ADVERTISEMENT

ಸರ್ಕಾರದ ಹಿಂದೂ ವಿರೋಧಿ ಧೋರಣೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 8:38 IST
Last Updated 5 ಡಿಸೆಂಬರ್ 2017, 8:38 IST

ದಾವಣಗೆರೆ: ಸಂಸದ ಪ್ರತಾಪ ಸಿಂಹ ಬಂಧನ ಖಂಡನೀಯ. ಅವರ ವಿರುದ್ಧ ಪೊಲೀಸರು ದಾಖಲಿಸಿದ ಪ್ರಕರಣಗಳನ್ನು ಸರ್ಕಾರ ತಕ್ಷಣಕ್ಕೆ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.

ಪಕ್ಷದ ಜಿಲ್ಲಾ ಕಚೇರಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಯದೇವ ವೃತ್ತದಿಂದ ಗಾಂಧಿವೃತ್ತದ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಹನುಮ ಜಯಂತಿ ಆಚರಣೆಗೆ ಅನುಮತಿ ನಿರಾಕರಿಸಿದ್ದಲ್ಲದೇ, ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷರೂ ಆದ ಪ್ರತಾಪ ಸಿಂಹ ಅವರನ್ನು ಬಂಧಿಸಿರುವುದು ಅಕ್ಷಮ್ಯ ಅಪರಾಧ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸಂಸದರನ್ನು ಬಂಧಿಸಿದ ನಂತರ ಸತತ 8 ಗಂಟೆಗಳವರೆಗೆ ಸುತ್ತಾಡಿಸಿ ನಂತರ ಬಿಳಿಗೆರೆ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಲಾಗಿದೆ. ಅವರನ್ನು ಈ ವೇಳೆ ಪೊಲೀಸರು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ದೂರಿದರು.

ಸಮಾಜಬಾಹಿರ ಶಕ್ತಿಗಳಾದ ಕೆಎಫ್‌ಐ ಹಾಗೂ ಪಿಎಫ್‌ಡಿ ಸಂಘಟನೆಗಳ ಬಗ್ಗೆ ಮೃದು ಧೋರಣೆ ಹೊಂದಿರುವ ರಾಜ್ಯ ಸರ್ಕಾರ, ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎನ್ನುವುದಕ್ಕೆ ಹುಣಸೂರಿನಲ್ಲಿ ನಡೆದ ಘಟನೆಯೇ ಸಾಕ್ಷಿ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭಾಗವಹಿಸಬೇಕಿದ್ದ ಸಭಾ ಕಾರ್ಯಕ್ರಮಕ್ಕೂ ನೀಡಿದ ಅನುಮತಿಯನ್ನು ಹಿಂಪಡೆಯಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಬಿಜೆಪಿ ಹಿರಿಯ ಮುಖಂಡ ಎಸ್‌.ಎ.ರವೀಂದ್ರನಾಥ್, ಮಾಜಿ ಶಾಸಕ ಬಸವರಾಜ ನಾಯ್ಕ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್, ಪದಾಧಿಕಾರಿಗಳಾದ ಎಚ್‌.ಎನ್‌.ಶಿವಕುಮಾರ್, ರಾಜನಹಳ್ಳಿ ಶಿವಕುಮಾರ್, ಪಿ.ಸಿ.ಶ್ರೀನಿವಾಸ್, ಶಿವನಗೌಡ ಪಾಟೀಲ, ಟಿಂಕರ್‌ ಮಂಜಣ್ಣ, ಶ್ರೀಕಾಂತ್ ನೀಲಗುಂದ, ಎಚ್‌.ಕೆ.ಬಸವರಾಜ್, ಕೆ.ಎನ್‌.ಓಂಕಾರಪ್ಪ, ಬಿ.ರಮೇಶ್‌ನಾಯ್ಕ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.