ADVERTISEMENT

ಬೆರಳಚ್ಚು ಬಿಡ್ರಿ; ಬಡವರಿಗೆ ಪಡಿತರ ಕೊಡ್ರಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 5:19 IST
Last Updated 19 ನವೆಂಬರ್ 2017, 5:19 IST

ದಾವಣಗೆರೆ: ಸೈನಿಕ ಹುಳು ಬಾಧೆಯಿಂದಾಗಿ ತಾಲ್ಲೂಕಿನಲ್ಲಿ 16,000 ಹೆಕ್ಟೇರ್ ಬೆಳೆನಾಶವಾಗಿದ್ದು, ಸರ್ಕಾರಕ್ಕೆ ಪರಿಹಾರ ನೀಡಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಹಶೀಲ್ದಾರ್ ಕೆ.ಎಂ.ಸಂತೋಷ್‌ ಕುಮಾರ್ ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಬಾಧೆಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸಿದ್ದಾರೆ. ಹೆಕ್ಟೇರ್‌ಗೆ ₹ 6,800 ಪರಿಹಾರ ನೀಡಲಾಗುವುದು. ಗರಿಷ್ಠ 2 ಹೆಕ್ಟೇರ್‌ಗೆ ಪರಿಹಾರ ಸಿಗಲಿದೆ ಎಂದರು.

ಬಹುತೇಕ ರೈತರು ಬ್ಯಾಂಕ್‌ ಖಾತೆಗಳಿಗೆ ಆಧಾರ್ ಲಿಂಕ್‌ ಮಾಡಿಲ್ಲ. ಪರಿಣಾಮ ಪರಿಹಾರ ನೀಡಲು ತಾಂತ್ರಿಕ ತೊಂದರೆಗಳು ಎದುರಾಗಿವೆ. ಕೂಡಲೇ ಆಧಾರ್ ಲಿಂಕ್‌ ಮಾಡಿಸಬೇಕು. ಸರ್ಕಾರದಿಂದ ಪರಿಹಾರ ಮೊತ್ತ ಬಿಡುಗಡೆಯಾದ ಕೂಡಲೇ ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದರು.

ADVERTISEMENT

ಬೆರಳಚ್ಚು ಸಮಸ್ಯೆ: ತಾಲ್ಲೂಕಿನಲ್ಲಿ ಪಡಿತರ ಪಡೆಯಲು ಬೆರಳಚ್ಚು ಸಮಸ್ಯೆ ಎದುರಾಗಿದೆ. ಯಂತ್ರ ಬೆರಳಚ್ಚು ಸ್ವೀಕರಿಸದ ಪರಿಣಾಮ ಕಡ್ಲೇಬಾಳುನಲ್ಲಿ ಮೂರು ತಿಂಗಳಿಂದ ಪಡಿತರ ಸಿಕ್ಕಿಲ್ಲ ಎಂದು ಸದಸ್ಯೆ ಗಿರಿಜಾಬಾಯಿ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ದನಿಗೂಡಿಸಿದ ಇತರ ಸದಸ್ಯರು ತಮ್ಮ ಕ್ಷೇತ್ರಗಳಲ್ಲೂ ಬೆರಳಚ್ಚು ಸಮಸ್ಯೆ ಇದೆ. ಸರ್ವರ್‌ ಕೈಕೊಡುತ್ತಿದ್ದು, ಪಡಿತರಕ್ಕಾಗಿ ಕಾಯಬೇಕಾದ ಪರಿಸ್ಥಿತಿ ಇದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ, ಬೆರಳಚ್ಚು ಹೊಂದಾಣಿಕೆಯಾಗದಿದ್ದರೆ, ಕುಟುಂಬದ ಇತರ ಸದಸ್ಯರ ಬೆರಳಚ್ಚು ನೀಡಿ ಪಡಿತರ ಪಡೆಯಬಹುದು. ಏಕವ್ಯಕ್ತಿ ಕುಟುಂಬವಾದರೆ ಅಂಗಡಿ ಮಾಲೀಕರೇ ಪಡಿತರ ನೀಡಬಹುದು ಎಂದರು.

