ADVERTISEMENT

ಬಾಹ್ಯ ಸಂಭ್ರಮಕ್ಕಿಂತ ಆಂತರಿಕ ಆಚರಣೆಯಾಗಲಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 9:05 IST
Last Updated 24 ಡಿಸೆಂಬರ್ 2017, 9:05 IST

ದಾವಣಗೆರೆ: ಇಂದು ಎಲ್ಲೆಡೆ ಕ್ರಿಸ್‌ಮಸ್‌ ಹಬ್ಬದ ಸಂಭ್ರಮ. ಇದು ಕ್ರೈಸ್ತ ಸಮುದಾಯದ ಜನರ ಪ್ರಮುಖ ಹಬ್ಬ. ಕ್ರೈಸ್ತರು ಒಳಗೊಂಡಂತೆ ಎಲ್ಲಾ ಸಮುದಾಯದ ಜನತೆಗೂ ಶಾಂತಿ, ಪ್ರೀತಿ, ಕರುಣೆ, ಏಕತೆ, ಸೌಹಾರ್ದತೆ ಹಾಗೂ ಸಮಾನತೆಯ ಸಂದೇಶ ಸಾರುವ ಹಬ್ಬವಾಗಿದೆ.

ಹಬ್ಬದ ಆಚರಣೆಗೆ ಬಡವ, ಬಲ್ಲಿದ ಎಂಬ ಭೇದವಿಲ್ಲ. ಈ ಹಬ್ಬವು ಕೇವಲ ಮನೆ ಹಾಗೂ ಚರ್ಚೆಗೆ ಸೀಮಿತವಾಗಿಲ್ಲ. ಎಲ್ಲ ಕ್ರೈಸ್ತರ ಶಾಲೆ, ಕಾಲೇಜು, ಕಚೇರಿಗಳಲ್ಲಿಯೂ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ.

ಆಂತರಿಕ ಆಚರಣೆಯಾಗಲಿ: ಹಬ್ಬದ ಮುನ್ನವೇ ಕ್ರೈಸ್ತರು ಮನೆಗಳಿಗೆ ಸುಣ್ಣ, ಬಣ್ಣ ಬಳೆದು ವಿದ್ಯುತ್‌ ದೀಪಗಳಿಂದ ಅಲಂಕರಿಸುತ್ತಾರೆ. ಜತೆಗೆ ಕ್ರಿಸ್ಮಸ್‌ ಟ್ರೀ, ಬಲೂನ್‌, ಸಾಂಟಾಕ್ಲಾಸ್‌ಗಳಿಂದ ಸಿಂಗರಿಸುತ್ತಾರೆ. ಯೇಸುವಿನ ಜನನ ಸಾರುವ ಅಲಂಕಾರಿಕ ವಿದ್ಯುತ್‌ ದೀಪದ ನಕ್ಷತ್ರ ಬುಟ್ಟಿಗಳೂ ಎಲ್ಲರ ಮನೆಯ ಮುಂದೆ ಕಂಗೊಳಿಸುತ್ತವೆ. ಕೆಲವರು ಆತ್ಮೀಯರಿಗೆ ಗ್ರೀಟಿಂಗ್‌ ಕಾರ್ಡ್‌ ನೀಡುವ ಮೂಲಕ ‘ಹ್ಯಾಪಿ ಕ್ರಿಸ್ಮಸ್‌’ ಎಂದು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.

ADVERTISEMENT

ಕ್ರಿಸ್ಮಸ್‌ ಹಬ್ಬವನ್ನು ಕೇವಲ ಬಾಹ್ಯ ಅಲಂಕಾರದಿಂದ ಆಚರಿಸಿದರೆ ಸಾಲದು. ಮನದಲ್ಲಿಯೇ ಗೋದಲಿ ನಿರ್ಮಿಸಿ, ಬಾಲು ಏಸು ಪ್ರತಿಷ್ಠಾಪಿಸುವ ಮೂಲಕ ಆಂತರಿಕವಾಗಿ ಹಬ್ಬ ಆಚರಿಸಬೇಕು. ಆಗ ಮಾತ್ರ ದೇವಸುತನ ಪ್ರೀತಿಗೆ ಎಲ್ಲರೂ ಪಾತ್ರರಾಗುತ್ತಾರೆ.

ನವೆಂಬರ್‌ನಿಂದಲೇ ತಯಾರಿ: ನ.25ರಿಂದಲೇ ಕ್ರಿಸ್ಮಸ್‌ ಹಬ್ಬದ ತಯಾರಿ ನಡೆದಿದೆ. ಚರ್ಚ್‌ ಆವರಣದಲ್ಲಿ ಈಗಾಗಲೇ ವಿಶೇಷವಾಗಿ ಗೋದಲಿ (ದನದ ಕೊಟ್ಟಿಗೆ) ನಿರ್ಮಿಸಿ, ಬಾಲ ಏಸು ಪ್ರತಿಷ್ಠಾಪಿಸಲಾಗಿದೆ. ಗೋದಲಿಯೇ ಈ ಹಬ್ಬದ ಪ್ರಮುಖ ಆಕರ್ಷಣೆ. ಏಸುಕ್ರಿಸ್ತ ದೇವ ಕುಮಾರನು ಬಡವನ ಮನೆಯ ದನದ ಕೊಟ್ಟಿಗೆಯಲ್ಲಿ ಮಾನವ ಅವತಾರದಲ್ಲಿ ಜನಿಸುತ್ತಾನೆ.

