ADVERTISEMENT

ಮೀನುಗಾರಿಕೆಯಿಂದ ಆರ್ಥಿಕ ಸದೃಢತೆ

ಮೀನು ಕೃಷಿಕರ ದಿನಾಚರಣೆಯಲ್ಲಿ ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಉಮೇಶ್‌

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 6:18 IST
Last Updated 11 ಜುಲೈ 2017, 6:18 IST

ದಾವಣಗೆರೆ: ಜಿಲ್ಲೆಯಲ್ಲಿ ಮೀನು ಉತ್ಪಾದನೆಗಾಗಿ ಪೂರಕವಾದ ವಾತಾವಾರಣವಿದ್ದು, ಈಗಾಗಲೇ 35 ಹೆಕ್ಟೇರ್‌ ಜಲ ಪ್ರದೇಶದಲ್ಲಿ ಮೀನು ಕೃಷಿಕರು ಮೀನು ಉತ್ಪಾದನೆ ಮಾಡುತ್ತಿದ್ದಾರೆ ಎಂದು ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ.ಉಮೇಶ್‌ ಹೇಳಿದರು.

ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಹಿಂದೆ ಕೃಷಿಕರಿಗೆ ಮೀನು ಉತ್ಪಾದನೆಯ ವೈಜ್ಞಾನಿಕ ವಿಧಾನದ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಸರ್ಕಾರವು ಮೀನು ಉತ್ಪಾದನೆ ಕೈಗೊಳ್ಳುವ ಕೃಷಿಕರಿಗೆ ಸಾಕಷ್ಟು ಅನುದಾನ ನೀಡುತ್ತಿದ್ದು, ಜೊತೆಗೆ ಮೀನುಗಾರಿಕೆ ಸಲಕರಣೆ ಕಿಟ್‌ ಕೂಡ ವಿತರಿಸುತ್ತಿದೆ. ಇದರಿಂದಾಗಿ ಹಲವು ರೈತರು ತಮ್ಮ ಕೃಷಿ ಜಮೀನಿನ ಕೆಲಭಾಗದಲ್ಲಿ ಮೀನು ಉತ್ಪಾದನೆಗೆ ಮುಂದಾಗಿದ್ದಾರೆ’ ಎಂದು ಹೇಳಿದರು.

ADVERTISEMENT

ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಮೀನು ಕೃಷಿಯಲ್ಲಿ ಮುಂಚೂಣಿಯಲ್ಲಿದ್ದು, ಇಲ್ಲಿಂದ ಹೊರ ದೇಶಗಳಿಗೆ ಮೀನು ರಫ್ತುಗಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 2011ರಿಂದ ಮೀನು ಕೃಷಿಗೆ ಆದ್ಯತೆ ನೀಡಲಾಗುತ್ತಿದೆ. ಪ್ರಸ್ತುತ 15,542 ಹೆಕ್ಟೇರ್‌ ಜಲ ಪ್ರದೇಶವು ಮೀನುಗಾರಿಕೆ ಅಭಿವೃದ್ಧಿಗೆ ಲಭ್ಯವಿದೆ. ಇಲಾಖೆ ಅಡಿಯಲ್ಲಿ ಮೀನುಗಾರಿಕೆಗಾಗಿ  120 ಕೆರೆಗಳು ಹಾಗೂ 211 ಗ್ರಾಮ ಪಂಚಾಯ್ತಿ ಕೆರೆಗಳಿವೆ.

ಜೊತೆಗೆ ಸುಮಾರು 65.3 ಹೆಕ್ಟೇರ್‌ ಪ್ರದೇಶದಲ್ಲಿ 350 ಮೀನು ಕೃಷಿಕರ ಸ್ವಂತ ಕೊಳಗಳಿವೆ. ಇದರಲ್ಲಿ ವಾರ್ಷಿಕವಾಗಿ ಸರಾಸರಿ 2.50 ಕೋಟಿ ಮೀನುಮರಿ ಬಿತ್ತನೆ ಮಾಡಲಾಗುತ್ತಿದೆ. ಮೀನು ಕೃಷಿಕರಿಗೆ ದಿನಕ್ಕೆ ₹ 500ರಿಂದ ₹ 1,000 ಆದಾಯ ಬರುತ್ತದೆ ಎಂದು ಅವರು ಮಾಹಿತಿ ನೀಡಿದರು.

