ADVERTISEMENT

`ಸಂಸತ್'ನಲ್ಲಿ ಪ್ರತಿಧ್ವನಿಸಿದ ದೆಹಲಿ ಯುವತಿ ಅತ್ಯಾಚಾರ!

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2012, 9:57 IST
Last Updated 30 ಡಿಸೆಂಬರ್ 2012, 9:57 IST

ದಾವಣಗೆರೆ: ಸಂಸತ್‌ನಲ್ಲಿ ಪ್ರತಿಧ್ವನಿಸಿದ ದೆಹಲಿ ಯುವತಿ ಅತ್ಯಾಚಾರ ಪ್ರಕರಣ, ಕಾವೇರಿದ ಕಾವೇರಿ ಚರ್ಚೆ, ಸಿಲಿಂಡರ್ ಮಿತಿ ವಿರುದ್ಧ ಆಕ್ರೋಶ. ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಖಂಡನೆ. ಪ್ರತಿಪಕ್ಷ ಸದಸ್ಯರಿಂದ ಸಭಾತ್ಯಾಗ...!

-ಇದು ಲೋಕಸಭೆಯಲ್ಲಿ ನಡೆದ ಚಿತ್ರಣವಾಗಲೀ, ರಾಜ್ಯ ವಿಧಾನಸಭೆಯಲ್ಲಿ ನಡೆದ ಘಟನಾವಳಿಗಳಾಗಲಿ ಅಲ್ಲ! ಶನಿವಾರ ನಗರದ ಸಿದ್ಧಗಂಗಾ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ನಡೆದ ಪ್ರದರ್ಶನ.

ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಹೇಗೆ ಕಲಾಪಗಳು ನಡೆಯುತ್ತವೆ ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸದನದಲ್ಲಿ ಜನಪ್ರತಿನಿಧಿಗಳು ನಡೆಸುವ ಕಲಾಪದ ಮಾದರಿಯಲ್ಲೇ ಶಾಲಾ ಮಕ್ಕಳು ಸಹ ಅಣಕು ಕಲಾಪ ನಡೆಸಿದ್ದು ವಿಶೇಷವಾಗಿತ್ತು. ಆಡಳಿತ ಪಕ್ಷದ ಮುಖಂಡರನ್ನು ಪ್ರತಿಪಕ್ಷಗಳ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡ ಸನ್ನಿವೇಶ ಎಲ್ಲರ ಗಮನ ಸೆಳೆಯಿತು. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಮಕ್ಕಳು ಸದನದಲ್ಲಿ ಚರ್ಚಿಸಿದರು.

ದೆಹಲಿಯಲ್ಲಿ ಈಚೆಗೆ ಯುವತಿಯ ಅತ್ಯಾಚಾರ ಖಂಡಿಸಿ ಮಕ್ಕಳು ಸದನದಲ್ಲಿ ಸಭಾತ್ಯಾಗ ನಡೆಸಿದರು. ಅತ್ಯಾಚಾರ ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಸದನದಲ್ಲಿ ರಾಜಕಾರಣಿಗಳು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮಕ್ಕಳು ಅಣಕು ಪ್ರದರ್ಶನದ ಮೂಲಕ ತೋರಿಸಿಕೊಟ್ಟಿದ್ದು ವಿಶೇಷವಾಗಿತ್ತು.

ಸ್ಪರ್ಧೆಯಲ್ಲಿ ಜಗಳೂರಿನ ನವಚೇತನ ಆಂಗ್ಲ ಮಾಧ್ಯಮ ಶಾಲೆ, ಹೊನ್ನಾಳಿಯ ಸರ್ಕಾರಿ ಶಾಲೆ, ಹರಿಹರದ ರಾಜನಹಳ್ಳಿ ಶಾಲೆ, ಹರಪನಹಳ್ಳಿಯ ವೀರಶೈವ ವಿದ್ಯಾವರ್ಧಕ ಸಂಘ, ಚನ್ನಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜು, ನಗರದ ಮುದೇಗೌಡ್ರ ಮಲ್ಲಪ್ಪ ಮುರಿಗೆಪ್ಪ ಶಾಲಾ ಮಕ್ಕಳು ಭಾಗವಹಿಸಿದ್ದರು.

ಆಂಜನಿ ಉದ್ಘಾಟಿಸಿದರು. ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಗುರುಪ್ರಸಾದ್, ಬಸವಲಿಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿವನಗೌಡ ಪಾಟೀಲ್, ಸಿದ್ದಪ್ಪ, ಸಿದ್ಧಗಂಗಾ ಶಿವಣ್ಣ, ಶಿಕ್ಷಕಿ ಡಿಸೋಜಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.