ಬಡವರ ಉದ್ಧಾರಕ್ಕಾಗಿಯೇ ಏಸು ಗೋದಲಿಯಲ್ಲಿ ಜನಿಸಿದ್ದನು ಎಂಬ ನಂಬಿಕೆ ಏಸು ಕ್ರಿಸ್ತರಲ್ಲಿ ಇಂದಿಗೂ ಇದೆ. ಹೀಗಾಗಿ ಹಬ್ಬದ ಅಂಗವಾಗಿ ಈಗಾಗಲೇ ಕ್ರೈಸ್ತರ ಮನೆಗಳಲ್ಲಿ ಹಾಗೂ ಚರ್ಚ್‌ಗಳಲ್ಲಿ ವಿಶೇಷವಾಗಿ ಗೋದಲಿ ನಿರ್ಮಿಸಿ, ವಿದ್ಯುತ್‌ ದೀಪ ಹಾಗೂ ಬಗೆ ಬಗೆಯ ಹೂವುಗಳಿಂದ ಅಲಂಕಾರ ಮಾಡಿ, ಏಸು ಕುಮಾರನನ್ನು ಪ್ರತಿಷ್ಠಾಪಿಸಲಾಗಿದೆ.

ಸಂತ ತೋಮಸ್‌ ಚರ್ಚ್‌ನಲ್ಲಿ ಭಾನುವಾರ ಮಧ್ಯರಾತ್ರಿ 12ಕ್ಕೆ ಗೋದಲಿಯಲ್ಲಿ ಬಾಲ ಏಸುವಿನ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ನಂತರ ಸಾಂಭ್ರಮಿಕ ಬಲಿ ಪೂಜೆಗಳು ನಡೆದವು. ಜತೆಗೆ ವಿಶೇಷ ಪ್ರಾರ್ಥನೆಗಳನ್ನೂ ಮಾಡಲಾಯಿತು. ಡಿ.25ರ ಬೆಳಿಗ್ಗೆ 8.30ರಿಂದ 11ರ ವರೆಗೆ ಪುನಃ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತವೆ.

ಹರಿಹರದಲ್ಲಿನ ಆರೋಗ್ಯಮಾತೆ ಚರ್ಚ್‌, ಹರಪನಹಳ್ಳಿಯಲ್ಲಿನ ನಿರ್ಮಲಾ ಮಾತೆ ಚರ್ಚ್‌, ಚನ್ನಗಿರಿಯಲ್ಲಿ ಸಂತ ಪ್ರಾನ್ಸಿಸ್‌ ಜೇವಿರ್‌, ಹೊನ್ನಾಳಿಯಲ್ಲಿ ರಕ್ಷಕ ಏಸು ಬಾಲರ ದೇವಾಲಯ.. ಹೀಗೆ ಜಿಲ್ಲೆಯ ಎಲ್ಲಾ ಚರ್ಚ್‌ಗಳಲ್ಲಿ ಕ್ರಿಸ್ಮಸ್‌ ಪ್ರಯುಕ್ತ ಪ್ರಾರ್ಥನೆಗಳು ನಡೆಯುತ್ತವೆ. ಕ್ರಿಸ್ಮಸ್‌ ಹಬ್ಬದ ದಿನದಂದು ಚರ್ಚ್‌ಗಳಿಗೆ ಬರುವವರು ಗೋದಲಿಯಲ್ಲಿನ ಬಾಲ ಏಸುವಿನ ಮೂರ್ತಿ ನೋಡಿ, ಪ್ರಾರ್ಥನೆ ಸಲ್ಲಿಸಿ ತೆರಳುತ್ತಾರೆ.

ಕ್ರೈಸ್ತರ ಧಾರ್ಮಿಕ ಕೇಂದ್ರ

1937ರಲ್ಲಿ ನಗರದ ಪಿಜೆ ಬಡಾವಣೆಯಲ್ಲಿನ ಸಂತ ತೋಮಸ್‌ ಚರ್ಚ್‌ ಪ್ರದೇಶವು ಕ್ರೈಸ್ತರ ಧಾರ್ಮಿಕ ಕೇಂದ್ರವಾಗಿತ್ತು. ನಂತರ ದಿನಗಳಲ್ಲಿ ನಗರದ ಪ್ರಮುಖ ಚರ್ಚ್ ಆಗಿ ಪರಿವರ್ತನೆ ಆಯಿತು. ನಿತ್ಯ ಬೆಳಿಗ್ಗೆ 7ಕ್ಕೆ ಅಥವಾ ಸಂಜೆ 7ಕ್ಕೆ ವಿಶೇಷ ಪ್ರಾರ್ಥನೆ ನಡೆಯುತ್ತದೆ.

ಮೇಣದಬತ್ತಿ ನಮನ...

ನಗರದೆಲ್ಲೆಡೆ ಸೋಮವಾರ ಕ್ರಿಸ್ಮಸ್‌ ಹಬ್ಬದ ಸಡಗರ. ಕ್ರೀಶ್ಚಿಯನ್‌ ಸಮುದಾಯದವರು ಒಳಗೊಂಡಂತೆ ಇತರೆ ಸಮುದಾಯದ ಜನರು ಹೊಸ ಬಟ್ಟೆ ತೊಟ್ಟು ಚರ್ಚ್‌ಗಳಿಗೆ ತೆರಳಿ ಮೇಣದ ಬತ್ತಿ ಹಚ್ಚಿ ಏಸುವಿಗೆ ನಮಿಸುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಕ್ರೈಸ್ತರು ಮನೆ ಹಾಗೂ ಕಚೇರಿಗಳಲ್ಲಿ ಸಿಹಿ ಹಂಚಿ, ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.