ADVERTISEMENT

ವರಿಷ್ಠರ ತೀರ್ಮಾನವೇ ಅಂತಿಮ ಎನ್ನುವ ಯಡಿಯೂರಪ್ಪ ಅವರ ಹೇಳಿಕೆ ಸ್ವಾಗತಾರ್ಹ : ಡಾ. ಡಿ.ಬಿ. ಗಂಗಪ್ಪ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 9:45 IST
Last Updated 31 ಡಿಸೆಂಬರ್ 2017, 9:45 IST

ಹೊನ್ನಾಳಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕೆಲ ಭಾಗಗಳಲ್ಲಿ ಘೋಷಣೆ ಮಾಡಿರುವ ಅಭ್ಯರ್ಥಿಗಳ ಹೆಸರು ಅಂತಿಮವಲ್ಲ ಎಂದು ನೀಡಿರುವ ಹೇಳಿಕೆ ಸ್ವಾಗತಾರ್ಹ ಎಂದು ಮಾಜಿ ಶಾಸಕ ಡಾ. ಡಿ.ಬಿ. ಗಂಗಪ್ಪ ಹಾಗೂ ಡಾ. ರಾಜ್‌ಕುಮಾರ್ ಹೇಳಿದರು.

ಶನಿವಾರ ಪಟ್ಟಣದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯ ದಾವಣಗೆರೆ, ಹರಿಹರ ಹಾಗೂ ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿವರ್ತನಾ ಯಾತ್ರೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಯಡಿಯೂರಪ್ಪ ಘೋಷಿಸಿದ್ದರು. ಇದು ಅಮಿತ್ ಷಾ ಗಮನಕ್ಕೆ ಹೋಗಿದ್ದರಿಂದ ಅವರು ಯಡಿಯೂರಪ್ಪ ಅವರಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡದಂತೆ ಸೂಚನೆ ನೀಡಿದ್ದರು. ಆದ್ದರಿಂದ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿ ನನ್ನ ಹೇಳಿಕೆ ಅಂತಿಮವಲ್ಲ ಎಂದು ಶಿವಮೊಗ್ಗದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

ಪಕ್ಷಕ್ಕೆ ದ್ರೋಹ ಬಗೆದವರನ್ನು ಬಿಟ್ಟು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಯಾರೇ ಆಗಲಿ ಅವರಿಗೆ ಟಿಕೆಟ್ ನೀಡಬೇಕು ಎನ್ನುವುದು ನಮ್ಮ ಒತ್ತಾಯ ಎಂದರು. ಸಂಸದ ಜಿ.ಎಂ. ಸಿದ್ದೇಶ್ವರ್ ಹಾಗೂ ಜಿಲ್ಲಾ ಅಧ್ಯಕ್ಷರು ಹೊನ್ನಾಳಿಯತ್ತ ಗಮನಹರಿಸಬೇಕು. ಇಲ್ಲಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಬೇಕು. ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳನ್ನು ಆಧರಿಸಿ ಟಿಕೆಟ್ ನೀಡಬೇಕು ಎಂದರು.

ADVERTISEMENT

ಎಂ.ಪಿ.ಆರ್ ಗೆ ಟಿಕೆಟ್ ಬೇಡ: ರೇಣುಕಾಚಾರ್ಯ ಅವರಿಗೆ ಟಿಕೆಟ್ ಕೊಡುವುದನ್ನು ನಾವುಗಳು ಪ್ರಬಲವಾಗಿ ವಿರೋಧಿಸುತ್ತೇವೆ. ವೇದಿಕೆಯಲ್ಲಿ ಎಲ್ಲವೂ ಒನ್ ಮ್ಯಾನ್ ಆರ್ಮಿಯಂತೆ ನಡೆಯಿತು. ಪಕ್ಷದ ಅಧ್ಯಕ್ಷ ಡಿ.ಜಿ. ರಾಜಪ್ಪ ಮೂಲೆ ಗುಂಪಾಗಿದ್ದರು.

ಜೆಡಿಎಸ್ ನಿಂದ ಬಿಜೆಪಿಗೆ ವಲಸೆ ಬಂದ ಜಿ.ಪಂ. ಸದಸ್ಯ ಮಹೇಶ್ ಅವರಿಗೆ ಮಾತನಾಡಲು ಅವಕಾಶ ನೀಡಿದ್ದು ಸರಿಯಲ್ಲ. ಇದರಿಂದ ಮೂಲ ಬಿಜೆಪಿಗರನ್ನು ಮೂಲೆಗುಂಪು ಮಾಡಲು ನೋಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈಗಲೂ ಕಾಲ ಮಿಂಚಿಲ್ಲ: ಸಂಸದ ಜಿ.ಎಂ. ಸಿದ್ದೇಶ್ವರ್ ಹಾಗೂ ಜಿಲ್ಲಾಧ್ಯಕ್ಷ ಯಶವಂತರಾವ್ ಅವರು ಕೂಡಲೇ ಹೊನ್ನಾಳಿಯ ವಿದ್ಯಾಮಾನಗಳತ್ತ ಗಮನ ಕೊಡಬೇಕು. ಇಲ್ಲಿನ ಬಹುತೇಕರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಬೇಕು. ಇಲ್ಲದಿದ್ದರೆ ಭಿನ್ನಮತದ ಭೂತ ಹೊನ್ನಾಳಿಯಿಂದಲೇ ಆರಂಭವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಬ್ಲಾಕ್ ಮೇಲ್ ನಿಂದ ಘೋಷಣೆ: ಪಕ್ಷದ ಮಾಜಿ ಅಧ್ಯಕ್ಷ ಎ.ಬಿ. ಹನುಮಂತಪ್ಪ ಮಾತನಾಡಿ, ರೇಣುಕಾಚಾರ್ಯ ಬ್ಲಾಕ್ ಮೇಲ್ ಮಾಡಿಯೇ ಮಂತ್ರಿಯಾದರು. ಈಗಲೂ ಅಷ್ಟೇ, ಯಡಿಯೂರಪ್ಪ ಅವರನ್ನು ಬ್ಲಾಕ್ ಮೇಲ್ ಮಾಡುವ ಮೂಲಕ ತಮ್ಮ ಹೆಸರನ್ನು ವೇದಿಕೆಯಲ್ಲಿಯೇ ಘೋಷಿಸುವಂತೆ ಒತ್ತಡ ಹಾಕಿದ್ದರಿಂದ ಯಡಿಯೂರಪ್ಪ ರೇಣುಕಚಾರ್ಯರ ಹೆಸರನ್ನು ಘೋಷಿಸಿದರು ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸತ್ತಿಗೆ ಲೋಕೇಶ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹನುಮನಹಳ್ಳಿ ಬಸವರಾಜಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಮೇಶ್ ಅರಬಗಟ್ಟೆ, ಎಪಿಎಂಸಿ ನಿರ್ದೇಶಕ ಜಗದೀಶ್, ಗ್ರಾ.ಪಂ. ಸದಸ್ಯ ತಿಪ್ಪೇಶ್, ಮುಖಂಡರಾದ ಶಂಕ್ರಣ್ಣ, ಡಿ.ಆರ್. ಶಂಭಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.