ADVERTISEMENT

ಮಾಹಿತಿ ತಂತ್ರಜ್ಞಾನ ಸದ್ಬಳಕೆ ಸವಾಲು ಎದುರಿಸಿ

ಘಟಿಕೋತ್ಸವ: ವಿಶ್ರಾಂತ ಕುಲಪತಿ ಪ್ರೊ.ಎಂ.ಐ.ಸವದತ್ತಿ ಅನುಪಸ್ಥಿತಿಯಲ್ಲಿ ಮುದ್ರಿತ ಭಾಷಣ ಓದಿದ ಕುಲಸಚಿವರು

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:24 IST
Last Updated 21 ಜನವರಿ 2017, 5:24 IST
ಘಟಿಕೋತ್ಸವದಲ್ಲಿ ದಾವಣಗೆರೆ ವಿ.ವಿ ಕುಲಸಚಿವ (ಪರೀಕ್ಷಾಂಗ) ಪ್ರೊ.ವೆಂಕಟೇಶ್, ಕುಲಪತಿ ಪ್ರೊ.ಬಿ.ಬಿ.ಕಲಿವಾಳ, ವಿ.ವಿ ಕುಲಸಚಿವ (ಆಡಳಿತ) ಪ್ರೊ.ಸಿ.ಸೋಮಶೇಖರ್ ಉಪಸ್ಥಿತರಿದ್ದರು
ಘಟಿಕೋತ್ಸವದಲ್ಲಿ ದಾವಣಗೆರೆ ವಿ.ವಿ ಕುಲಸಚಿವ (ಪರೀಕ್ಷಾಂಗ) ಪ್ರೊ.ವೆಂಕಟೇಶ್, ಕುಲಪತಿ ಪ್ರೊ.ಬಿ.ಬಿ.ಕಲಿವಾಳ, ವಿ.ವಿ ಕುಲಸಚಿವ (ಆಡಳಿತ) ಪ್ರೊ.ಸಿ.ಸೋಮಶೇಖರ್ ಉಪಸ್ಥಿತರಿದ್ದರು   

ದಾವಣಗೆರೆ: ‘ಮಾಹಿತಿ ತಂತ್ರಜ್ಞಾನ ಕ್ಷೇತ್ರ ಆಗಾಧವಾಗಿ ಬೆಳೆದಿದ್ದು, ಹೇರಳವಾದ ಮಾಹಿತಿ, ಅಪಾರ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವ ಸವಾಲು ನಿಮ್ಮ ಎದುರು ಇದೆ’ ಎಂದು ವಿಶ್ರಾಂತ ಕುಲಪತಿ ಪ್ರೊ.ಎಂ.ಐ.ಸವದತ್ತಿ, ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿ ಆವರಣದಲ್ಲಿ ಶುಕ್ರವಾರ ನಡೆದ ನಾಲ್ಕನೇ ಘಟಕೋತ್ಸವದಲ್ಲಿ ಘಟಿಕೋತ್ಸವ ಭಾಷಣದಲ್ಲಿ ಹೇಳಿದರು. ಸವದತ್ತಿ ಅವರ ಅನುಪಸ್ಥಿತಿಯಲ್ಲಿ ಮುದ್ರಿತ ಭಾಷಣವನ್ನು ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ) ಪ್ರೊ.ವೆಂಕಟೇಶ್ ಓದಿದರು.

‘ಇಂದು ಎಲ್ಲರೂ ಮೊಬೈಲ್‌ ಮಯವಾಗಿದೆ. ತಂತ್ರಜ್ಞಾನ ವ್ಯಾಪಿಸದ ಕ್ಷೇತ್ರಗಳು ಉಳಿದಿಲ್ಲ. ತಂತ್ರಜ್ಞಾನಾ ಧಾರಿತ ವೈದ್ಯಕೀಯ ಪರೀಕ್ಷೆಗಳು, ತಯಾರಕರು, ಬ್ಯಾಂಕುಗಳು, ಬೋಧನೆ ಎಲ್ಲವೂ ಮಾಹಿತಿ ತಂತ್ರಜ್ಞಾನಮಯವಾಗಿ ಪರಿಣಮಿಸಿವೆ. ಮನುಕುಲದ ಒಳಿತಿಗೆ ಇವುಗಳನ್ನು ಸಮರ್ಥವಾಗಿ ಬಳಸುವುದನ್ನು ಕಲಿಯಬೇಕಿದೆ’ ಎಂದರು.

