ADVERTISEMENT

ಸ್ವತಂತ್ರ ಭಾರತದ ಪ್ರಾಮಾಣಿಕ ಇಲಾಖೆ

ಅಂಚೆ ಇಲಾಖೆ ಏರ್ಪಡಿಸಿದ್ದ ‘ದಾವಣದುರ್ಗ ಪೆಕ್ಸ್‌’ನಲ್ಲಿ ಸಂಶೋಧಕ ಶ್ರೀಶೈಲಾರಾಧ್ಯ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:32 IST
Last Updated 21 ಜನವರಿ 2017, 5:32 IST
ದಾವಣಗೆರೆಯಲ್ಲಿ ಅಂಚೆ ಇಲಾಖೆ ಹಮ್ಮಿಕೊಂಡಿರುವ ‘ದಾವಣದುರ್ಗ ಪೆಕ್ಸ್’ ಜಿಲ್ಲಾ ಮಟ್ಟದ ಅಂಚೆ ಚೀಟಿ ಸಂಗ್ರಹದ ಪ್ರದರ್ಶನದಲ್ಲಿ ಶುಕ್ರವಾರ ವಿಶೇಷ ಲಕೋಟೆಗಳನ್ನು ಬಿಡುಗಡೆಗೊಳಿಸಲಾಯಿತು.
ದಾವಣಗೆರೆಯಲ್ಲಿ ಅಂಚೆ ಇಲಾಖೆ ಹಮ್ಮಿಕೊಂಡಿರುವ ‘ದಾವಣದುರ್ಗ ಪೆಕ್ಸ್’ ಜಿಲ್ಲಾ ಮಟ್ಟದ ಅಂಚೆ ಚೀಟಿ ಸಂಗ್ರಹದ ಪ್ರದರ್ಶನದಲ್ಲಿ ಶುಕ್ರವಾರ ವಿಶೇಷ ಲಕೋಟೆಗಳನ್ನು ಬಿಡುಗಡೆಗೊಳಿಸಲಾಯಿತು.   

ದಾವಣಗೆರೆ: ಬ್ರಿಟಿಷ್‌ ಸರ್ಕಾರದ ನರನಾಡಿಯಾಗಿದ್ದ ಅಂಚೆ ಇಲಾಖೆ, ಸ್ವತಂತ್ರ ಭಾರತದ ಪ್ರಾಮಾಣಿಕ ಇಲಾಖೆಯಾಗಿ ಉಳಿದುಕೊಂಡಿದೆ ಎಂದು ಸಂಶೋಧಕ ಶ್ರೀಶೈಲಾರಾಧ್ಯ ಹೇಳಿದರು.

ನಗರದ ರೇಣುಕ ಮಂದಿರದಲ್ಲಿ ಅಂಚೆ ಇಲಾಖೆ ಹಮ್ಮಿಕೊಂಡಿರುವ ‘ದಾವಣದುರ್ಗ ಪೆಕ್ಸ್’ ಜಿಲ್ಲಾ ಮಟ್ಟದ ಅಂಚೆ ಚೀಟಿ ಸಂಗ್ರಹದ ಪ್ರದರ್ಶನದಲ್ಲಿ ಶುಕ್ರವಾರ ಅವರು ಮಾತನಾಡಿದರು.

ಅಂಚೆ ಹಾಗೂ ರೈಲ್ವೆ ಇಲಾಖೆಗಳಿಗೆ ಬ್ರಿಟಿಷರು ಅತ್ಯಂತ ಮಹತ್ವ ಕೊಡುತ್ತಿದ್ದರು. ಅಂಚೆ ಇಲಾಖೆಯ ಸಾಮರ್ಥ್ಯ ವನ್ನು ಬ್ರಿಟಿಷರು ಅತ್ಯುತ್ತಮವಾಗಿ ಬಳಸಿಕೊಂಡಿದ್ದರು ಎಂದು ಹೇಳಿದರು.