ಕೃಷಿ ಇಲಾಖೆ ಅಧಿಕಾರಿ ಮಾತನಾಡಿ, ‘ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ 40 ರಷ್ಟು ಹೆಚ್ಚು ಮಳೆಯಾಗಿದೆ. ಭದ್ರಾ ಜಲಾಶಯದ ನೀರು ಈ ಬಾರಿ ಲಭ್ಯವಾಗಲಿದೆ. ಹಾಗಾಗಿ, ಮೂರ್ನಾಲ್ಕು ದಿನಗಳಲ್ಲಿ ರೈತರಿಗೆ ಸಹಕಾರಿ ಸಂಘಗಳ ಮೂಲಕ ಸಬ್ಸಿಡಿ ದರದಲ್ಲಿ ಭತ್ತದ ಬೀಜ ವಿತರಣೆ ಮಾಡಲಾಗುವುದು’ ಎಂದರು.

ಔಷಧ ಸಿಂಪರಿಸುವ ಸ್ಪ್ರಿಂಕ್ಲರ್‌ಗಳಿಗೆ ಹಣ ಪಾವತಿಸಿ 2 ತಿಂಗಳಾದರೂ ಕೃಷಿ ಇಲಾಖೆ ಅಧಿಕಾರಿಗಳು ಸ್ಪ್ರಿಂಕ್ಲರ್‌ಗಳನ್ನು ನೀಡಿಲ್ಲ ಎಂದು ಆರೋಪಿಸಿದರು. ಈ ಕುರಿತು ಇಒ ಪ್ರಭುದೇವ್‌ ಮಾತನಾಡಿ, ರೈತರಿಗೆ ಸಮಸ್ಯೆಯಾಗದಂತೆ ಸ್ಪ್ರಿಂಕ್ಲರ್‌ಗಳನ್ನು ದಾಸ್ತಾನು ಮಾಡಿಟ್ಟುಕೊಂಡು ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಿ ಎಂದರು.

ಪಂಶುಸಂಗೋಪನಾ ಇಲಾಖೆ ಅಧಿಕಾರಿ ಡಾ.ಲಿಂಗರಾಜ್ ಮಾತನಾಡಿ, ನ.1ರಿಂದ 20ರವರೆಗೆ ಜಿಲ್ಲೆಯಲ್ಲಿ 70216 ರಾಸುಗಳಿಗೆ ಕಾಲುಬಾಯಿ ರೋಗಕ್ಕೆ ಲಸಿಕೆ ಹಾಕಲಾುಗಿದೆ. ಸಬ್ಸಿಡಿ ದರದಲ್ಲಿ ಮೇವು ಕತ್ತರಿಸುವ ಯಂತ್ರಗಳು ಲಭ್ಯವಿದ್ದು, ಆಸಕ್ತ ರೈತರು ಸದುಪಯೋಗ ಪಡೆದುಕೊಳ್ಳಬಹುದು ಎಂದರು.

ಸಿಡಿಪಿಒ ವೀಣಾ ಮಾತನಾಡಿ, ಜಿಲ್ಲೆಯಲ್ಲಿ ಅ.2ರಿಂದ ಮಾತೃಪೂರ್ಣ ಯೋಜನೆ ಜಾರಿಯಾಗಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ಬಾಣಂತಿಯರಿಗೆ ಊಟ ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ಯೋಜನೆ ಶೇ 69ರಷ್ಟು ಯಶಸ್ಸು ಕಂಡಿದೆ ಎಂದರು.

ಇದಕ್ಕೆ ಸಭೆಯಲ್ಲಿದ್ದ ಬಹುತೇಕ ಸದಸ್ಯರು ವಿರೋಧ ವ್ಯಕ್ತಪಡಿಸಿ, ಮಾತೃಪೂರ್ಣ ಯೋಜನೆ ವಿಫಲವಾಗಿದೆ. ಯಾರೂ ಅಂಗವಾಡಿಗೆ ಬಂದು ಆಹಾರ ಸ್ವೀಕರಿಸುತ್ತಿಲ್ಲ. ಸಭೆಗೆ ತಪ್ಪು ಮಾಹಿತಿ ನೀಡಬೇಡಿ ಎಂದರು.

