ADVERTISEMENT

ಬೈರನಹಳ್ಳಿ: ತಿಂಗಳಿಂದ ಹನಿ ನೀರಿಗೂ ತತ್ವಾರ

ಬತ್ತಿದ ಕೆರೆ, ಹಳ್ಳ, ಕೊಳವೆಬಾವಿ, ಕೈಪಂಪ್‌ಗಳು; ಕುಡಿಯವ ನೀರಿಗೆ ಗ್ರಾಮಸ್ಥರ ಪರದಾಟ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:03 IST
Last Updated 6 ಫೆಬ್ರುವರಿ 2017, 5:03 IST

ಕುಳಗಟ್ಟೆ: ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿನ ತೊಂದರೆ ತೀವ್ರಗೊಂಡಿದೆ. ಸಮೀಪದ ಕ್ಯಾಸಿನಕೆರೆ ಗ್ರಾಮ ಪಂಚಾಯ್ತಿಯ ಬೈರನಹಳ್ಳಿಯಲ್ಲಿ ಸಾಲು ಸಾಲಾಗಿ ಕೊಡಗಳನ್ನು ಇಟ್ಟು ಹಗಲಿರುಳು ಕಾದರೂ ನಲ್ಲಿಗಳಿಂದ ಹನಿ ನೀರೂ ಬರುತ್ತಿಲ್ಲ.

ಬೈರನಹಳ್ಳಿಯಲ್ಲಿ ಸುಮಾರು 160 ಕುಟುಂಬಗಳಿವೆ. 800ರಷ್ಟು ಜನಸಂಖ್ಯೆ ಇದೆ. ಗುಡ್ಡದಬೈರನಹಳ್ಳಿ ಎಂದೂ ಕರೆಯಲಾಗುವ ಈ ಗ್ರಾಮದಲ್ಲಿ ನೀರು ಸರಬರಾಜು ಮಾಡಲು ಒಂದು ದೊಡ್ಡ ಟ್ಯಾಂಕ್‌, ನಾಲ್ಕು ಪುಟ್ಟ ಟ್ಯಾಂಕ್‌ಗಳಿವೆ. ಇಲ್ಲಿ 60–70 ನಲ್ಲಿಗಳಿದ್ದರೂ ಒಂದ ರಲ್ಲೂ ಹನಿ ನೀರು ಬರುತ್ತಿಲ್ಲ. ನಾವು ಯಾರನ್ನೋ ಕೇಳಿ ಪಡೆದು ನೀರನ್ನು ಕುಡಿಯುತ್ತೇವೆ. ಮೂಕ ಪ್ರಾಣಿಗಳ ಸ್ಥಿತಿ ಕಷ್ಟವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.

ಗ್ರಾಮದ ಸುತ್ತಲಿನ ಕೆರೆ, ಹಳ್ಳ–ಕೊಳ್ಳ ಬತ್ತಿ ಹೋಗಿದೆ. ಜನ–ಜಾನು ವಾರುಗಳಿಗೆ ಕುಡಿಯುವ ನೀರಿಗೆ ತತ್ವಾರ ವಾಗಿದೆ. ಕುಡಿಯುವ ನೀರಿಗಾಗಿ ಗ್ರಾಮ ದಲ್ಲಿ ತೆಗೆದ ಮೂರು ಕೊಳವೆ ಬಾವಿ ಗಳೂ ಬತ್ತಿವೆ. ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ, ಅದು ಹೆಸರಿಗೆ ಮಾತ್ರ.

ಹನಿ ನೀರು ಇಲ್ಲದೇ ತಿಂಗಳಾಯಿತು. ಇರುವ ಮೂರು ಕೈಪಂಪ್‌ಗಳಲ್ಲೂ ಹನಿ ನೀರು ಬರುತ್ತಿಲ್ಲ. ನೀರಿನ ಕೊರತೆಯಿಂದಾಗಿ ಜಾನುವಾರು ಗಳನ್ನು ಮಾರಲು ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ನೊಂದು ನುಡಿಯುತ್ತಾರೆ.