ಅಂಚೆ ಚೀಟಿ ಸಂಗ್ರಹ ಶ್ರೇಷ್ಠ ಹವ್ಯಾಸ. ಈ ಹವ್ಯಾಸ ಬೆಳೆಸಿಕೊಳ್ಳುವ ಮಕ್ಕಳು ಶಿಸ್ತುಬದ್ಧವಾಗಿ ಅಂಚೆ ಚೀಟಿ ಸಂಗ್ರಹಿಸಬಹುದು. ವಿಷಾಯಾ ಧಾರಿತವಾಗಿ ಒಟ್ಟುಗೂಡಿಸಿದ ಅಂಚೆ ಚೀಟಿಗಳ ಸಂಗ್ರಹಕ್ಕೆ ಹೆಚ್ಚು ಬೆಲೆಯಿದೆ ಎಂದು ತಿಳಿಸಿದರು.

ದಕ್ಷಿಣ ಕರ್ನಾಟಕ ವಲಯದ ಅಂಚೆ ಸೇವೆ ನಿರ್ದೇಶಕ ಎಲ್‌.ಕೆ.ದಾಶ್‌ ಮಾತನಾಡಿ, ಅಂಚೆ ಚೀಟಿ ಸಂಗ್ರಹ ಸಹೃದಯೀ ಹವ್ಯಾಸ. ಅಂಚೆ ಚೀಟಿ ಸಂಗ್ರಹ ಪ್ರದರ್ಶನದಿಂದ ಇಲಾಖೆಗೆ ಯಾವುದೇ ಲಾಭ ಇಲ್ಲ. ಹೀಗಿದ್ದರೂ ಅದು ಅತ್ಯುತ್ತಮ ಹವ್ಯಾಸ ಎಂಬ ಕಾರಣಕ್ಕೆ ಅಂಚೆ ಚೀಟಿ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ ಎಂದರು.

ಅಂಚೆ ಚೀಟಿ ಸಂಗ್ರಹ ಅರಿವು ವಿಸ್ತರಿಸುತ್ತದೆ. ಮಕ್ಕಳು ಶಾಲೆಯಲ್ಲಿ ಓದದ, ಕಲಿಯದ ಅಸಂಖ್ಯಾತ ವಿಷಯಗಳನ್ನು ತಿಳಿದುಕೊಳ್ಳುವ ವಿಪುಲ ಅವಕಾಶವನ್ನು ಅಂಚೆ ಚೀಟಿ ಸಂಗ್ರಹ ಹವ್ಯಾಸ  ತೆರೆದಿಡುತ್ತದೆ. ವಿಷಯಾ ಧಾರಿತವಾಗಿ ಸಂಗ್ರಹ ಬೆಳೆಸಿಕೊಳ್ಳಲು ಈ ಹವ್ಯಾಸದಲ್ಲಿ ಸಾಧ್ಯವಿದೆ. ಮಕ್ಕಳು ಈ ಹವ್ಯಾಸದಲ್ಲಿ ಆಸಕ್ತಿ ಬೆಳೆಸಿಕೊಳ್ಳ ಬಹುದು ಎಂದು ತಿಳಿಸಿದರು.

ದಾನಿಗಳಾದ ನಲ್ಲೂರು ಬಿ.ಎನ್. ಶಾಂತಾರಾಮ್, ಚನ್ನಗಿರಿ ವಿರೂಪಾಕ್ಷಪ್ಪ ಹಾಗೂ ಕಾದಂಬರಿಕಾರ ತರಾಸು ಅವರ ಚಿತ್ರಗಳನ್ನೊಳಗೊಂಡ ವಿಶೇಷ ಲಕೋಟೆಗಳನ್ನು ಅಂಚೆ ಇಲಾಖೆಯಿಂದ ಬಿಡುಗಡೆ ಮಾಡಲಾಯಿತು.

ಚನ್ನಗಿರಿ ವಿರೂಪಾಕ್ಷಪ್ಪ ಟ್ರಸ್ಟ್‌ ಅಧ್ಯಕ್ಷ ಚನ್ನಗಿರಿ ವಿರೂಪಾಕ್ಷಪ್ಪ, ನಲ್ಲೂರು ಯಮುನಾಬಾಯಿ ಶಾಂತಾರಾಮ್, ದಾವಣದುರ್ಗ ಪೆಕ್ಸ್‌ ಅಧ್ಯಕ್ಷ ಒ.ಗೋವಿಂದಪ್ಪ ಮತ್ತಿತರರು ಉಪಸ್ಥಿತರಿದ್ದರು.

