ADVERTISEMENT

ಸಿಗದ ವಿಮೆ ಹಣ: ಅಧಿಕಾರಿಗಳಿಗೆ ತರಾಟೆ

ಲೀಡ್‌ ಬ್ಯಾಂಕ್‌ನ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 4:39 IST
Last Updated 15 ಜುಲೈ 2017, 4:39 IST

ದಾವಣಗೆರೆ:  ಜಿಲ್ಲೆಯಲ್ಲಿ ಕಳೆದ ವರ್ಷ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಮಾಡಿಸಿದ ರೈತರಿಗೆ ಪರಿಹಾರದ ಮೊತ್ತ ಸಮರ್ಪಕವಾಗಿ ತಲುಪದಿರುವುದಕ್ಕೆ ವಿಮಾ ಕಂಪೆನಿ ಅಧಿಕಾರಿಗಳನ್ನು ಸಂಸದ ಜಿ.ಎಂ.ಸಿದ್ದೇಶ್ವರ ತರಾಟೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಲೀಡ್‌ ಬ್ಯಾಂಕ್‌ನ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ್ಳದಲ್ಲಿ ವಿಮೆ ಮಾಡಿಸಿದ 250 ರೈತರಲ್ಲಿ ಕೇವಲ 7 ಜನರಿಗೆ ಪರಿಹಾರ ಸಿಕ್ಕಿದೆ. ಹರಪನಹಳ್ಳಿಯ ಉಚ್ಚಂಗಿದುರ್ಗದಲ್ಲೂ ಇದೇ ರೀತಿ ಆಗಿದೆ. ಜಿಲ್ಲೆಯ ಹಲವು ಭಾಗಗಳಿಂದ ಈ ರೀತಿಯ ದೂರುಗಳು ರೈತರಿಂದ ಕೇಳಿಬಂದಿವೆ ಎಂದು ಆಕ್ಷೇಪಿಸಿದರು.

ADVERTISEMENT

ಇದಕ್ಕೆ ವಿವಿಧ ಬ್ಯಾಂಕ್‌ ಅಧಿಕಾರಿಗಳೂ ಧ್ವನಿಗೂಡಿಸಿ, ‘ವಿಮೆ ಮೊತ್ತ ಸಿಗದ ರೈತರು ಬ್ಯಾಂಕಿಗೆ ಬಂದು ವಿಚಾರಿಸುತ್ತಿದ್ದಾರೆ. ಅವರಿಗೆ ಸಮಜಾಯಿಷಿ ನೀಡಲು ನಮ್ಮ ಬಳಿ ಮಾಹಿತಿ ಇಲ್ಲ. ಯಾವ ಕಾರಣಕ್ಕೆ ಅವರಿಗೆ ಕೊಡುತ್ತಿಲ್ಲ ಎಂಬುದನ್ನು  ತಿಳಿಸಿ’ ಎಂದು ಪಟ್ಟು ಹಿಡಿದರು.

ಯೂನಿವರ್ಸಲ್ ಸೊಂಪು ಜನರಲ್‌ ಇನ್‌ಶೂರೆನ್ಸ್ ಕಂಪೆನಿಯ ವಿಭಾಗೀಯ ವ್ಯವಸ್ಥಾಪಕ ಮುಖೇಶ್‌ ಪ್ರತಿಕ್ರಿಯಿಸಿ, ‘ಜಿಲ್ಲೆಯಲ್ಲಿ ಇದುವರೆಗೂ 17,201 ಜನ ರೈತರಿಗೆ ₹ 34.29 ಕೋಟಿ ವಿಮೆ ಪರಿಹಾರ ಸಿಕ್ಕಿದೆ. ಹತ್ತಿ ಬೆಳೆ ಹೊರತುಪಡಿಸಿ ಉಳಿದೆಲ್ಲಾ ಬೆಳೆಗಳಿಗೆ ಪರಿಹಾರ ಬಂದಿದೆ. ಇನ್ನೊಂದು ವಾರದಲ್ಲಿ ಸಂಪೂರ್ಣ  ಸಿಗಲಿದೆ’ ಎಂದರು.
ಈ ಉತ್ತರದಿಂದ ತೃಪ್ತರಾಗದ ಸಿದ್ದೇಶ್ವರ, ‘ಒಂದೇ ಊರಿನಲ್ಲಿ ಪಕ್ಕದ ಹೊಲದ ರೈತನಿಗೆ ವಿಮೆ ಹಣ ಸಿಕ್ಕಿರುವಾಗ ಇನ್ನೊಬ್ಬನಿಗೆ ಸಿಗದಿರಲು ಕಾರಣವೇನು’ ಎಂದು ಪ್ರಶ್ನಿಸಿದರು.