‘ಯಾವುದೇ ದೃಷ್ಟಿಯಿಂದ ನೋಡಿದರೂ ಇದು ವಿದ್ಯಾರ್ಥಿಗಳಿಗೆ ಒಳ್ಳೆಯ ಕಾಲ. ನೀವು ಹೆಚ್ಚುವರಿ ಶಿಕ್ಷಣ ಬಯಸುವಿರಾದರೆ ಮುಂದುವರಿಕೆಯ ಕೋರ್ಸ್‌ಗಳಿವೆ; ಕೌಶಲ ಅಭಿವೃದ್ಧಿ ಆಧಾರಿತ ಕೋರ್ಸ್‌ಗಳಿವೆ. ವಿದೇಶಕ್ಕೆ ಹೋಗುವುದಾದರೆ ಅಥವಾ ಶಿಕ್ಷಣ ರಂಗದಲ್ಲಿಯೇ ಮುಂದುವರಿಯುವು ದಾದರೆ ಅತ್ಯುತ್ತಮ ಅವಕಾಶಗಳಿವೆ’ ಎಂದು ಅವರು ಪ್ರತಿಪಾದಿಸಿದರು.

‘ಸ್ಥಿತಿವಂತರು ತಮ್ಮಿಷ್ಟದ ಆಯ್ಕೆ ಮಾಡಿಕೊಳ್ಳಬಹುದು. ಮಿತ ಸಂಪನ್ಮೂಲವುಳ್ಳವರಿಗೆ ಸಾಲ ಕೊಡಲು ಬ್ಯಾಂಕ್‌ಗಳಿವೆ. ಆಸಕ್ತರು ಪ್ರತಿಷ್ಠಿತ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಣ ಪಡೆಯಬಹುದು. ಹಾಗೆಯೇ, ಸ್ಪರ್ಧಾ ತ್ಮಕ ಪರೀಕ್ಷೆಗಳನ್ನು ಎದುರಿಸಿ ಇಚ್ಛೆಯ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯುವ ಅವಕಾಶವೂ ಹೇರಳವಾಗಿದೆ’ ಎಂದರು.

‘ಈ ದಿಕ್ಕಿನಲ್ಲಿ ಉನ್ನತ ಶಿಕ್ಷಣ ಪಡೆಯಲು ಅಥವಾ ಉದ್ಯೋಗಾವಕಾಶ ಗಳ ಹುಡುಕಾಟದಲ್ಲಿ ಮಾರ್ಗದರ್ಶನ ಮಾಡಲು ನಿಮಗೊಬ್ಬ ಸಲಹೆಗಾರನ ಅವಶ್ಯಕತೆ ಇದೆ. ಮಾಹಿತಿ ತಂತ್ರಜ್ಞಾನ ಯುಗ’ ಎಂದು ಅವರು ವಿಶ್ಲೇಷಿಸಿದರು.

‘ಮಾಹಿತಿ ತಂತ್ರಜ್ಞಾನ ಇದುವರೆಗೂ ಚಾಲ್ತಿಯಲ್ಲಿದ್ದ ಸಂವಹನ ವಿಧಾನಗಳನ್ನು ನಾಶಗೊಳಿಸಿದ್ದು, ಅನಕ್ಷರಸ್ಥರು ಮತ್ತು ಕೂಲಿ ಕಾರ್ಮಿಕರನ್ನು ಕೂಡ ಸುಲಭ ವಾಗಿ ತಲುಪಿದ ಸಂವಹನ ಮಾಧ್ಯಮ ವಾಗಿದೆ. ಈಗ ಮೊಬೈಲ್ ತಂತ್ರಜ್ಞಾನವು ಹಣಕಾಸಿನ ಮತ್ತು ವ್ಯವಹಾರದ ವಿಷಯಗಳಲ್ಲಿ ಹಾಸುಹೊಕ್ಕಾಗಿ ರುವುದನ್ನು ಕಾಣುತ್ತಿದ್ದೇವೆ. ಇದು ಇಷ್ಟು ರಚನಾತ್ಮಕವಾಗಿದ್ದರೂ ನಮ್ಮ ಮೊದಲಿನ ತಂತ್ರಜ್ಞಾನಗಳನ್ನು ನಿರ್ಮೂಲನೆ ಮಾಡಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಮಾಹಿತಿ ತಂತ್ರಜ್ಞಾನದ ಅನ್ವಯಿಕೆಗಳು ಗುರುತಿಸದಿರುವ ಕ್ಷೇತ್ರಗಳು ಸಮಾಜದಲ್ಲಿ ಇನ್ನೂ ಹಲವು ಇವೆ’ ಎಂದ ಅವರು, ‘ಶೈಕ್ಷಣಿಕ ಗುಣಮಟ್ಟ ಹಾಗೂ ರ್‍್ಯಾಂಕ್ ಗಳಿಕೆ ನಿಮ್ಮ ಜ್ಞಾನಕ್ಕೆ ಅಥವಾ ಕರ್ತೃತ್ವ ಶಕ್ತಿಗೆ ಅವಶ್ಯಕತೆ ಇಲ್ಲ. ಜಗತ್ತಿಗೆ ಮಹಾನ್ ಕೊಡುಗೆ ನೀಡಿರುವ ಬಿಲ್‌ಗೇಟ್ಸ್ ಮತ್ತು ಸ್ಟೀವ್‌ಜಾಬ್ಸ್ ಅವರಿಗೆ ಯಾವುದೇ ವಿಶ್ವವಿದ್ಯಾಲಯಗಳು ಪದವಿ ನೀಡಿರಲಿಲ್ಲ’ ಎಂದು ಹೇಳಿದರು.

ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳು ಸೇರಿ 2014–15ನೇ ಸಾಲಿನಲ್ಲಿ 11,907 ವಿದ್ಯಾರ್ಥಿಗಳಿಗೆ ಹಾಗೂ 2015–16ನೇ ಸಾಲಿನಲ್ಲಿ 13,491 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಡೀನ್‌ಗಳಾದ ಪ್ರೊ.ಬಕ್ಕಪ್ಪ, ಮಧುಸೂದನ್, ಪ್ರೊ.ಎನ್‌.ಕೆ.ಗೌಡ ತಮ್ಮ ನಿಕಾಯಗಳ ಪದವಿ ಪಡೆಯುವ ವಿದ್ಯಾರ್ಥಿಗಳ ಹೆಸರು ಹೇಳಿದರು.

ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ವಿ.ವಿ ಕುಲಸಚಿವ (ಆಡಳಿತ) ಪ್ರೊ.ಸಿ.ಸೋಮ ಶೇಖರ್ ಉಪಸ್ಥಿತರಿದ್ದರು. ಕುಲಪತಿ ಪ್ರೊ.ಬಿ.ಬಿ.ಕಲಿವಾಳ ಸ್ವಾಗತಿಸಿದರು. ರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲಾ ಗೈರುಹಾಜರಿಯಾಗಿದ್ದರು. ಸಿಂಡಿಕೇಟ್‌ ಹಾಗೂ ಅಕಾಡೆಮಿ ಕೌನ್ಸಿಲ್ ಸದಸ್ಯರು ಭಾಗವಹಿಸಿದ್ದರು.

ವಿವಾದೀತ ನಾಯಕ!
ಸ್ವಾಗತ ಭಾಷಣ ಮಾಡಿದ ಕುಲಪತಿ ಪ್ರೊ.ಬಿ.ಬಿ.ಕಲಿವಾಳ, ರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲಾ ಬಗ್ಗೆ ಮಾತನಾಡಿ, ಅವರನ್ನು ವಿವಾದಾತೀತ ಎನ್ನುವ ಬದಲು ವಿವಾದೀತ ನಾಯಕ ಎಂದು ಕರೆದರು. ಅಲ್ಲದೇ, ಫಲವನ್ನು ಛಲ ಎಂದು ಉಚ್ಚರಿಸಿದರು. ಇಡೀ ಭಾಷಣದಲ್ಲಿ ತಪ್ಪು ಉಚ್ಚಾರಣೆಗಳೇ ಹೆಚ್ಚಿದ್ದವು.

ಉದುರಿದ ಪದಕಗಳು!
ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡುತ್ತಿದ್ದ ವೇಳೆ ಪದಕಗಳು ವೇದಿಕೆಯಲ್ಲಿ ಪದೇ ಪದೇ ಉದುರಿ ಕೆಳಗೆ ಬೀಳುತ್ತಿದ್ದವು. ಅದನ್ನು ಕುಲಸಚಿವರು ಸೇರಿದಂತೆ ಗಣ್ಯರು ಎತ್ತಿ ಕೊಡುತ್ತಿದ್ದ ದೃಶ್ಯ ಕಂಡುಬಂತು. ಈ ವರ್ಷವೂ ಘಟಿಕೋತ್ಸವದಲ್ಲಿ ಮುದ್ರಿತ ನಾಡಗೀತೆಯನ್ನೇ ಹಾಕಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.