ADVERTISEMENT

ವೀರಶೈವ ಸಮಾಜ ಸಂಘಟನೆಯಾಗಲಿ

ದಾವಣಗೆರೆ ಜಿಲ್ಲಾ ವೀರಶೈವ ಲಿಂಗಾಯತರ ಸಮಾವೇಶದಲ್ಲಿ ಜ್ಯೋತಿ ಪ್ರಕಾಶ್‌ ಮಿರ್ಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 4:25 IST
Last Updated 27 ಮಾರ್ಚ್ 2017, 4:25 IST
ದಾವಣಗೆರೆ ಅಭಿನವ ರೇಣುಕಾ ಮಂದಿರದಲ್ಲಿ ಭಾನುವಾರ ವೀರಶೈವ ಸಂಘರ್ಷ ಸಮಿತಿ ಆಯೋಜಿಸಿದ್ದ ಜಿಲ್ಲಾ ವೀರಶೈವ ಲಿಂಗಾಯತರ ಸಮಾವೇಶವನ್ನು ನಿವೃತ್ತ ಐಪಿಎಸ್‌ ಅಧಿಕಾರಿ ಜ್ಯೋತಿ ಪ್ರಕಾಶ್‌ ಮಿರ್ಜಿ ಹಾಗೂ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಉಮಾ ಎಂ.ಪಿ.ರಮೇಶ್‌ ಉದ್ಘಾಟಿಸಿದರು.
ದಾವಣಗೆರೆ ಅಭಿನವ ರೇಣುಕಾ ಮಂದಿರದಲ್ಲಿ ಭಾನುವಾರ ವೀರಶೈವ ಸಂಘರ್ಷ ಸಮಿತಿ ಆಯೋಜಿಸಿದ್ದ ಜಿಲ್ಲಾ ವೀರಶೈವ ಲಿಂಗಾಯತರ ಸಮಾವೇಶವನ್ನು ನಿವೃತ್ತ ಐಪಿಎಸ್‌ ಅಧಿಕಾರಿ ಜ್ಯೋತಿ ಪ್ರಕಾಶ್‌ ಮಿರ್ಜಿ ಹಾಗೂ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಉಮಾ ಎಂ.ಪಿ.ರಮೇಶ್‌ ಉದ್ಘಾಟಿಸಿದರು.   
ದಾವಣಗೆರೆ: ‘ಒಳಪಂಗಡಗಳ ಜಗಳ, ತಾರತಮ್ಯ ಧೋರಣೆಯ ಮನೋಭಾವ ದಿಂದಾಗಿ ವಿಂಗಡಣೆಯಾಗಿರುವ ವೀರ ಶೈವ ಲಿಂಗಾಯತ ಸಮಾಜವನ್ನು ಸಂಘ ಟಿಸಿ ಬೃಹತ್‌ ಬೇಲಿ ನಿರ್ಮಿಸುವ ಕಾರ್ಯ ವಾಗಬೇಕಿದೆ’ ಎಂದು ವೀರಶೈವ ಸಂಘರ್ಷ ಸಮಿತಿಯ ಗೌರವ ಸಲಹೆ ಗಾರ, ನಿವೃತ್ತ ಐಪಿಎಸ್‌ ಅಧಿಕಾರಿ ಜ್ಯೋತಿ ಪ್ರಕಾಶ್‌ ಮಿರ್ಜಿ ಹೇಳಿದರು.
 
ನಗರದ ರೇಣುಕಾ ಮಂದಿರದಲ್ಲಿ ಭಾನುವಾರ ವೀರಶೈವ ಸಂಘರ್ಷ ಸಮಿತಿ ಆಯೋಜಿಸಿದ್ದ ಜಿಲ್ಲಾ ವೀರಶೈವ ಲಿಂಗಾಯತರ ಸಮಾವೇಶವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
 
‘ಸಮುದಾಯದ ಯುವಕರಲ್ಲಿ ಲಿಂಗಾಯತ ಧರ್ಮದ ಬಗ್ಗೆ ಹಾಗೂ ಸಂಘಟನೆಯ ಅರಿವಿನ ಕೊರತೆ ಇದೆ. ಪುರಾತನ ಧರ್ಮದ ಇತಿಹಾಸಕ್ಕೆ ಸೇರಿ ರುವ ಸಮುದಾಯದ ಜನರು ಇಂದಿಗೂ ಹಕ್ಕು–ಬಾಧ್ಯತೆಗಳಿಗಾಗಿ ಹೋರಾಟ ನಡೆಸುತ್ತಿರುವುದು ಬೇಸರದ ಸಂಗತಿ’ ಎಂದರು.
 
‘ಸಮಾಜದ ಜನರ ವಿಂಗಡಣೆ ಹಾಗೂ ಒಳಪಂಗಡಗಳ ಜಗಳಕ್ಕೆ ಪ್ರಭಾವಿ ಹಿತಾಸಕ್ತಿಗಳೇ ಕಾರಣ. ಅಂತಹ ಸ್ವಾರ್ಥ ಹಿತಾಸಕ್ತಿಗೆ ನೀವು ಬಲಿಯಾಗುತ್ತಿದ್ದೀರಿ’ ಎಂದು ಹೇಳಿದರು.
 
‘ಲಿಂಗಾಯತ ಧರ್ಮ ಶ್ರೇಷ್ಠ ಧರ್ಮವಾಗಿದೆ. ಈ ಬಗ್ಗೆ ಮಕ್ಕಳಿಗೆ ಹಾಗೂ ಯುವ ಸಮುದಾಯಕ್ಕೆ ತಿಳಿ ಹೇಳುವ ಅವಶ್ಯವಿದೆ. ಆದರೆ, ಇದಾಗುತ್ತಿಲ್ಲ. ಲಿಂಗಾಯತ ಧರ್ಮವು ಬೇಲಿ ಇಲ್ಲದ ಹೊಲದಂತಾಗಿದೆ. ಯಾರು ಬೇಕಾದರೂ ಒಳ ಪ್ರವೇಶಿಸಿ, ತಮ್ಮ ಹಿತಾಸಕ್ತಿಯನ್ನು ಸಾಧಿಸಿ ಕೊಳ್ಳಬಹುದಾಗಿದೆ. ಇದಕ್ಕೆ ಯಾರೂ ಅವಕಾಶ ನೀಡಬಾರದು’ ಎಂದು ಕಿವಿಮಾತು ಹೇಳಿದರು.
 
‘ಸ್ವಾರ್ಥ ಹಿತಾಸಕ್ತಿಗಾಗಿ ಸಮುದಾಯದ ಜನರನ್ನು ಬಳಸಿಕೊಳ್ಳುವ ವ್ಯಕ್ತಿಗಳನ್ನು ನೀವು ತಿರಸ್ಕರಿಸಬೇಕು. ದೃಢ ನಿರ್ಧಾರದಿಂದ ಶಿಸ್ತುಬದ್ಧವಾಗಿ ಸಂಘಟಿತರಾದಲ್ಲಿ ಸರ್ಕಾರವೇ ನಿಮ್ಮ ಬಳಿ ಬರುತ್ತದೆ’ ಎಂದು ಹೇಳಿದರು.
 
ಮುಖಂಡ ಎಚ್‌.ಎಸ್‌.ನಾಗರಾಜ್‌ ಮಾತನಾಡಿ, ‘ವೀರಶೈವ ಲಿಂಗಾಯತ ಸಮುದಾಯದ ಜನರಲ್ಲಿ ಒಗ್ಗಟ್ಟಿನ ಕೊರತೆ ಇದೆ. ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ ಸಮುದಾಯದ ಜನರಲ್ಲಿ ಸಮಾನತೆಯೇ ಕಾಣುತ್ತಿಲ್ಲ. ಅವರವರ ಸ್ವಾರ್ಥಕ್ಕಾಗಿ ಸಮಾಜವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
‘ವೀರಶೈವ ಲಿಂಗಾಯತ ಸಮುದಾಯದಲ್ಲಿನ ಒಳಪಂಗಡಗಳನ್ನು ಸ್ತಬ್ಧ ಮಾಡಬೇಕಿದೆ. ಒಳಪಂಗಡಗಳು ಬೇಡ ನಾವೇಲ್ಲರೂ ಒಂದೇ ಎಂಬ ಭಾವನೆ ಬರಲಿ. ಸಮುದಾಯದ ಜನರಲ್ಲಿ ಒಗ್ಗಟ್ಟು ಮೂಡದಿದ್ದರೆ ಸಮುದಾಯ ಜನರ ಪ್ರಗತಿ ಸಾಧ್ಯವಿಲ್ಲ’ ಎಂದರು.
 
‘ವೀರಶೈವ ಮಹಾಸಭಾ ಎಲ್ಲಿದೆ? ಅದರ ಕಾರ್ಯವೈಖರಿ ಏನು? ಎಂಬುದರ ಬಗ್ಗೆಯೂ ಚಿಂತನೆ ನಡೆಸಬೇಕು. ಜಾತಿ ಎನ್ನುವುದು ಹೋರಾಟದ ಸಂಕೇತ. ವೀರಶೈವ ಲಿಂಗಾಯತ ಸಮುದಾಯದ ಜನರ ಅಭಿವೃದ್ಧಿಯ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದರು.
 
ವೀರಶೈವ ಸಂಘರ್ಷ ಸಮಿತಿಯ ರಾಜ್ಯ ಉಪಾಧ್ಯಕ್ಷ ಶಂಕರ್‌ಗೌಡ ಬಿರಾದಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ‘ಜಗತ್ತಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ನೀಡಿದ ಲಿಂಗಾಯತ ಸಮುದಾಯವೇ ಇಂದು ಸಾಮಾಜಿಕ ನ್ಯಾಯದಿಂದ ವಂಚಿತವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
 
‘ವೀರಶೈವ ಲಿಂಗಾಯತ ಸಮುದಾಯದಲ್ಲಿನ ಉಪ ಪಂಗಡಗಳ ನಿರ್ಮೂಲನೆಯಾದಲ್ಲಿ ಮಾತ್ರ ಒಗ್ಗಟ್ಟು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಚಿಂತನೆ ನಡೆಸಬೇಕು’ ಎಂದು ಹೇಳಿದರು.
 
ಸಮಾವೇಶದ ಅಂಗವಾಗಿ ಕಾರ್ಯಕ್ರಮದ ಮುನ್ನಾ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಉಮಾ ಎಂ.ಪಿ.ರಮೇಶ್‌ ಅಧ್ಯಕ್ಷತೆ ವಹಿಸಿದ್ದರು.
 
ವೀಣಾ ಕಾಶಂಪುರ್, ಎಂ.ಎನ್‌.ಜೆ.ಬಿ.ಆರಾಧ್ಯ, ಅಮೃತೇಶ್‌, ದೇವರಮನಿ ಗಿರೀಶ್‌, ಡಿ.ವಿ.ಪ್ರಶಾಂತ್‌, ಜಿ.ಸುರೇಂದ್ರಪ್ಪ, ಪಾಲಿಕೆ ಸದಸ್ಯ ಕುಮಾರ್‌, ಅಜಯ್‌, ಸೋಮಣ್ಣ, ಬೂಸನೂರು ವಿಶ್ವನಾಥ, ಒಣರೊಟ್ಟಿ ಮಹಾಂತೇಶ್‌ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ಸಹನಾ ಮಂಜುನಾಥ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.