ADVERTISEMENT

ಬೇಡಿಕೆಯ ಅರ್ಧದಷ್ಟೇ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 4:58 IST
Last Updated 9 ಮಾರ್ಚ್ 2017, 4:58 IST
ದಾವಣಗೆರೆ: ನಗರದ 41 ವಾರ್ಡ್‌ಗಳಿಗೆ ನಿಯಮಿತವಾಗಿ ಕುಡಿಯುವ ನೀರು ಪೂರೈಕೆ ಮಾಡಲು ನಿತ್ಯ ಒಟ್ಟು 64 ಎಂ.ಎಲ್‌.ಡಿ (ಹತ್ತು ಲಕ್ಷ ಲೀಟರ್‌ ಒಂದು ದಿನಕ್ಕೆ) ಶುದ್ಧ ನೀರು ಬೇಕು. ಆದರೆ, ಸದ್ಯ ಲಭಿಸುತ್ತಿರುವುದು ಕೇವಲ 30 ಎಂ.ಎಲ್‌.ಡಿ ಶುದ್ಧ ನೀರು. ಇದರಿಂದಾಗಿ ನಗರದಲ್ಲಿ ಸಕಾಲಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
 
ನಗರಕ್ಕೆ ಮೂರು ದಿನಗಳಿಗೆ ಒಮ್ಮೆ ನೀರು ಕೊಡಲು ಒಟ್ಟು 72 ಎಂ.ಎಲ್‌.ಡಿ ಕಚ್ಚಾ ನೀರಿನ ಅಗತ್ಯವಿದೆ. ಇದನ್ನು ಶುದ್ಧಗೊಳಿಸಿದರೆ 64 ಎಂ.ಎಲ್‌.ಡಿ ಕುಡಿಯುವ ನೀರು ಸಿಗುತ್ತದೆ. ರಾಜನಹಳ್ಳಿ ಬಳಿಯ ಜಾಕ್‌ವೆಲ್‌ ಬಳಿ ತುಂಗಭದ್ರಾ ನದಿಯಿಂದ ಇದುವರೆಗೂ 36 ಎಂ.ಎಲ್‌.ಡಿ ನೀರನ್ನು ಪಡೆದುಕೊಳ್ಳಲಾಗುತ್ತಿತ್ತು. 
 
ನಗರದ ಶೇ 50ಕ್ಕೂ ಹೆಚ್ಚು ಭಾಗಕ್ಕೆ ಈ ಯೋಜನೆಯಿಂದಲೇ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ನದಿಯಲ್ಲಿ ನೀರು ಬತ್ತಿರುವುದರಿಂದ ಕಳೆದ ಒಂದು ವಾರದಿಂದ ಈ ಜಾಕ್‌ವೆಲ್‌ನಲ್ಲಿ ಕೆಲಸ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಹಳೇ ದಾವಣಗೆರೆ ಭಾಗದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
 
ಸದ್ಯ ಕುಂದವಾಡ ಕೆರೆ ಹಾಗೂ ಟಿ.ವಿ ಸ್ಟೇಷನ್‌ ಕೆರೆಯಿಂದ ಒಟ್ಟು 30 ಎಂ.ಎಲ್‌.ಡಿ ಶುದ್ಧ ನೀರು ಮಾತ್ರ ಲಭಿಸುತ್ತಿದ್ದು, ಇದರಲ್ಲೇ ಇಡೀ ನಗರಕ್ಕೆ ಕುಡಿಯುವ ನೀರು ಪೂರೈಸಬೇಕಾಗಿದೆ. ನೀರಿನ ಲಭ್ಯತೆಯಲ್ಲಿ ಅರ್ಧದಷ್ಟು ಕೊರತೆ ಉಂಟಾಗಿದ್ದರಿಂದ ಅನಿವಾರ್ಯವಾಗಿ ವಾರಕ್ಕೆ ಒಮ್ಮೆ ಕುಡಿಯುವ ನೀರನ್ನು ಬಿಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
 