ಈ ಸಂದರ್ಭ ಅಂಗನವಾಡಿ ಹುದ್ದೆಗಳಿಗೆ ನೇಮಕಾತಿ ವಿಚಾರದಲ್ಲಿ ಆಲೂರು ಕ್ಷೇತ್ರದ ಸದಸ್ಯ ಆಲೂರು ನಿಂಗರಾಜ್‌ ಹಾಗೂ ಸಿಡಿಪಿಒ ವೀಣಾ ಅವರ ಮಧ್ಯೆ ವಾಗ್ವಾದ ನಡೆಯಿತು. ಈ ಸಂದರ್ಭ ಇಒ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂಗಜ್ಜಗೌಡ್ರು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್‌ ಅವರೂ ಇದ್ದರು.

ಸಿಡಿಪಿಒಗೆ ಧಿಕ್ಕಾರ ಕೂಗಿದ ಗ್ರಾಮಸ್ಥರು
ಸಭೆ ನಡೆಯುತ್ತಿರುವಾಗಲೇ ಮಧ್ಯೆ ಪ್ರವೇಶಿಸಿದ ಹೆಮ್ಮನಬೇತೂರು ಗ್ರಾಮಸ್ಥರು ಸಿಡಿಪಿಒ ವೀಣಾ ಅವರ ವಿರುದ್ಧ ಧಿಕ್ಕಾರ ಕೂಗಿದರು. ಕೂಡಲೇ ಮಧ್ಯೆ ಪ್ರವೇಶಿಸಿದ ಇಒ ಸಭೆಯ ಬಳಿಕ ಸಮಸ್ಯೆ ಆಲಿಸುವುದಾಗಿ ಸಮಾಧಾನ ಪಡಿಸಿ ಹೊರ ಕಳುಹಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಗ್ರಾಮಸ್ಥರು ಹೆಮ್ಮನಬೇತೂರು ‘ಎ’ ಕೇಂದ್ರಕ್ಕೆ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಗ್ರಾಮದ ವಿಧವೆಯೊಬ್ಬರು ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ವಯಸ್ಸು ಮೀರಿದೆ ಎಂಬ ಕಾರಣಕ್ಕೆ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು. ಬದಲಾಗಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರ ಸಂಬಂಧಿಯಾದ ಮಂಜುಳಾ ಅವರನ್ನು ಆಯ್ಕೆಮಾಡಿ ಪಟ್ಟಿ ಪ್ರಕಟಿಸಲಾಗಿದೆ ಎಂದು ಆರೋಪಿಸಿದರು.

ಮಂಜುಳಾ ಅವರು ಸಲ್ಲಿಸಿದ್ದ ದಾಖಲೆಗಳು ನಕಲಿ ಎಂದು ಗೊತ್ತಾದ ಕೂಡಲೇ ಆಯ್ಕೆ ಪಟ್ಟಿಯನ್ನು ತಡೆಹಿಡಿಯಲಾಗಿದೆ. ಹುದ್ದೆಗೆ ಮೆರಿಟ್ ಆಧಾರದ ಮೇಲೆಯೇ ಆಯ್ಕೆ ಮಾಡಬೇಕು ಎಂದು ಗ್ರಾಮದ ಶಿವರಾಜ್‌, ಮಹಂತೇಶ್‌, ರಾಜಪ್ಪ, ಶಾಂತಕುಮಾರ್ ಒತ್ತಾಯಿಸಿದರು. ಸರ್ಕಾರದ ನಿಯಮಗಳಂತೆಯೇ ಆಯ್ಕೆ ಪ್ರಕ್ರಿಯೆ ನಡೆದಿದೆ. ಯಾವುದೇ ಅಕ್ರಮ ನಡೆದಿಲ್ಲ ಎಂದು ವೀಣಾ ಪ್ರತಿಕ್ರಿಯೆ ನೀಡಿದರು.

* * 

ವೃದ್ಧಾಪ್ಯ ವೇತನ ಮಂಜೂರು ಮಾಡಲು ಜರಿಕಟ್ಟೆ ವಿಎ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಅಥವಾ ಅವರನ್ನು ವರ್ಗಾವಣೆ ಮಾಡಬೇಕು.
ಹನುಮಂತಪ್ಪ,
ಮದಹದಡಿ ಕ್ಷೇತ್ರದ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.