‘ಇದು ಒಂದೊಂದು ಬೆಳೆಗೆ ಒಂದೊಂದು ರೀತಿ ಇದೆ. ಈ ಬಗ್ಗೆ ನನಗೂ ಮಾಹಿತಿ ಇಲ್ಲ. ವಿವರವಾಗಿ ತಿಳಿದು ಪ್ರತಿಕ್ರಿಯಿಸುವೆ’ ಎಂದು ವಿಮಾ ಕಂಪೆನಿ ವ್ಯವಸ್ಥಾಪಕರು ಸ್ಪಷ್ಟಪಡಿಸಿದರು. ಇದರಿಂದ ಮತ್ತಷ್ಟು ಅಸಮಾಧಾನಗೊಂಡ ಸಿದ್ದೇಶ್ವರ ಸಭೆಯಲ್ಲೇ ತೋಟಗಾರಿಕಾ ಇಲಾಖೆ ಆಯುಕ್ತ ಮಹೇಶ್ವರಪ್ಪ ಅವರಿಗೆ ಮೊಬೈಲ್ ಫೋನ್‌ ಕರೆ ಮಾಡಿ, ಅವರಿಗೂ ಇದೇ ಪ್ರಶ್ನೆ ಹಾಕಿದರು.

ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸಭೆಗೆ ಮಾಹಿತಿ ನೀಡಿದ ಅವರು, ‘ಜಿಲ್ಲೆಯಲ್ಲಿ ಅಸಮರ್ಪಕವಾಗಿ ವಿಮೆ ಮೊತ್ತ ಹಂಚಿಕೆ ಆಗಿರುವ ಸಂಬಂಧ ಜಿಲ್ಲಾಧಿಕಾರಿ ಮೂಲಕ ಪ್ರಸ್ತಾವನೆ ಸಲ್ಲಿಸುವಂತೆ ಆಯುಕ್ತರು ತಿಳಿಸಿದ್ದಾರೆ. ತಕ್ಷಣ ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಅಡಿಕೆ ಸೇರಿಸಿ:  ಜಿಲ್ಲೆಯ ಪ್ರಮುಖ ಬೆಳೆ. 34,469 ಹೆಕ್ಟೇರ್‌ನಲ್ಲಿ ಅಡಿಕೆ  ಬೆಳೆಯಲಾಗುತ್ತಿದೆ. ಆದರೆ, ವಿಮೆ ವ್ಯಾಪ್ತಿಗೆ ಈ ಬೆಳೆ ಸೇರಿದ್ದರೂ ದಿನಾಂಕ ವಿಸ್ತರಣೆ ವೇಳೆ ಕೈಬಿಡಲಾಗಿದೆ. ರಾಜ್ಯ ಸರ್ಕಾರ ಪುನರ್ ಪರಿಶೀಲಿಸಿ ಅಡಿಕೆ ಬೆಳೆಯನ್ನು ವಿಮೆ ವ್ಯಾಪ್ತಿಗೆ ಒಳಪಡಿಸಿ, ದಿನಾಂಕವನ್ನೂ ಆಗಸ್ಟ್‌ 10ರವರೆಗೆ ವಿಸ್ತರಿಸಬೇಕು ಎಂದು ಸಂಸದರು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಜುಲೈ ಮೊದಲ ವಾರದವರೆಗೆ ತೋಟಗಾರಿಕೆ ಬೆಳೆಗಳಿಗೆ ಕೇವಲ 4,681 ರೈತರು, ಇತರೆ ಬೆಳೆಗಳಿಗೆ 1,006 ರೈತರು ಮಾತ್ರ ವಿಮೆ ಮಾಡಿಸಿರುವುದಕ್ಕೂ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಇದೇ 12ಕ್ಕೆ ಆದೇಶ ಹೊರಡಿಸಿತ್ತು. ಆದರೆ, ಅದು ಬ್ಯಾಂಕಿಗೆ ತಲುಪಿದ್ದು 21ಕ್ಕೆ. 22 ಮತ್ತು 23 ಬ್ಯಾಂಕಿಗೆ ರಜೆ ಇತ್ತು. 24 ಮತ್ತು 25ರಂದು ಇದೇ ವಿಷಯ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಂಕ್‌ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಉಳಿದ ಎರಡು ದಿವಸದಲ್ಲಿ ಎಷ್ಟು ಸಾಧ್ಯವೋ ಅಷ್ಟು ರೈತರಿಂದ ವಿಮಾ ಕಂತು ಕಟ್ಟಿಸಿ ಕೊಳ್ಳಲಾಯಿತು ಎಂದು ಲೀಡ್‌ ಬ್ಯಾಂಕ್‌ ವಿಭಾಗೀಯ ವ್ಯವಸ್ಥಾಪಕ ಎನ್‌.ಟಿ. ಎರ್ರಿಸ್ವಾಮಿ ಸಮಜಾಯಿಷಿ ನೀಡಿದರು. ಸಭೆಯಲ್ಲಿ ನಬಾರ್ಡ್‌ ಅಧಿಕಾರಿ ವಿ. ರವೀಂದ್ರ, ಆರ್‌ಬಿಐ ಅಧಿಕಾರಿ ಆನಂದ್, ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ರಂಗಸ್ವಾಮಿ ಉಪಸ್ಥಿತರಿದ್ದರು. ­­­