ನಗರದ ಡಾಂಗೆ ಉದ್ಯಾನದ ಬಳಿಯಲ್ಲಿ ಈಗಾಗಲೇ   ₹ 1.16 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ. ಅರುಣಾ ಚಿತ್ರಮಂದಿರ ಬಳಿಯ ಮೀನು ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸುವ ಚಿಂತನೆ ಇದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.

ಸಹಾಯಧನ:  ‘ಸಾಮಾನ್ಯ ವರ್ಗಕ್ಕೆ ಸೇರಿದ ವೃತ್ತಿಪರ ಮೀನುಗಾರರಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರವು ಮತ್ಸ್ಯಾಶ್ರಯ ಯೋಜನೆಯಡಿ ₹ 1.20ಲಕ್ಷ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ₹ 1.50 ಲಕ್ಷ ಸಹಾಯಧನ ನೀಡುತ್ತಿದೆ. ಜೊತೆಗೆ ಅರ್ಹರಿಗೆ ಮೀನುಗಾರಿಕೆ ಸಲಕರಣೆಯ ಕಿಟ್‌ಗಳನ್ನೂ ವಿತರಿಸುತ್ತಿದೆ. ಮೀನು ಕೃಷಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ರಾಜ್ಯ ಮೀನುಗಾರಿಕಾ ಮಹಾಮಂಡಳಿಯ ನಿರ್ದೇಶಕ ಅಂಜಿಬಾಬು ಮಾತನಾಡಿ, ‘ಬರದಿಂದಾಗಿ ಕಳೆದ 23 ವರ್ಷಗಳಿಂದ ಮೀನು ಉತ್ಪನ್ನಕ್ಕೆ ಹಿನ್ನಡೆಯಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಮೀನು ಕೃಷಿಕರಿಗೆ ಸರ್ಕಾರವು ಉಚಿತವಾಗಿ ಮೀನು ಮರಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಮೀನುಮರಿ ಬಿತ್ತನೆ ಮಾಡಿದ ಒಂದು ವರ್ಷದಲ್ಲಿಯೇ ಮೀನು ಫಲ ನೀಡುತ್ತದೆ. ಮೀನುಗಳಿಗೆ ಸಕಾಲಕ್ಕೆ ಪ್ರೋಟಿನ್‌ಯುಕ್ತ ಆಹಾರ ನೀಡಿದ್ದಲ್ಲಿ 7 ತಿಂಗಳ ಅವಧಿಯೊಳಗೆ ಉತ್ತಮ ಫಲ ಪಡೆಯಬಹುದು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಜಯಶೀಲಾ ಮಾತನಾಡಿ, ‘ಮೀನುಗಾರಿ ಕೆಯು ಕೇವಲ ಕರಾವಳಿ ಹಾಗೂ ಒಳ ನಾಡು ಪ್ರದೇಶಗಳಿಗೆ ಸೀಮಿತ ವಾಗಿತ್ತು. ಆದರೆ, ಮಧ್ಯ ಕರ್ನಾಟಕ ದಲ್ಲಿಯೂ ಕೃಷಿಕರು ಮೀನು ಉತ್ಪಾದನೆಗೆ ಮುಂದಾಗಿದ್ದಾರೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಶೈಲಜಾ ಬಸವರಾಜ್‌ ಮಾತನಾಡಿ, ‘ಮೀನು ಉತ್ಪಾದನೆಯಿಂದ ಉತ್ತಮ ಲಾಭ ಪಡೆಯಬಹುದು. ವಿದ್ಯಾವಂತ ಕೃಷಿಕರು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು’ ಎಂದು ಕಿವಿಮಾತು ಹೇಳಿದರು.

ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ದೇವರಾಜ್, ಮೀನು ಕೃಷಿ ರೈತ ಈಶ್ವರಪ್ಪ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಫಕ್ಕೀರಪ್ಪ,  ಕಾರ್ಪೊರೇಷನ್‌ ಬ್ಯಾಂಕ್‌ ವ್ಯವಸ್ಥಾಪಕ ರಾಘವೇಂದ್ರ, ಬಸವರಾಜ್‌ ಹಾಗೂ ಮೀನು ಕೃಷಿಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.