ADVERTISEMENT

ವಿದ್ಯಾಕೇಂದ್ರದಲ್ಲಿ ಸಂಚಾರವೇ ದುಸ್ತರ

ತೀರದ ರಸ್ತೆ ಸಮಸ್ಯೆ, ಹಂದಿಗಳ ಕಾಟಕ್ಕೆ ನಾಗರಿಕರು ಹೈರಾಣ, ಅನುದಾನದಲ್ಲಿ ತಾರತಮ್ಯ: ಆರೋಪ

ಎನ್.ನಾಗರಾಜ್
Published 10 ಜನವರಿ 2017, 8:48 IST
Last Updated 10 ಜನವರಿ 2017, 8:48 IST
ದಾವಣಗೆರೆ: ರಸ್ತೆಯಲ್ಲಿ ಹೆಜ್ಜೆಗೊಂದು ಗುಂಡಿ, ಕಾಲಿಗೆ ಎಡತಾಕುವ ಹಂದಿಗಳು, ಮೂಗಿಗೆ ಅಡರುವ ವಾಸನೆ...
 
ಇದು ನಗರದ 33ನೇ ವಾರ್ಡ್‌ನ ಸ್ಥಿತಿ. ಕೆ.ಟಿ.ಜೆ. ನಗರದ 17 ಮತ್ತು 18ನೇ ತಿರುವು, ಮೋತಿ ವೀರಪ್ಪ ಲೇಔಟ್‌, ಸಿದ್ದಗಂಗ ಶಾಲೆ ಹಿಂಭಾಗದ ಬಡಾವಣೆ, ಸಿದ್ದವೀರಪ್ಪ ಬಡಾವಣೆ, ಕೆ.ಬಿ.ಕಾಲೊನಿ, ಕೊರಚರಹಟ್ಟಿ, ಲೆನಿನ್‌ನಗರದ ಕೆಲ ಭಾಗ 33ನೇ ವಾರ್ಡ್‌ಗೆ ಸೇರುತ್ತವೆ.
 
ವಾರ್ಡ್‌ನಲ್ಲಿ ಪ್ರಮುಖ ಶಾಲೆ ಗಳಿದ್ದು, ಈ ಭಾಗದ ವಿದ್ಯಾಕೇಂದ್ರ ಎಂದೇ ಇದು ಹೆಸರು ಗುರುತಿಸಿ ಕೊಂಡಿದೆ. ನಿತ್ಯ ಸಾವಿರಾರು ವಿದ್ಯಾರ್ಥಿ ಗಳು ಓಡಾಡುತ್ತಾರೆ. ಆದರೆ, ಶಾಲೆ ಸಂಪರ್ಕಿಸುವ ರಸ್ತೆಗಳನ್ನೇ ಅಭಿವೃದ್ಧಿಪ ಡಿಸಿಲ್ಲ. ರಸ್ತೆ ಸಮಸ್ಯೆ, ಹಂದಿಗಳ ಕಾಟದಿಂದ ಸಂಚಾರಕ್ಕೆ ಕಷ್ಟವಾಗಿದೆ. 
 
‘ಕಲ್ಪತರು ಶಾಲೆ ರಸ್ತೆ, ಸಿದ್ದಗಂಗಾ ಶಾಲೆ ಹಿಂದಿನ ರಸ್ತೆ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿದ್ದೇವೆ. ಅಧಿಕಾರಿಗಳು, ಸಚಿವರನ್ನೂ ಭೇಟಿ ಮಾಡಿ, ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಇನ್ನಾದರೂ ರಸ್ತೆ, ಚರಂಡಿ ಅಭಿವೃದ್ಧಿಗೆ ಪಾಲಿಕೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸುತ್ತಾರೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕೆ.ಶಿವಶಂಕರ್.
 
‘33ನೇ ವಾರ್ಡ್ ಖಾಲಿ ನಿವೇಶನ ಗಳಲ್ಲಿ ಕೆಲವರು ಹಂದಿಗಳಿಗಾಗಿ ಕೊಳೆತ ಹಣ್ಣು, ಹಳಸಿದ ಆಹಾರ, ತ್ಯಾಜ್ಯ ತಂದು ಸುರಿಯುತ್ತಾರೆ. ಹೀಗಾಗಿ ವಾರ್ಡ್‌ನಲ್ಲಿ ಹಂದಿಗಳ ಕಾಟ ಹೆಚ್ಚಿದೆ. ಆರೋಗ್ಯ ಸಮಸ್ಯೆ ಕಾಡುತ್ತಿದೆ. ಹಂದಿ ನಿಯಂತ್ರಣಕ್ಕೆ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಬೇಕು’ ಎಂದು ಒತ್ತಾಯಿಸುತ್ತಾರೆ ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ಕೊಟ್ರೇಶ್ವರ. 
 
ನೀರಿನ ಸಮಸ್ಯೆ ತೀವ್ರ: ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ವಾರದಲ್ಲಿ ಎರಡು ಬಾರಿ ನೀರು ಬಿಡುವುದೂ ಕಷ್ಟ. ನೀರು ಬಂದರೂ ಸಾಕಾಗುವಷ್ಟು ಸರಬರಾಜು ಮಾಡುವುದಿಲ್ಲ. ಇದು ಸಮಸ್ಯೆ ಹೆಚ್ಚಿಸಿದೆ ಎಂದು ಹೇಳುತ್ತಾರೆ ಲೆನಿನ್‌ ನಗರ 1ನೇ ಕ್ರಾಸ್‌ ನಿವಾಸಿ ದುರ್ಗೇಶ್‌.
 
ತಾರತಮ್ಯ ಕಾರಣ: ‘ಪಾಲಿಕೆಯಲ್ಲಿ ಬಿಜೆಪಿಯ ಏಕೈಕ ಸದಸ್ಯ ನಾನು. ಕಾಂಗ್ರೆಸ್ ಅಧಿಕಾರದಲ್ಲಿದೆ. ಹೀಗಾಗಿ 33ನೇ ವಾರ್ಡ್‌ಗೆ ತಾರತಮ್ಯ ಮಾಡಲಾಗುತ್ತಿದೆ. ಮೂರು ವರ್ಷ ದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಅಧಿಕಾರಿಗಳು ಹೆಚ್ಚಿನ ಪೌರಕಾರ್ಮಿಕರನ್ನು ನೀಡುತ್ತಿಲ್ಲ. ಇದರಿಂದ ಸ್ವಚ್ಛತೆಗೆ, ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ತೊಂದರೆ ಯಾಗುತ್ತಿದೆ’ ಎಂದು ದೂರುತ್ತಾರೆ ವಾರ್ಡ್ ಸದಸ್ಯ ಡಿ.ಕೆ.ಕುಮಾರ್. 
 
ಕಾಂಗ್ರೆಸ್‌ನ ಕೆಲ ಸದಸ್ಯರ ವಾರ್ಡ್‌ಗಳಿಗೆ ಕೋಟಿಗಟ್ಟಲೆ ಅನುದಾನ ನೀಡಲಾಗುತ್ತಿದೆ. ಆದರೆ, ಮೂರು ವರ್ಷದಲ್ಲಿ ನಮ್ಮ ವಾರ್ಡ್‌ಗೆ ಪಾಲಿಕೆಯಿಂದ ₹ 20 ಲಕ್ಷ ಅನುದಾನ ನೀಡಲಾಗಿದೆ. ಹೀಗಿದ್ದರೂ ಮುಖ್ಯಮಂತ್ರಿ ಅನುದಾನ ಬಳಸಿ ಕೊಂಡು ಸುಮಾರು ₹ 2 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳ ಲಾಗಿದೆ.
 
ಇನ್ನಷ್ಟು ಅಭಿವೃದ್ಧಿ ಕೆಲಸಗಳಿಗೆ ಪಾಲಿಕೆ ಅನುದಾನ ಮಂಜೂರು ಮಾಡಿ ಸಹಕಾರ ನೀಡಬೇಕು ಎಂದು ಒತ್ತಾಯಿಸುತ್ತಾರೆ ಕುಮಾರ್. ಬರುವ ಅನುದಾನದಲ್ಲೇ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎನ್ನುತ್ತಾರೆ ಅವರು.
 