‘ಪ್ರತಿಮೆ ಕಾಣಲಾಗದ ತರಾಸು’
‘ಕನ್ನಡದ ಅಪ್ರತಿಮ ಕಾದಂಬರಿಕಾರ ತರಾಸು ಸಿಗರೇಟು ಚಟದಿಂದ ಆರೋಗ್ಯ ಹಾಳು ಮಾಡಿಕೊಂಡಿದ್ದರು. ಅದನ್ನು ಅವರಿಗೆ ಮನವರಿಕೆ ಮಾಡಿಕೊಡುತ್ತ ‘ನೀವು ಕೊನೆಯ ಪಾಳೇಗಾರನ ಕಾದಂಬರಿ ಬರೆಯಬೇಕು’ ಎಂದು ತುಟಿ ಮೀರಿ ಸಮಾರಂಭವೊಂದರಲ್ಲಿ ಹೇಳಿಬಿಟ್ಟೆ. ಅದನ್ನು ಸವಾಲಾಗಿ ಸ್ವೀಕರಿಸಿದ ತರಾಸು, ‘ನೀವು ಆಧಾರಗಳನ್ನು ಒದಗಿಸಿ, ನಾನು ಕಾದಂಬರಿ ಬರೆಯುತ್ತೇನೆ. ಆದರೆ, ಕಾದಂಬರಿ ಪೂರ್ಣಗೊಳ್ಳುವ ಒಳಗೆ ಚಿತ್ರದುರ್ಗ ದಲ್ಲಿ ಮದಕರಿ ನಾಯಕನ ಪ್ರತಿಮೆ ಅನಾವರಣಗೊಳಿಸಬೇಕು’ ಎಂದು ಷರತ್ತು ಹಾಕಿ, ಕಾದಂಬರಿ ಬರೆದೇ ಬಿಟ್ಟರು’ ಎಂದು ಸಂಶೋಧಕ ಶ್ರೀಶೈಲಾರಾಧ್ಯ ನೆನಪಿಸಿಕೊಂಡರು.

‘ದುರ್ಗಸ್ತಮಾನ’ ಕಾದಂಬರಿ ಪೂರ್ಣಗೊಂಡು ಪ್ರಕಟವಾಗುವ ಸಮಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಅರಸಿ ಬಂತು. ಆದರೆ, ತರಾಸು ಅದಾಗಲೇ ಕೊನೆಯುಸಿರೆಳೆದು ಬಿಟ್ಟರು. ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಾಳೇಗಾರರ ಅಮೋಘ ಕಾದಂಬರಿ ಬರೆದ ತರಾಸು, ಅಮೋಘ ಪ್ರತಿಮೆಯನ್ನು ಕಾಣುವ ಮೊದಲು ಅಸ್ತಂಗತರಾದರು. ಈ ನೋವು ಇನ್ನೂ ಕಾಡುತ್ತದೆ ಎಂದರು.

ತಡವಾಗಿಯಾದರೂ ತರಾಸು ಅವರ ವಿಶೇಷ ಲಕೋಟೆ ಹೊರ ತಂದಿರುವ ಅಂಚೆ ಇಲಾಖೆ ಪ್ರಯತ್ನ ಅರ್ಥಪೂರ್ಣ ಎಂದು ಶ್ಲಾಘಿಸಿದರು.

ADVERTISEMENT

*
ಅಂಚೆ ಚೀಟಿ ಸಂಗ್ರಹ ಹವ್ಯಾಸ ಬೆಳೆಸಿಕೊಳ್ಳುವ ಮಕ್ಕಳು ಶಿಸ್ತು ಬದ್ಧವಾಗಿ ಅಂಚೆ ಚೀಟಿ ಸಂಗ್ರಹಿಸ ಬಹುದು. ವಿಷಾಯಾಧಾರಿತವಾಗಿ ಒಟ್ಟುಗೂಡಿಸಿದ ಅಂಚೆ ಚೀಟಿಗಳ ಸಂಗ್ರಹಕ್ಕೆ ಹೆಚ್ಚು ಬೆಲೆಯಿದೆ.
-ಶ್ರೀಶೈಲಾರಾಧ್ಯ , ಸಂಶೋಧಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.