ADVERTISEMENT

‘ಸಾಮರಸ್ಯದಿಂದ ಬದುಕೋಣ’

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:58 IST
Last Updated 25 ಮೇ 2017, 5:58 IST

ಹರಿಹರ: ‘ವದಂತಿಗಳಿಂದ ಗೊಂದಲದ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಗ್ರಾಮದ ಶಾಂತಿ ಕದಡುವ ಬದಲು ಸಾಮರಸ್ಯದ ಬದುಕು ಸಾಗಿಸೋಣ’ ಎಂದು ಬನ್ನಿಕೋಡು ಗ್ರಾಮ ಪಂಚಾಯ್ತಿ ಅಧ್ಯಕ್ಷ ವಾಗೀಶ ಸ್ವಾಮಿ ಸಲಹೆ ನೀಡಿದರು.

ನಗರದ ವೃತ್ತ ನಿರೀಕ್ಷಕರ ಕಚೇರಿ ಆವರಣದಲ್ಲಿ ಬುಧವಾರ ನಡೆದ ಬನ್ನಿಕೋಡು ಗ್ರಾಮಸ್ಥರ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ‘ಗ್ರಾಮದಲ್ಲಿ ನಡೆದ ಅಹಿತಕರ ಘಟನೆಯನ್ನು ಮರೆತು ಹೊಂದಿಕೊಂಡು ಜೀವನ ನಡೆಸೋಣ. ಸರ್ಕಾರ, ಹಿಂದುಳಿದ, ದಲಿತ ವರ್ಗಕ್ಕೆ ನೀಡಿರುವ ಸೌಲಭ್ಯಗಳನ್ನು ಬಳಸಿಕೊಂಡು ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸಬೇಕು’ ಎಂದು ಹೇಳಿದರು.

ಗ್ರಾಮದ ಮುಖಂಡ ಹನುಮಗೌಡ ಮಾತನಾಡಿ, ‘ಗ್ರಾಮದ ಎಲ್ಲ ವರ್ಗಗಳ ಹಿರಿಯರು ಇಲ್ಲಿಯವರೆಗೆ ಒಟ್ಟಾಗಿ ಜೀವನ ನಡೆಸಿದ್ದೇವೆ. ಕೆಲವರ ಆತುರದ ನಿರ್ಧಾರ ಗ್ರಾಮದ ಸ್ವಾಸ್ಥ್ಯವನ್ನು ಹಾಳುಮಾಡಿದೆ. ಎಲ್ಲರೂ ಒಟ್ಟಿಗೆ ಕುಳಿತು ಚರ್ಚಿಸಿದರೆ, ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ’ ಎಂದು ತಿಳಿಸಿದರು.

ಗ್ರಾಮದ ವಾಗೀಶ ಮಾತನಾಡಿ, ‘ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಜೀವಂತವಿದೆ. ನಾವು ಯಾರದ್ದೇ ಸ್ವತ್ತನ್ನು ಕೇಳುತ್ತಿಲ್ಲ. ನಮಗಿರುವ ಸಂವಿಧಾನ ಬದ್ಧ ಹಕ್ಕನ್ನು ನೀಡಿ ಎಂದು ಕೇಳಿದ್ದೇವೆ. ಜಾತಿ ತಾರತಮ್ಯ ನಿಲ್ಲಿಸಿ ಎಲ್ಲರನ್ನು ಸಮಾನವಾಗಿ ಕಾಣಬೇಕು’ ಎಂದರು.

ಗ್ರಾಮಸ್ಥ ಹನುಮಂತಪ್ಪ ಮಾತನಾಡಿ, ‘ಎಲ್ಲರೂ ಸಾಮರಸ್ಯದ ಬದುಕು ನಡೆಸುತ್ತಿದ್ದೇವೆ. ಆದರೆ, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಬಂದಾಗ ಕೆಲವರು ಅಸ್ಪೃಶ್ಯತೆ ಆಚರಣೆ ಇದೆ ಎಂದು ದೂರುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಿಪಿಐ ಜೆ.ಎಸ್.ನ್ಯಾಮಗೌಡ ಮಾತನಾಡಿ, ‘ಪೂರ್ವಜರು ನಡೆಸುತ್ತಿದ್ದ ಕಾಯಕದ ಆಧಾರದ ಮೇಲೆ ನಿರ್ಧಾರವಾದ ಜಾತಿಗಳು, ಪ್ರಸ್ತುತ ಸಂಘರ್ಷಕ್ಕೆ ಕಾರಣವಾಗುತ್ತಿರುವುದು ಸಾಮಾಜಿಕ ದುರಂತ. ಜಾತಿ ಆಧಾರದ ಮೇಲೆ ನೀಡುವ ಸೇವೆ ಹಾಗೂ ಆಚರಣೆಯಲ್ಲಿ ತಾರತಮ್ಯ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಅಗತ್ಯ ವಸ್ತುಗಳ ತಯಾರಿಕೆ ಹಾಗೂ ಊರಿನ ನೈರ್ಮಲ್ಯ ಕಾಯಕ ಮಾಡುವ ಜನರನ್ನು ಕೀಳಾಗಿ ಕಾಣುವುದು. ಅವರಿಗೆ ಕ್ಷೌರದಂಗಡಿ ಮತ್ತು ಹೋಟೆಲ್‌
ಗಳಲ್ಲಿ ತಾರತಮ್ಯ ಎಸಗುವುದು ಅಕ್ಷಮ್ಯ ಅಪರಾಧ’ ಎಂದು ಅವರು ಎಚ್ಚರಿಸಿದರು.

ತಹಶೀಲ್ದಾರ್ ಜಿ.ನಳಿನಾ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕಲ್ಯಾಣಾಧಿಕಾರಿ ಡಿ.ಪರಮೇಶ್ವರಪ್ಪ ಪಿಎಸ್ಐ ಸಿದ್ದೇಗೌಡ, ತಾಲ್ಲೂಕು ಪಂಚಾಯ್ತಿ ವ್ಯವಸ್ಥಾಪಕಿ ಕಮಲಮ್ಮ, ರಾಜಸ್ವ ನಿರೀಕ್ಷಕ ಪ್ರಕಾಶ್, ಗ್ರಾಮ ಲೆಕ್ಕಾಧಿಕಾರಿ ಎಚ್.ಜಿ.ಹೇಮಂತಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT