ADVERTISEMENT

ಹರಪನಹಳ್ಳಿ: ನೀರಿನ ಕರ ಹೆಚ್ಚಳಕ್ಕೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 19 ಮೇ 2017, 4:52 IST
Last Updated 19 ಮೇ 2017, 4:52 IST

ಹರಪನಹಳ್ಳಿ: ನೀರಿನ ಕರ ಹೆಚ್ಚಳ, ಅಕ್ರಮ ನೀರಿನ ಸಂಪರ್ಕ, ಚರಂಡಿಯಲ್ಲಿ ನೀರಿನ ಕೊಳವೆಗಳು, ವಾಜಪೇಯಿ ವಸತಿ ಯೋಜನೆಯಲ್ಲಿ ಅಕ್ರಮ, ಹಿರೆಕೆರೆ ಅಂಗಳದಲ್ಲಿ ಒಳ ಚರಂಡಿ ಛೇಂಬರ್‌ ನಿರ್ಮಾಣ ಕುರಿತು ಪುರಸಭೆ ಸದಸ್ಯರು ಗುರುವಾರ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ಕೃಷ್ಣಪ್ಪ ಮಾತನಾಡಿ, ‘ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಕೆಲವು ಸದಸ್ಯರು ಮನೆಯೊಂದಕ್ಕೆ ₹ 25 ಸಾವಿರ ಹಣ ಪಡೆದು ಅಕ್ರಮ ಎಸಗಿದ್ದಾರೆ ಎಂಬ ಆರೋಪವಿದೆ. ಇದನ್ನು ಸಾಬೀತು ಪಡಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮ್ಯಾಕಿ ದುರುಗಪ್ಪ ಮಾತನಾಡಿ, ‘ದನದ ಕೊಟ್ಟಿಗೆ ಮತ್ತು ಮನೆಗಳ ನಿರ್ಮಾಣದಲ್ಲಿ ಪಾರದರ್ಶಕತೆ ಕಾಪಾಡಲಾಗಿದೆ. ವಾರ್ಡ್‌ಗಳ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು. ಅಧ್ಯಕ್ಷ ಎಚ್‌.ಕೆ.ಹಾಲೇಶ್‌ ಮಾತನಾಡಿ, ಅಧಿಕಾರಿಗಳನ್ನು ಕರೆಸಿ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

ADVERTISEMENT

ಮನೆ ಮಾಲೀಕರು ಸ್ವಂತ ವೆಚ್ಚದಲ್ಲಿ ಒಳ ಚರಂಡಿಗೆ ಸಂಪರ್ಕ ಕಲ್ಪಿಸಿಕೊಳ್ಳಬೇಕು ಎಂದು ಎಂಜಿನಿಯರ್‌ ಅಚ್ಯುತಾನಂದ ಪ್ರಸ್ತಾಪ ಮಾಡಿದರು.ಒಳಚರಂಡಿ ಕಾಮಗಾರಿ ಕಳಪೆಯಾಗಿದೆ. ಶೇ 30ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ. ಪ್ರಾಯೋಗಿಕವಾಗಿ ನೀರು ಸರಾಗವಾಗಿ ಹರಿದು ಹೋಗುವ ಪರೀಕ್ಷೆ ನಡೆಸಿದ ನಂತರ  ಸಂಪರ್ಕ ಕಲ್ಪಿಸಿಕೊಳ್ಳಲು ಸೂಚನೆ ನೀಡಿ ಎಂದು ಸದಸ್ಯೆ ಪ್ರಭಾ ಅಜ್ಜಣ್ಣ ಒತ್ತಾಯಿಸಿದರು.

ಮನೆಗಳಿಗೆ ವಾರ್ಷಿಕ ₹ 100, ವಾಣಿಜ್ಯ ಕೇಂದ್ರಗಳಿಗೆ ₹ 200 ಮತ್ತು ಉದ್ದಿಮೆಗಳಿಗೆ ₹ 400 ನೀರಿನ ಕರ ಹೆಚ್ಚು ಮಾಡಲು ಸದಸ್ಯರು ಒಪ್ಪಿದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಅಧಿಕಾರಿ ಯು.ನಾರಾಯಣ ಮಾತನಾಡಿ, ‘₹ 50ಸಾವಿರ ವೆಚ್ಚದಲ್ಲಿ ಪೌರ ಕಾರ್ಮಿಕರಿಗೆ ಬೇಕಾಗುವ ಸ್ವಚ್ಛತಾ ಪರಿಕರಗಳನ್ನು, ಸ್ಮಶಾನಗಳ ಅಭಿವೃದ್ಧಿಗೆ  ₹ 1.50ಲಕ್ಷ ಅನುದಾನ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ನಿವೇಶನ, ಶೇ 50ರಷ್ಟು ಅನುದಾನ ನೀಡಿದರೆ ಉಳಿದ ಅನುದಾನವನ್ನು ಸಂಸ್ಥೆ ಭರಿಸಿ ಘಟಕದ ನಿರ್ವಹಣೆ ಮಾಡಲಿದೆ’ ಎಂದರು.ಉಪಾಧ್ಯಕ್ಷ ಸತ್ಯನಾರಾಯಣ್‌, ಮುಖ್ಯಾಧಿಕಾರಿ ಐ.ಬಸವರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.