ADVERTISEMENT

ಸರ್ಕಾರದಿಂದ ಬರ ನಿವಾರಣೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 10:15 IST
Last Updated 17 ಮಾರ್ಚ್ 2018, 10:15 IST

ಜಗಳೂರು: ‘ಬರಪೀಡಿತ ತಾಲ್ಲೂಕಿನ ಜೀವನಾಡಿಯಾಗಿರುವ ಕೆರೆಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕ್ರಮ ಅತ್ಯಂತ ಮಹತ್ವದ್ದಾಗಿದೆ' ಎಂದು ಶಾಸಕ ಎಚ್‌.ಪಿ. ರಾಜೇಶ್ ಹೇಳಿದರು.

46 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ನೇರ ವೇತನಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯ್ತಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ಕಾರದ ಮೇಲೆ ನಿರಂತರ ಒತ್ತಡ ತಂದ ಪರಿಣಾಮ ತಾಲ್ಲೂಕಿನ 52 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ಹರಿಸುವ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಿರಿಗೆರೆ ಸ್ವಾಮೀಜಿ ಶ್ರಮದಿಂದಾಗಿ ಯೋಜನೆ ಸಾಕಾರಗೊಳ್ಳಲು ಸಾಧ್ಯವಾಗಿದೆ.

ADVERTISEMENT

ಬಯಲುಸೀಮೆಯ ಕೆರೆಗಳು ವರ್ಷಪೂರ್ತಿ ತುಂಬಿದ್ದರೆ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಳವಾಗಿ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ಬರ ನಿವಾರಣೆಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮ್ಯಯ ಅವರ ಜನಪರ ಕಾಳಜಿಯಿಂದಾಗಿ ಇಂಥ ಸಾಕಷ್ಟು ಉತ್ತಮ ಯೋಜನೆಗಳು ಜಾರಿಯಾಗಿವೆ ಎಂದರು.

ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ಈ ಹಿಂದೆ ಸಂಗ್ರಹವಾದ ಕಂದಾಯ ಶುಲ್ಕದ ಹಣದಲ್ಲಿ ವೇತನ ಪಾವತಿ ಮಾಡಲಾಗುತ್ತಿತ್ತು. ಆದರೆ, ಬಹುತೇಕ ಸಿಬ್ಬಂದಿಗೆ ವರ್ಷಗಟ್ಟಲೆ ವೇತನ ಸಿಗದೇ ಅವರ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕುತ್ತಿದ್ದವು. ಸಮಸ್ಯೆ ಮನಗಂಡು ರಾಜ್ಯ ಸರ್ಕಾರ ನೇರವಾಗಿ ವೇತನ ಮಂಜೂರು ಮಾಡಲು ಆದೇಶಿಸಿದೆ. ಇದರಿಂದ ಸರ್ಕಾರಕ್ಕೆ ₹ 679 ಕೋಟಿ ಹೊರೆಯಾಗಲಿದೆ ಎಂದು ರಾಜೇಶ್‌ ತಿಳಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್‌ ಮಾತನಾಡಿ, ‘30 ವರ್ಷಗಳ ನಿರಂತರ ಹೋರಾಟ ಫಲವಾಗಿ ಸಿದ್ದರಾಮಯ್ಯ ಅವರು ಮಾನವೀಯ ನೆಲೆಗ್ಟಟಿನಲ್ಲಿ ಗ್ರಾಮ ಪಂಚಾಯ್ತಿ ನೌಕರರ ನೆರವಿಗೆ ಧಾವಿಸಿದ್ದಾರೆ. ₹ 50ನಿಂದ ₹ 13 ಸಾವಿರದವರೆಗೆ ವೇತನ ಹೆಚ್ಚಳ ಆಗಿರುವುದರ ಹಿಂದೆ ಹೋರಾಟ ಪ್ರಮುಖ ಪಾತ್ರ ವಹಿಸಿದೆ’ ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಶಿವಾನಂದಪ್ಪ, ಉಪಾಧ್ಯಕ್ಷ ಬಸವರಾಜ್‌ ಮುದೇಗೌಡ್ರ, ಸದಸ್ಯರಾದ ಮರೇನಹಳ್ಳಿ ಬಸವರಾಜ್‌, ಕುಬೇಂದ್ರಪ್ಪ, ತಿಪ್ಪೇಸ್ವಾಮಿ, ಬಸವರಾಜ್‌ ಬಿದರಕೆರೆ, ಎ.ಡಿ. ಮೋಹನ್‌, ನೀಲಾ, ನೌಕರರ ಸಂಘದ ಅಧ್ಯಕ್ಷ ಮಹಾಂತೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.