ADVERTISEMENT

ಶ್ರೇಷ್ಠ ಕನಸು ಯಶಸ್ಸಿನ ಗುಟ್ಟು

ಆಕ್ಟಗಾನ್ ಯೂತ್‌ ಕಾರ್ನಿವಾಲ್‌ನಲ್ಲಿ ಪೂರ್ವ ವಲಯ ಐಜಿಪಿ ಸಲೀಂ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 4:49 IST
Last Updated 18 ಫೆಬ್ರುವರಿ 2017, 4:49 IST
ದಾವಣಗೆರೆ: ಶ್ರೇಷ್ಠ ಕನಸುಗಳು, ನಿರ್ದಿಷ್ಟ ಗುರಿಗಳು ಯುವ ಸಮೂಹಕ್ಕೆ ಯಶಸ್ಸು ತಂದುಕೊಡಬಲ್ಲವು ಎಂದು ಐಜಿಪಿ ಡಾ.ಎಂ.ಎ.ಸಲೀಂ ಹೇಳಿದರು.
 
ನಗರದ ಬಾಪೂಜಿ ಬಿ ಸ್ಕೂಲ್‌ನ ಎಂಬಿಎ ಸಭಾಂಗಣದಲ್ಲಿ ಏರ್ಪಡಿಸಿರುವ ಆಕ್ಟಗಾನ್ ಯೂತ್‌ ಕಾರ್ನಿವಾಲ್ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
 
ಸಾಧಿಸುವ ಸಾಮರ್ಥ್ಯ ಯುವಜನರಿಗಿರುತ್ತದೆ. ಆದರೆ, ಅವರನ್ನು ಸಾಧನೆ ಮಾಡುವಂತೆ ಪ್ರೇರೇಪಿಸುವ ಕೆಲಸವಾಗಬೇಕಿದೆ ಎಂದರು.
ಭಾರತೀಯ ಯುವಕರ ಸಾಧನೆ ಗಣನೀಯ:  ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್‌ ಸಿಇಒ ನವೀನ್‌ ಝಾ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ದೇಶದ ಯುವಕರ ಸಾಧನೆ ಗಮನಿಸಿದರೆ ಹೆಮ್ಮೆ ಎನಿಸುತ್ತದೆ. ಶತಕೋಟಿ ಡಾಲರ್‌ ವಹಿವಾಟು ನಡೆಸುತ್ತಿರುವ ಸಂಸ್ಥೆಗಳಲ್ಲಿ ಹೆಚ್ಚಿನವು ಭಾರತೀಯ ಯುವಕರು ಸ್ಥಾಪಿಸಿದ ಕಂಪೆನಿಗಳಾಗಿವೆ ಎಂದರು.
 
30 ವರ್ಷಗಳ ಹಿಂದೆ ಸಂವಹನ ಸಾಧನಗಳು, ಸೌಲಭ್ಯಗಳು ಮಿತಿಯಲ್ಲಿದ್ದವು. ಆದರೂ ಆಗಿನವರ ಸಾಧನೆ ಶ್ರೇಷ್ಠ ಮಟ್ಟದ್ದು. ಆದರೆ, ಬೆರಳತುದಿಯಲ್ಲೇ ಎಲ್ಲ ಮಾಹಿತಿ ಸಿಗುತ್ತದೆ. ಅವರು ಬಯಸಿದ ಎಲ್ಲ ಸೌಲಭ್ಯಗಳೂ ಲಭ್ಯವಿವೆ. ಹೀಗಾಗಿ ಸಾಧನೆಗೆ ಮಿತಿಯಿಲ್ಲದಾಗಿದೆ. ಯಶಸ್ಸು ಗಳಿಸದಿದ್ದರೆ ಅದು ಯುವಕರ ಮಿತಿ ಎಂದು ತಿಳಿಸಿದರು.
 
ಬಾಪೂಜಿ ಬಿ ಸ್ಕೂಲ್‌ ಅಧ್ಯಕ್ಷ ಅಥಣಿ ಎಸ್. ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಎಚ್‌.ವಿ.ಸ್ವಾಮಿ ತ್ರಿಭುವಾನಂದ ಇದ್ದರು.
ರಾಜ್ಯದ ವಿವಿಧ ಭಾಗಗಳ 27 ಕಾಲೇಜುಗಳ 220 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
 
ಬದುಕನ್ನು ಲಾರಿ ಚಕ್ರಕ್ಕೆ ಬಲಿ ನೀಡಬೇಡಿ...
 
ದಾವಣಗೆರೆ ನಗರದಲ್ಲಿ ವರ್ಷಕ್ಕೆ ಸರಾಸರಿ 320 ಮಂದಿ ಅಪಘಾತ ಗಳಲ್ಲಿ ಸಾಯುತ್ತಾರೆ. ಬೈಕ್‌ ಸವಾರರು ಹೆಲ್ಮೆಟ್‌, ಕಾರು ಚಾಲಕರು ಸೀಟ್‌ ಬೆಲ್ಟ್‌ ಕಡ್ಡಾಯವಾಗಿ ಧರಿಸಬೇಕು. ಸಂಚಾರ ನಿಯಮಗಳನ್ನು ಶಿಸ್ತಿನಿಂದ ಪಾಲಿಸಿ, ಜೀವ ಅಮೂಲ್ಯ.  ಅದನ್ನು ಲಾರಿ ಚಕ್ರಗಳಿಗೆ ಬಲಿ ಕೊಡ ಬೇಡಿ ಎಂದು ಸಲೀಂ ಮನವಿ ಮಾಡಿದರು.

ದಾವಣಗೆರೆ ಸುಂದರ ನಗರ. ಸ್ಮಾರ್ಟ್‌ಸಿಟಿಯಾಗಿ ಅಭಿವೃದ್ಧಿಯಾ ಗುತ್ತಿದೆ. ಸಂಚಾರ ವ್ಯವಸ್ಥೆಯೂ ಸ್ಮಾರ್ಟ್‌ ಆಗಬೇಕು. ಇದರಿಂದ ನಗರ ಇನ್ನಷ್ಟು ಜೀವನ ಸ್ನೇಹಿಯಾಗುತ್ತದೆ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.