ಟ್ಯಾಂಕರ್‌ ನೀರು:  ಕಳೆದ ಎರಡು ದಿನ ಗಳಿಂದ ಗ್ರಾಮ ಪಂಚಾಯ್ತಿ ಟ್ಯಾಂಕರ್‌ ಮೂಲಕ ದಿನಕ್ಕೆ ಒಂದು ಬಾರಿ ಗ್ರಾಮದ ಮನೆಗಳಿಗೆ ನೀರು ಪೂರೈಸುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

‘ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಲು ಬೆಂಗಳೂರಿನಿಂದ ಸರ್ಕಾರದ ಭೂಗರ್ಭ ವಿಜ್ಞಾನಿ ಬಂದು ನೀರು ಲಭಿಸುವ ಸ್ಥಳ ಗುರುತಿಸಿದ್ದರು. ಅಲ್ಲಿ 500 ಅಡಿ ಆಳಕ್ಕೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಕ್ಕಿಲ್ಲ. ಎ.ಇ.ಇ ಮಂಜುನಾಥ್ ಕಪಾಳೆ ಅವರು ಇನ್ನೆರಡು ಸ್ಥಳಗಳಲ್ಲಿ ಕೊಳವೆಬಾವಿ ಕೊರೆಸಲು ಸೂಚಿಸಿದ್ದಾರೆ. ಅಲ್ಲಿಯವರೆಗೂ ತಾತ್ಕಲಿಕವಾಗಿ ರೈತರಿಗೆ ತೋಟದ ಕೊಳವೆಬಾವಿಯಿಂದ ಟ್ಯಾಂಕರ್ ಮೂಲಕ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದೆ’ ಎಂದು ಪಂಚಾಯ್ತಿ ಕಾರ್ಯದರ್ಶಿ ರಾಜಪ್ಪ ಪ್ರತಿಕ್ರಿಯಿಸಿದ್ದಾರೆ.

‘ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲೂ ಬಿಸಿಯೂಟಕ್ಕೆ ಕಳೆದ 20 ದಿನಗಳಿಂದ ನೀರಿನ ಕೊರತೆಯಾಗಿದೆ. ಅಡುಗೆ ಸಹಾಯಕರಿಂದ ನೀರು ತರಿಸಿ ಮಕ್ಕಳಿಗೆ ಬಿಸಿಯೂಟ ನೀಡುತ್ತಿದ್ದೇವೆ’ ಎಂದು ಗ್ರಾಮದ ಚಂದ್ರಪ್ಪ ತಿಳಿಸಿದರು.

ನೀರಿನ ಮೂಲ ಬತ್ತಿರುವುದರಿಂದ ಅಡಿಕೆ– ತೆಂಗು, ಬಾಳೆ ಬೆಳೆಗಳು ಒಣಗಿ ನಿಂತಿವೆ. ಗ್ರಾಮದ ಜನ– ಜಾನುವಾರಿಗೆ ನೀರಿನ ಸೌಲಭ್ಯವನ್ನು ಕಲ್ಪಿಸಲು ಶಾಸಕರು ಹಾಗೂ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ರುದ್ರೇಶ್‌ ಒತ್ತಾಯಿಸಿದರು.

ಅಕ್ಕಪಕ್ಕದ ಗ್ರಾಮಗಳಿಂದ ರೈತರು ಎತ್ತಿನ ಗಾಡಿ, ಟ್ಯಾಕ್ಟರ್ ಬಳಸಿ ನೀರು ತಂದರೆ; ಯುವಕರು ಸೈಕಲ್, ಬೈಕ್ ಬಳಸಿ ನೀರು ತರುತ್ತಿದ್ದಾರೆ.
ಮಹಿಳೆಯರು ಬಿಂದಿಗೆಯನ್ನು ತಲೆ ಮೇಲೆ ಹೊತ್ತುಕೊಂಡು ಬರುತ್ತಿದ್ದಾರೆ.

‘ನಮ್ಮಲ್ಲಿ ಹರಿಯುವ ತುಂಗಭದ್ರಾ ನದಿಯ ನೀರನ್ನು ದೂರದ ಜಿಲ್ಲೆಗಳಿಗೆ ಕೂಡಲು ಮುಂದಾಗಿರುವ ರಾಜ್ಯ ಸರ್ಕಾರ ನೀರಿನ ಮೂಲವೇ ಇಲ್ಲದ ಬೈರನಹಳ್ಳಿ, ಚೀಲಾಪುರ, ತ್ಯಾಗದಕಟ್ಟೆ, ಕ್ಯಾಸಿನಕೆರೆ, ಕುಳಗಟ್ಟೆ, ಚನ್ನೇನಹಳ್ಳಿ ತಾಂಡಾ ಹಾಗೂ ಸುತ್ತಲಿನ ಹಳ್ಳಿಗಳಿಗೆ ಶಾಶ್ವತವಾಗಿ ನದಿಯ ನೀರನ್ನು ಕೊಡುವ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.