‘ಕುಂದವಾಡ ಕೆರೆಯಲ್ಲಿ ಸದ್ಯ 3.4 ಮೀಟರ್‌ ನೀರಿನ ಸಂಗ್ರಹವಿದೆ. ಟಿ.ವಿ ಸ್ಟೇಷನ್‌ ಕೆರೆಯಲ್ಲಿ ಸುಮಾರು 6 ಮೀಟರ್‌ ನೀರಿನ ಸಂಗ್ರಹವಿದೆ. ಎಂಟರಿಂದ 10 ದಿನಗಳಿಗೆ ಒಮ್ಮೆ ನೀರು ಕೊಟ್ಟರೆ ಇಡೀ ನಗರಕ್ಕೆ ಇನ್ನು ಎರಡರಿಂದ ಮೂರು ಬಾರಿ ಮಾತ್ರ ನೀರು ಕೊಡಲು ಸಾಧ್ಯ. ಮಾರ್ಚ್‌ 20ರಿಂದ 10 ದಿನಗಳ ಕಾಲ ಭದ್ರಾ ಕಾಲುವೆಗೆ ನೀರು ಬರುವ ನಿರೀಕ್ಷೆಯಿದೆ. ಆಗ ಪುನಃ ಎರಡೂ ಕೆರೆಗಳನ್ನು ತುಂಬಿಸಿಕೊಳ್ಳಲಾಗುವುದು’ ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ನಾರಾಯಣಪ್ಪ ತಿಳಿಸಿದರು. 
 
‘ನಗರದಲ್ಲಿ ಪಾಲಿಕೆಗೆ ಸೇರಿದ ಸುಮಾರು 500 ಕೊಳವೆಬಾವಿಗಳಿಂದ ದಿನ ಬಳಕೆಗೆ ನೀರು ಪೂರೈಸಲಾಗುತ್ತಿದೆ. ಸುಮಾರು 400 ಹ್ಯಾಂಡ್‌ ಪಂಪ್‌ಗಳಿವೆ. ಆದರೆ, ಈಗ ಇವುಗಳಲ್ಲೂ ನೀರಿನ ಲಭ್ಯತೆ ಪ್ರಮಾಣ ಕಡಿಮೆಯಾಗುತ್ತಿದೆ. ತೀವ್ರ ಸಮಸ್ಯೆ ಇರುವ ಕಡೆ ಪಾಲಿಕೆಯಿಂದ ಟ್ಯಾಂಕರ್‌ ಮೂಲಕ ನೀರು ಕೊಡಲಾಗುತ್ತಿದೆ. ಕುಂದವಾಡ ಕೆರೆಯ ಶುದ್ಧೀಕರಣ ಘಟಕದಿಂದ ಕುಡಿಯುವ ನೀರನ್ನು ಟ್ಯಾಂಕರ್‌ಗಳಲ್ಲಿ ತುಂಬಿಸಿಕೊಂಡು ಜನರಿಗೆ ನೀಡುವ ಕೆಲಸವೂ ನಡೆಯುತ್ತಿದೆ’ ಎಂದು ಅವರು ಹೇಳಿದರು. 
 
‘ಭದ್ರಾ ಜಲಾಶಯದಲ್ಲಿ ಕುಡಿಯುವ ನೀರಿನ ಸಲುವಾಗಿ 7 ಟಿಎಂಸಿ ನೀರನ್ನು ಮೀಸಲಿಡಲಾಗಿದೆ. ಏಪ್ರಿಲ್‌ನಲ್ಲಿ 10 ದಿನ ಹಾಗೂ ಮೇನಲ್ಲಿ ಎಂಟು ದಿನ ಭದ್ರಾ ಕಾಲುವೆಗೆ ನೀರು ಬಿಡಬೇಕಾಗಿದೆ. ಕಾಲುವೆಗೆ ಸಕಾಲದಲ್ಲಿ ನೀರು ಬಿಟ್ಟರೆ ಕೆರೆಯನ್ನು ತುಂಬಿಸಿಕೊಂಡು ನಗರಕ್ಕೆ ಕುಡಿಯುವ ನೀರು ಕೊಡಲು ಸಾಧ್ಯ.
 
ಮೇ ತಿಂಗಳು ಪೂರ್ತಿ ನದಿಗೆ 250 ಕ್ಯೂಸೆಕ್‌ ನೀರು ಹರಿಸಿದರೆ ರಾಜನಹಳ್ಳಿ ಜಾಕ್‌ವೆಲ್‌ ಬಳಿಯೂ ನಮಗೆ ನೀರು ಸಿಗಲಿದೆ. ಆಗ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ತಗ್ಗಲಿದೆ. ಹೀಗಾಗಿ ತುರ್ತಾಗಿ ನದಿಗೆ ನೀರು ಬಿಡಿಸಲು ಕಾಡಾ ಮಂಡಳಿ ಮೇಲೆ ಒತ್ತಡ ಹಾಕಬೇಕು’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಾಲಿಕೆ ಅಧಿಕಾರಿಯೊಬ್ಬರು. 
 