***

ಶಾಸಕರ ಧೋರಣೆಗೆ ಸಿದ್ದೇಶ್ವರ ಆಕ್ಷೇಪ

‘ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಕೇಂದ್ರ ಸರ್ಕಾರದ್ದು ಎಂದು ಕೆಲವು ಶಾಸಕರು ಬಿಂಬಿಸುತ್ತಿದ್ದಾರೆ. ಆದರೆ, ಇದರಲ್ಲಿ ಕೇಂದ್ರದ ಪಾಲು ಶೇ 40, ರಾಜ್ಯದ್ದು ಶೇ 40 ಹಾಗೂ ರೈತರದ್ದು ಶೇ 20 ಇದೆ. ವಿಮಾ ಕಂಪೆನಿ ನಿಗದಿಪಡಿಸುವುದು, ನಷ್ಟ ಸಮೀಕ್ಷೆ ಮಾಡಬೇಕಾದ್ದು ರಾಜ್ಯ ಸರ್ಕಾರದ ಕೆಲಸ’ ಎಂದು ಸಂಸದರು ಸ್ಪಷ್ಟಪಡಿಸಿದರು.

‘ರೈತರಿಗೆ ಸಮರ್ಪಕವಾಗಿ ವಿಮೆ ಹಣ ಸಿಕ್ಕಿದ್ದರೆ ಇದು ರಾಜ್ಯ ಸರ್ಕಾರದ ಯಶಸ್ಸು ಎನ್ನುತ್ತಿದ್ದರು. ಆದರೆ, ಈಗ ವಿಮೆ ಮೊತ್ತ ಸಮರ್ಪಕವಾಗಿ ವಿಲೇ ಆಗದಿರುವುದರಿಂದಾಗಿ ಇದು ಕೇಂದ್ರ ಸರ್ಕಾರದ್ದು ಎಂದು ಗೂಬೆ ಕೂರಿಸಲು ಹೊರಟಿದ್ದಾರೆ’ ಎಂದು ಆಕ್ಷೇಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.