ADVERTISEMENT

‘ಹಿರಿಯ ನಾಗರಿಕರ ನಿರ್ಲಕ್ಷ್ಯ ಸಲ್ಲದು’

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 5:59 IST
Last Updated 25 ಜುಲೈ 2017, 5:59 IST
ಹಿರಿಯ ನಾಗರಿಕರಿಗೆ ಕಾನೂನು ಮತ್ತು ಆರೋಗ್ಯ ಅರಿವು ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಎಂ.ಶ್ರೀದೇವಿ ಹಾಗೂ ಹಿರಿಯ ನಾಗರಿಕರಾದ ಮೀನಾಕ್ಷಮ್ಮ ಉದ್ಘಾಟಿಸಿದರು.
ಹಿರಿಯ ನಾಗರಿಕರಿಗೆ ಕಾನೂನು ಮತ್ತು ಆರೋಗ್ಯ ಅರಿವು ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಎಂ.ಶ್ರೀದೇವಿ ಹಾಗೂ ಹಿರಿಯ ನಾಗರಿಕರಾದ ಮೀನಾಕ್ಷಮ್ಮ ಉದ್ಘಾಟಿಸಿದರು.   

ದಾವಣಗೆರೆ: ಸಮಾಜದಲ್ಲಿ ಹಿರಿಯ ನಾಗರಿಕರನ್ನು ನಿರ್ಲಕ್ಷಿಸುವಂತಹ ಮನಸ್ಥಿತಿಗಳು ಹೆಚ್ಚಾಗುತ್ತಿವೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಎಂ.ಶ್ರೀದೇವಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ನಿವೃತ್ತ ನೌಕರರ ಭವನದಲ್ಲಿ  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಹಮ್ಮಿ ಕೊಂಡಿದ್ದ ಹಿರಿಯ ನಾಗರಿಕರಿಗೆ ಕಾನೂನು ಮತ್ತು ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಕ್ಕಳು ವಯಸ್ಸಾದ ಪೋಷಕರನ್ನು ನಿರ್ಲಕ್ಷಿಸುತ್ತಿದ್ದಾರೆ. ಇದರಿಂದಾಗಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಹಿರಿಯ ನಾಗರಿಕರು ತಾವು ಸಂಪಾದನೆ ಮಾಡಿದ ಎಲ್ಲಾ ಆಸ್ತಿಯನ್ನು ಮಕ್ಕಳಿಗೆ ವರ್ಗಾಯಿಸಬಾರದು. ತಮ ಗಾಗಿ ಸ್ವಲ್ಪ ಆಸ್ತಿಯನ್ನು ಇಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಮನೆಯಲ್ಲಿ ಸುಮ್ಮನೆ ಇರುತ್ತಾರೆ ಎಂದು ಮಕ್ಕಳು ವಯಸ್ಸಾದ ಪೋಷಕರಿಗೆ ಮನೆಕೆಲಸ ಹೇಳು ವುದನ್ನು ಬಿಡಬೇಕು. ನೆಮ್ಮದಿ ಯಾಗಿರಲು ಅವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕಿವಿಮಾತು ಹೇಳಿದರು.

ಹಿರಿಯ ನಾಗರಿಕರಿಗೆ ನಿತ್ಯ ಗುಣಮಟ್ಟದ ಆಹಾರ, ವೈದ್ಯಕೀಯ ತಪಾಸಣೆಯ ಅವಶ್ಯವಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಮಯ ನಿಗದಿ ಮಾಡಿ, ಹಿರಿಯ ನಾಗರಿಕರನ್ನು ನಿತ್ಯ ವೈದ್ಯಕೀಯ ತಪಾಸಣೆ ಮಾಡಿಸಬೇಕು ಎಂದು ಸಲಹೆ ನೀಡಿದರು.

ಯುವಕರು ಹಿರಿಯ ನಾಗರಿಕರನ್ನು ಗೌರವಿಸಬೇಕು. ಇಂತಹ ಸಂಸ್ಕಾರವನ್ನು ಪೋಷಕರು ಮಕ್ಕಳಲ್ಲಿ ಬೆಳೆಸಬೇಕು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಮಾತನಾಡಿ, ‘ನ್ಯಾಯ, ಧರ್ಮ ಪಾಲನೆ ಮಾಡುವವರ ಸಂಖ್ಯೆ ವಿರಳವಾಗಿದ್ದು, ಎಲ್ಲೆಡೆ ಕಾನೂನಿಗೆ  ವಿರುದ್ಧವಾಗಿ ನಡೆದುಕೊಳ್ಳುವವರು ಹೆಚ್ಚಾಗಿದ್ದಾರೆ’ ಎಂದರು.

ಪ್ರತಿಯೊಬ್ಬರೂ ಕಾನೂನು ಪರಿಪಾಲನೆ ಮಾಡಬೇಕು. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಕಲಿಸುವಲ್ಲಿ ಪೋಷ ಕರ ಜವಾಬ್ದಾರಿ ಹೆಚ್ಚಿದೆ ಎಂದರು. ಆದರ್ಶ ಸಮಾಜ ಕಾರ್ಯ ಸಂಸ್ಥೆಯ ಕಾರ್ಯದರ್ಶಿ ಎನ್‌.ಬಿ.ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು.

ಮನೋರೋಗ ತಜ್ಞ ಡಾ.ಸುದರ್ಶನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಎಚ್‌.ವಿಜಯಕುಮಾರ, ಗುರು ಮೂರ್ತಿ, ಎನ್‌.ಎಂ. ಪಂಚಾಕ್ಷರಯ್ಯ, ರಘುನಾಥ್‌ ತಾಪ್ಸೆ  ಇದ್ದರು. ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಜಿ.ಎಸ್‌.ಶಶಿಧರ್‌ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.