ಟ್ಯಾಂಕರ್ ನೀರು ಕೊಡಲು ವ್ಯವಸ್ಥೆ: ಮೇಯರ್‌
ಈ ಬಾರಿ ಸಮಸ್ಯೆ ತೀವ್ರವಾಗಿದ್ದು, ಎಂಟು ದಿನಗಳಿಗೆ ಒಮ್ಮೆ ಕುಡಿಯುವ ನೀರಿನ್ನು ಕೊಡುವುದೂ ಕಷ್ಟವಾಗುತ್ತಿದೆ. ಹೀಗಾಗಿ ಹೊಸದಾಗಿ ಕೊಳವೆಬಾವಿ ಕೊರೆಸಲು ಪರವಾನಗಿ ನೀಡುವಂತೆ ಪಾಲಿಕೆಯ ಎಲ್ಲ ಸದಸ್ಯರು ಜಿಲ್ಲಾಧಿಕಾರಿ ರಮೇಶ್‌ ಬಳಿಗೆ ಹೋಗಿದ್ದೆವು. ಆದರೆ, ಅಂತರ್ಜಲ ಮಟ್ಟ ಕುಸಿದಿರುವುದಿಂದ ಕೊಳವೆಬಾವಿ ಕೊರೆಯಲು ಅನುಮತಿ ನೀಡಿಲ್ಲ. ಬದಲಾಗಿ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಸಲಹೆ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ ಅವರೊಂದಿಗೂ ಚರ್ಚಿಸಿದ್ದೇನೆ.
ಸದ್ಯ 10 ಟ್ಯಾಂಕರ್‌ಗಳ ಮೂಲಕ ನಗರದಲ್ಲಿ ತೀವ್ರ ಸಮಸ್ಯೆ ಇರುವ ಕಡೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಪ್ರತಿ ದಿನ 10 ವಾರ್ಡ್‌ಗಳಿಗೆ ಐದು ಟ್ರಿಪ್‌ಗಳಲ್ಲಿ ನೀರು ಕೊಡಲಾಗುತ್ತಿದೆ. ನಗರದಲ್ಲಿ ಎರಡು ದೊಡ್ಡ ಕೆರೆ ಇರುವುದರಿಂದ ನೀರಿನ ಸಮಸ್ಯೆಯನ್ನು ಹೇಗೋ ಇಷ್ಟಾದರೂ ನಿಭಾಯಿಸುತ್ತಿದ್ದೇವೆ.
ಪಾಲಿಕೆಯಿಂದ ನೀರು ಬಿಟ್ಟಾಗ ಪೈಪ್‌ಗಳಿಗೆ ನೇರವಾಗಿ ಮೋಟಾರ್‌ ಹಾಕಿಕೊಳ್ಳುತ್ತಿ
ರುವುದರಿಂದ ಕೆಳಗಿನ ಭಾಗದ ಜನರಿಗೆ ನೀರು ಸರಿಯಾಗಿ ಸಿಗುತ್ತಿಲ್ಲ ಎಂಬ ದೂರುಗಳು ಬಂದಿದ್ದವು. ಹೀಗಾಗಿ ವಾಲ್‌ಮನ್‌ಗಳ ಸಭೆಯನ್ನು ನಡೆಸಿ, ಪೈಪ್‌ಗಳಿಗೆ ಅಳವಡಿಸುವ ಮೋಟಾರ್‌ಗಳನ್ನು ವಶಕ್ಕೆ ಪಡೆಯುವಂತೆ ಸೂಚಿಸಿದ್ದೇವೆ.
– ರೇಖಾ ನಾಗರಾಜ್‌, ಮೇಯರ್‌
 
* ಈ ಬಾರಿ ನೀರಿನ ಸಮಸ್ಯೆ ತೀವ್ರವಾಗಿದೆ.  ನಾಗರಿಕರು ನೀರನ್ನು ಪೋಲು ಮಾಡದೇ, ಮಿತವಾಗಿ ಬಳಕೆ ಮಾಡಿಕೊಳ್ಳಬೇಕು.
ಬಿ.ಎಚ್‌.ನಾರಾಯಣಪ್ಪ, ಮಹಾನಗರ ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.