉಪ ಅರಣ್ಯ ಸಂರಕ್ಷಣಾಧಿಕಾರಿ
****
ಸೀಡ್‌ಬಾಲ್‌ಗಳನ್ನು ಅರಣ್ಯದಲ್ಲಿ ಎಸೆದರೆ, ನಾವು ದೊಡ್ಡವರಾಗುತ್ತಿದ್ದಂತೆ ಯಥೇಚ್ಛವಾಗಿ ಅರಣ್ಯ ಬೆಳೆದು ಉತ್ತಮ ಮಳೆ, ಗಾಳಿ ಬರುತ್ತದೆ.
ಪ್ರಜ್ವಲ್‌, ಮೋಹನ್‌, ವಿದ್ಯಾರ್ಥಿಗಳು, ವಿಶ್ವಚೇತನ ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.