***
ಜನರಿಂದಲೇ ಸ್ವಚ್ಛತೆಗೆ ಕ್ರಮ
ಪಾಲಿಕೆಯಿಂದ ಕಸ ವಿಲೇವಾರಿಗೆ ಸೂಕ್ತ ಸ್ಪಂದನ ಸಿಗದ ಕಾರಣಕ್ಕೆ 33ನೇ ವಾರ್ಡ್‌ನ ಸಿದ್ದರಾಮೇಶ್ವರ ಬಡಾವಣೆಯ ನಿವಾಸಿಗಳೇ ತ್ಯಾಜ್ಯ ಸಂಸ್ಕರಣೆಗೆ ಕ್ರಮ ಕೈಗೊಂಡಿದ್ದಾರೆ.
 
‘ಮನೆ ಮನೆ ಕಸ ಸಂಗ್ರಹಿಸು ವಂತೆ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ 120 ಮನೆಗಳ ಕಸ ಸಂಗ್ರಹಕ್ಕೆ ವೈಯಕ್ತಿಕವಾಗಿ ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ’ ಎನ್ನುತ್ತಾರೆ ಕೆ.ಶಿವಶಂಕರ್. 
 
‘ಪ್ರತಿ ಮನೆಯಿಂದಲೂ ನಿತ್ಯ ಕಸ ಸಂಗ್ರಹಿಸಿ, ವಿಲೇವಾರಿ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತಿ ಮನೆಯಿಂದ ₹ 20 ಸಂಗ್ರಹಿಸಿ ಪೌರಕಾರ್ಮಿಕ ಸಿಬ್ಬಂದಿಗೆ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ ಶಿವಶಂಕರ್.
 
**
‘ಜಾಗ ಕೊಟ್ಟರೆ ಹಂದಿ ಸ್ಥಳಾಂತರ’ ‘ಪಾಲಿಕೆ ಅಧಿಕಾರಿಗಳು ಹಂದಿ ತೆರವು ಮಾಡಿ ಎನ್ನುತ್ತಾರೆ. ಆದರೆ, ಹಂದಿ ಸಾಕಣೆಗೆ ಜಾಗ, ಸೌಲಭ್ಯ, ಪ್ರೋತ್ಸಾಹ ನೀಡುತ್ತಿಲ್ಲ. ನಾವು ಹುಟ್ಟಿದಾಗಿನಿಂದ ಇದೇ ವೃತ್ತಿ ಮಾಡಿಕೊಂಡು ಬಂದಿದ್ದೇವೆ. ಜೀವನಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಹಂದಿ ಸಾಕಬೇಡಿ ಎಂದರೆ ನಾವು ಬದುಕುವುದು ಹೇಗೆ’ ಎಂದು ಪ್ರಶ್ನಿಸುತ್ತಾರೆ ಹಂದಿ ಸಾಕಣೆದಾರ ಪರಮೇಶ್‌.
 
‘ಜನಕ್ಕೆ ತೊಂದರೆ ನೀಡಿ ಹಂದಿ ಸಾಕಬೇಕು ಎಂಬ ದುರುದ್ದೇಶವಿಲ್ಲ. ನಾವು ಓದಿಲ್ಲ, ಈ ವೃತ್ತಿ ಬಿಟ್ಟರೆ ಬೇರೆ ಗೊತ್ತಿಲ್ಲ. ಪಾಲಿಕೆ ಕಸ ಗುಡಿಸುವ ಕೆಲಸ ಕೊಟ್ಟರೂ ಮಾಡುತ್ತೇವೆ. ನಗರದಲ್ಲಿ ಹಂದಿ ಸಾಕಬೇಡಿ ಎಂದು ಪಾಲಿಕೆ ಅಧಿಕಾರಿಗಳು ಸಭೆಗಳಲ್ಲಿ ತಾಕೀತು ಮಾಡುತ್ತಾರೆ. ಇದರಿಂದ ಪ್ರಯೋಜನವಿಲ್ಲ. ಪರ್ಯಾಯ ವ್ಯವಸ್ಥೆ ಮಾಡಬೇಕು. ವೈಜ್ಞಾನಿಕವಾಗಿ ಹಂದಿ ಸಾಕಲು ಸೌಲಭ್ಯ ಹಾಗೂ ತರಬೇತಿ ನೀಡಬೇಕು’ ಎಂದು ಒತ್ತಾಯಿಸುತ್ತಾರೆ ಮಂಜುನಾಥ್. 
 
‘ಹಂದಿ ಸಾಕಣೆ ಲಾಭದಾಯಕವಾಗಿ ಉಳಿದಿಲ್ಲ. ಹಂದಿಗಳಿಗೆ ಔಷಧ, ಚಿಕಿತ್ಸೆ, ಆಹಾರ ಎಂದು ಬಹಳಷ್ಟು ಖರ್ಚು ಬರುತ್ತದೆ. ಕೊಳಚೆ ಬಾಚಬೇಕು. ನಮ್ಮ ಆರೋಗ್ಯವೂ ಹಾಳಾಗುತ್ತದೆ. ಹೆಚ್ಚು ಲಾಭ ಬಾರದಿದ್ದರೂ ಬೇರೆ ವೃತ್ತಿ ಗೊತ್ತಿರದ ಕಾರಣ ಹಂದಿ ಸಾಕುತ್ತಿದ್ದೇವೆ. ಬೇರೆ ವ್ಯವಸ್ಥೆ ಮಾಡಿದರೆ ಹಂದಿ ಸಾಕಣೆ ವೃತ್ತಿಯನ್ನೇ ಬಿಡಲು ಸಿದ್ಧರಿದ್ದೇವೆ’ ಎನ್ನುತ್ತಾರೆ ಮಂಜುನಾಥ್.
 
**
‘ವಸತಿ ಮಧ್ಯೆ ಹಂದಿ ಗೂಡು’
‘ಜನವಸತಿ ಪ್ರದೇಶದಿಂದ ಹಂದಿ ಸಾಕಣೆ ಕೇಂದ್ರಗಳು ದೂರದಲ್ಲಿದ್ದರೆ ಒಳಿತು. ಆದರೆ, ಲೆನಿನ್‌ನಗರದ ಮಧ್ಯ ದಲ್ಲಿ ನೂರಾರು ಹಂದಿಗಳನ್ನು ಸಾಕುತ್ತಿದ್ದಾರೆ. ದುರ್ನಾತ ಹರಡಿಕೊಂಡಿದೆ. ಊಟ ಸೇರು ತ್ತಿಲ್ಲ. ಶುದ್ಧಗಾಳಿ ಇಲ್ಲದಾಗಿದೆ. ಪೌಷ್ಟಿಕ ಆಹಾರ ಸೇವಿಸಿದರೂ ಅನಾರೋಗ್ಯ ತಪ್ಪಿಲ್ಲ’ ಎನ್ನುತ್ತಾರೆ ನಿವೃತ್ತ ಶಿಕ್ಷಕಿ ಗಂಗಾ.
 
**
ಹಂದಿ ಹೊರ ಹಾಕುತ್ತೇವೆ ಎಂದು ಪಾಲಿಕೆ ಅಧಿಕಾರಿಗಳು ವಾರ್ಡ್‌ನಲ್ಲಿ 20 ಹಂದಿಗಳನ್ನಷ್ಟೇ ಸ್ಥಳಾಂತರಿಸಿ ದರು. ಒಂದೊಂದು ಹಂದಿಯೇ ಆರು ತಿಂಗಳಲ್ಲಿ ಅಷ್ಟೇ ಮರಿಗಳನ್ನು ಹಾಕುತ್ತದೆ. ಎಲ್ಲ ಹಂದಿಗಳನ್ನು ಸ್ಥಳಾಂತರಿಸದ ಹೊರತು ಸಮಸ್ಯೆ ಬಗೆಹರಿಯದು. 
–ಡಿ.ಕೆ.ಕುಮಾರ್,  33ನೇ ವಾರ್ಡ್‌ ಸದಸ್ಯ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.