ADVERTISEMENT

ಸಾಯಿಬಾಬಾ ಮಂದಿರದಲ್ಲಿ ಗುರುವಿನ ಸ್ಮರಣೆ

ಗುರು ಪೂರ್ಣಿಮೆ ಸಂಭ್ರಮ: ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತ ಭಕ್ತರು

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 4:58 IST
Last Updated 10 ಜುಲೈ 2017, 4:58 IST

ದಾವಣಗೆರೆ:  ನಗರದೆಲ್ಲೆಡೆ ಭಾನುವಾರ ಗುರು ಪೂರ್ಣಿಮೆ ಸಂಭ್ರಮ ಮನೆಮಾಡಿತ್ತು. ಸಾಯಿಬಾಬಾ ಹಾಗೂ ದತ್ತಾತ್ರೇಯ ದೇಗುಲಗಳಲ್ಲಿ ದೇವರ ಸ್ಮರಣೆ ನಡೆಯಿತು. ಬೆಳಿಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಗುರುವಿನ ದರ್ಶನ ಪಡೆದರು.

ಬಾಬಾ ಸ್ಮರಣೆ: ಎಂಸಿಸಿ ‘ಎ’ ಬ್ಲಾಕ್‌ನಲ್ಲಿರುವ ಶಿರಡಿ ಸಾಯಿಬಾಬಾ ಮಂದಿರ ಭಕ್ತರಿಂದ ತುಂಬಿಹೋಗಿತ್ತು. ಬಾಬಾ ದರ್ಶನ ಪಡೆಯಲು ಸಾವಿರಾರು ಜನ ಸಾಲುಗಟ್ಟಿ ನಿಂತಿದ್ದರು. ಸರತಿ ಸಾಲು ಶಾಮನೂರು ಮುಖ್ಯರಸ್ತೆವರೆಗೂ ಚಾಚಿಕೊಂಡಿತ್ತು.

ವಿಶೇಷ ಅಲಂಕಾರ: ಬೆಳ್ಳಿ  ಪೀಠದಲ್ಲಿ ಅಲಂಕೃತಗೊಂಡಿದ್ದ ಬಾಬಾಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ‌ಬಗೆಬಗೆಯ ಹೂಗಳನ್ನು ಬಳಸಿ ತಯಾರಿಸಲಾಗಿದ್ದ ಹಾರಗಳು ಕಣ್ಮನ ಸೆಳೆಯುತ್ತಿದ್ದವು. ಜತೆಗೆ ಕಿತ್ತಳೆ, ಮೊಸಂಬಿ, ದ್ರಾಕ್ಷಿ, ಸೇಬು, ಅನಾನಸ್‌ಗಳನ್ನು ಬಳಸಿ ಮಾಡಲಾಗಿದ್ದ ಹಾರಗಳು ಆಕರ್ಷಣೀಯವಾಗಿದ್ದವು.

ADVERTISEMENT

ಹರಕೆ ಹೊತ್ತಿದ್ದ ಭಕ್ತರು ಕಾಯಿ, ಬೆಲ್ಲ, ತುಪ್ಪ, ಅಕ್ಕಿ, ಧಾನ್ಯಗಳನ್ನು ಸಮರ್ಪಿಸಿದರು. ಬೆಳ್ಳಿಯ ಬಾಬಾ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಿದರು. ಬೆಳಿಗ್ಗೆ ಕಾಕಡಾರತಿ, ಮಧ್ಯಾಹ್ನ ಹಾಗೂ ಸಂಜೆ ಧೂಪದಾರತಿ, ರಾತ್ರಿ ಶೇಜಾರತಿ, ಗುರುಗಳ ಪಾದುಕೆಗಳಿಗೆ ಪೂಜೆ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪೂಜೆ ನಡೆಯಿತು ಎಂದು ಸಾಯಿ ಟ್ರಸ್ಟ್‌ನ ನಿರ್ದೇಶಕ ಶಾಮನೂರು ವಿರೂಪಾಕ್ಷಪ್ಪ ತಿಳಿಸಿದರು.

ದುನಿ ಪೂಜೆ: ದೇಗುಲದ ಆವರಣದಲ್ಲಿರುವ ದುನಿಗೆ (ಅಗ್ನಿ ಕುಂಡ) ಭಕ್ತರು ಕಟ್ಟಿಗೆ ಹಾಗೂ ತುಪ್ಪ ಸಮರ್ಪಿಸಿದರು. ನೂರಾರು ಮಂದಿ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತರು. ಜಡೇಸಿದ್ಧ ಶಿವಯೋಗೀಶ್ವರ ಶಾಂತಾಶ್ರಮದ ಶಿವಾನಂದ ಸ್ವಾಮೀಜಿ, ಶಾಸಕ ಶಾಮನೂರು ಶಿವಶಂಕರಪ್ಪ, ಉದ್ಯಮಿ ಎಸ್‌.ಎಸ್‌.ಗಣೇಶ್‌ ಜ್ಯೋತಿ ಬೆಳಗಿಸಿದರು.

ಸಂಜೆ ಮಹಿಳೆಯರಿಂದ ಭಜನೆ, ಲಲಿತಾ ಸಹಸ್ರ ನಾಮಾವಳಿ, ಸಾಯಿ ಭಜನೆ ನಡೆಯಿತು ಎಂದು ಸೇವಾಕರ್ತ ಶಿವಯೋಗಿಸ್ವಾಮಿ ಮಾಹಿತಿ ನೀಡಿದರು.
ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 8 ಸಾವಿರ ಮಂದಿ ಭೋಜನ ಮಾಡಿದರು.

ಹಲವು ಸಂಘಸಂಸ್ಥೆಗಳ ಸಹಯೋಗದಲ್ಲಿ ಸಾಯಿ ಟ್ರಸ್ಟ್‌ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು ಎಂದು ಟ್ರಸ್ಟ್‌ನ ಉಸ್ತುವಾರಿ ಶಿವಪ್ಪ, ಡಾ.ಎಚ್.ಎಸ್‌.ಜಾಧವ್, ಗಣೇಶ್‌ ತಿಳಿಸಿದರು.

ಜಯದೇವ ವೃತ್ತದಲ್ಲಿರುವ ದತ್ತಾತ್ರೇಯ ದೇವಸ್ಥಾನದಲ್ಲಿ ಗುರು ದತ್ತಾತ್ರೇಯ ಮೂರ್ತಿಯನ್ನು ಹೂಮಾಲೆಗಳಿಂದ ಅಲಂಕರಿಸಲಾಗಿತ್ತು. ದೇವರ ದರ್ಶನ ಪಡೆಯಲು ಭಕ್ತರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.

ಶಿಬಾರ ಬಳಿಯ ಸಾಯಿ ಮಂದಿರ, ಜಯನಗರ ಮುಖ್ಯರಸ್ತೆಯಲ್ಲಿರುವ ಬಾಬಾ ಮಂದಿರದಲ್ಲೂ ಗುರು ಪೂರ್ಣಿಮೆ ಅಂಗವಾಗಿ ವಿಶೇಷ ಪೂಜೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.