ADVERTISEMENT

ಬಿಸಿಲ ತಾಪದಂತೆ ಏರುತ್ತಿದೆ ತರಕಾರಿ ಬೆಲೆ

ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಪ್ರಮಾಣದಲ್ಲಿಯೂ ಕುಸಿತ, ಗ್ರಾಹಕರಿಗೆ ಹೊರೆ

ಎನ್.ನಾಗರಾಜ್
Published 6 ಮಾರ್ಚ್ 2017, 5:56 IST
Last Updated 6 ಮಾರ್ಚ್ 2017, 5:56 IST
ಬಿಸಿಲ ತಾಪದಂತೆ ಏರುತ್ತಿದೆ ತರಕಾರಿ ಬೆಲೆ
ಬಿಸಿಲ ತಾಪದಂತೆ ಏರುತ್ತಿದೆ ತರಕಾರಿ ಬೆಲೆ   
ದಾವಣಗೆರೆ: ಜಿಲ್ಲೆಯಲ್ಲಿ ಬಿಸಿಲ ಧಗೆಯಂತೆ ತರಕಾರಿ ದರವೂ ನಿಧನಿಧಾನವಾಗಿ ಏರುತ್ತಿದೆ. ವಾರದಿಂದ ವಾರಕ್ಕೆ ತರಕಾರಿಗಳ ದರ ಏರುಮುಖವಾಗುತ್ತಿದ್ದು, ನಾಗರಿಕರ ಜೇಬು ಕರಗುತ್ತಿದೆ. 
 
ಮಾಗಿಯ ಚಳಿ ಕಳೆದ ನಂತರ ತರಕಾರಿ ಬೆಲೆ ತುಸು ಅಗ್ಗವಾಗುವುದು ವಾಡಿಕೆ. ಆದರೆ, ಈ ಬಾರಿ ಮಾರುಕಟ್ಟೆಗೆ ಪೂರೈಕೆ ಪ್ರಮಾಣವೂ ಕಡಿಮೆಯಾಗುತ್ತಿದ್ದು, ಬೆಲೆ ಇಳಿಯುವ ಲಕ್ಷಣ ಗೋಚರಿಸುತ್ತಿಲ್ಲ.
 
‘ಬರ ಹೆಚ್ಚಿರುವುದರಿಂದ ಕೊಳವೆಬಾವಿಗಳು ಬತ್ತಿವೆ. ನಾಲೆಯಲ್ಲೂ ನಿಯಮಿತವಾಗಿ ನೀರು ಹರಿದಿಲ್ಲ. ಹೀಗಾಗಿ ಬಹುತೇಕ ರೈತರಿಗೆ ತರಕಾರಿಯನ್ನೂ ಬೆಳೆಯಲು ಸಾಧ್ಯವಾಗಿಲ್ಲ. ಇದರ ಪ್ರಭಾವ ಬೆಲೆ ಮೇಲೆ ತಟ್ಟಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ರಾಜಪ್ಪ.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಬಹುತೇಕ ತರಕಾರಿಗಳ ಬೆಲೆ ಸರಾಸರಿ ಶೇ 30ರಿಂದ ಶೇ 50ರಷ್ಟು ಹೆಚ್ಚಿದೆ. ಪ್ರತಿ ಕೆ.ಜಿಗೆ ₹ 20ರಿಂದ ₹ 30 ಇದ್ದ ಬೆಲೆ ₹ 30 ರಿಂದ ₹ 40ಕ್ಕೆ ಏರಿಕೆ ಕಂಡಿದೆ.
 
ಬೀನ್ಸ್‌ ಬೆಲೆ ದುಪ್ಪಟ್ಟು: ‘ನಾಲ್ಕು ದಿನಗಳ ಹಿಂದಷ್ಟೇ ಕೆ.ಜಿಗೆ ₹ 40ಕ್ಕೆ ಮಾರಾಟವಾಗುತ್ತಿದ್ದ ಬೀನ್ಸ್‌ ಬೆಲೆ ಪ್ರತಿ ಕೆ.ಜಿಗೆ ₹ 70ರಿಂದ ₹ 80ಕ್ಕೆ ಏರಿದೆ. ಬೇಡಿಕೆಯಷ್ಟು ಪ್ರಮಾಣದ ಬೀನ್ಸ್ ಮಾರುಕಟ್ಟೆಗೆ ಬರುತ್ತಿಲ್ಲ. ಹಾಗಾಗಿ ಬೆಲೆ ಮತ್ತಷ್ಟು ಏರುವ ಸಾಧ್ಯತೆಯಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಮಂಜುನಾಥ.
 
ಹೀರೇಕಾಯಿ, ಹಾಗಲಕಾಯಿ ಮಾಯ: ಮಾರುಕಟ್ಟೆಯಲ್ಲಿ ಭಾನುವಾರ ನಾಗರಿ ಕರು ಹುಡುಕಿದರೂ ಹೀರೇಕಾಯಿ, ಹಾಗಲಕಾಯಿ ಸಿಗಲಿಲ್ಲ. ಕೆಲವೇ ಸಗಟು ವ್ಯಾಪಾರಿಗಳು ಮಾತ್ರ ಹೀರೇಕಾಯಿ ಯನ್ನು ಮಾರಾಟಕ್ಕೆ ಇಟ್ಟಿದ್ದರು. ಸಗಟು ವ್ಯಾಪಾರವೇ ಪ್ರತಿ ಕೆ.ಜಿಗೆ ₹ 60ಗೆ ನಡೆಯಿತು. ಆದರೆ, ಹಾಗಲಕಾಯಿ ಮಾತ್ರ ಮಾರುಕಟ್ಟೆಗೆ ಬಂದೇ ಇರಲಿಲ್ಲ.
 
ಸೊಪ್ಪೂ ತುಟ್ಟಿ: ಸೊಬ್ಬಿನ ಬೆಲೆಯಲ್ಲೂ ಏರಿಕೆಯಾಗಿದೆ. ಸಬಸ್ಸಿಗೆ, ಪಾಲಕ್‌ ಸೊಪ್ಪು ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದೆ. ಸಬಸ್ಸಿಗೆ, ಪಾಲಕ್‌ ಪ್ರತಿ ಕಟ್ಟು ಸೊಪ್ಪಿನ ಬೆಲೆ ₹ 5ರಿಂದ ₹ 8ರಷ್ಟಾಗಿದೆ. ಕಳೆದ ವಾರ ಇದೇ ಜಾತಿ ಸೊಪ್ಪಿನ ಬೆಲೆ ಪ್ರತಿ ಕಟ್ಟಿಗೆ ₹ 3ರಿಂದ 
₹ 5ರಷ್ಟಿತ್ತು. ಕೊತ್ತಂಬರಿ, ದಂಟು, ಕರಿಬೇವು ಸೊಪ್ಪಿನ ಬೆಲೆಯೂ ತುಟ್ಟಿಯಾಗಿದೆ. 
 
ಈರುಳ್ಳಿ, ಬೆಳ್ಳುಳ್ಳಿ ಸ್ಥಿರ
ಎಲ್ಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಈರುಳ್ಳಿ, ಬೆಳ್ಳುಳ್ಳಿ ಬೆಲೆ ಸ್ಥಿರವಾಗಿದೆ. ಈರುಳ್ಳಿ ₹ 12ರಿಂದ ₹ 15ಕ್ಕೆ ಬಿಕರಿಯಾಗುತ್ತಿದೆ. ಗ್ರಾಹಕರು ಬೆಳ್ಳುಳ್ಳಿ ₹ 100ಕ್ಕೆ ಖರೀದಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.