ADVERTISEMENT

ಹೆಚ್ಚುವರಿ ಪಡಿತರ ಕಾರ್ಡ್: ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 6:24 IST
Last Updated 7 ಜುಲೈ 2015, 6:24 IST

ಹರಪನಹಳ್ಳಿ: ತಾಲ್ಲೂಕಿನಲ್ಲಿರುವ ಕುಟುಂಬಗಳ ಸಂಖ್ಯೆಗಿಂತ ಪಡಿತರ ಕಾರ್ಡ್‌ಗಳ  ಸಂಖ್ಯೆ ಹೆಚ್ಚಾಗಿವೆ, ಪಟ್ಟಣಕ್ಕೆ ಗ್ಯಾಸ್‌ ಏಜೆನ್ಸಿ ಆರಂಭಿಸಲು ಜಿಲ್ಲಾಧಿಕಾರಿಗಳಿಂದ ಪ್ರಸ್ತಾವ ಸಲ್ಲಿಕೆ, ಹತ್ತನೆ ತರಗತಿಯಲ್ಲಿ ಕಡಿಮೆ ಫಲಿತಾಂಶಕ್ಕೆ ಕ್ರಮ, ಲೋಕೋಪಯೋಗಿ ಇಲಾಖೆ ಕಳಪೆ ರಸ್ತೆಗಳು ಕುರಿತು ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು.

ರಾಜೀವ್‌ ಗಾಂಧಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪಡಿತರ ಕಾರ್ಡ್‌ಗಳ ಕುರಿತು ಅಧ್ಯಕ್ಷ ಎಚ್‌.ರಾಜಪ್ಪ ಅವರು ಕೇಳಿದ ಪ್ರಶ್ನೆಯೊಂದಕ್ಕೆ ಆಹಾರ ಇಲಾಖೆಯ ಇನ್ಸಪೆಕ್ಟರ್‌ ಬಿ.ಟಿ.ಪ್ರಕಾಶ್‌ ಉತ್ತರಿಸಿದ ಅವರು, ತಾಲ್ಲೂಕಿನಲ್ಲಿರುವ ಕುಟುಂಬಗಳ ಸಂಖ್ಯೆಗಿಂತ ಶೇ 118ರಷ್ಟು ಪಡಿತರ ಕಾರ್ಡ್‌ಗಳ ಸಂಖ್ಯೆ ಹೆಚ್ಚಾಗಿವೆ ಎಂದು ಮಾಹಿತಿ  ನೀಡಿದರು

ಜುಲೈ ಅಂತ್ಯದೊಳಗೆ ಕುಟುಂಬಗಳು ಪಡೆದಿರುವ ಹೆಚ್ಚುವರಿ ಕಾರ್ಡ್‌ಗಳನ್ನು ಇಲಾಖೆಗೆ ವಾಪಸ್‌ ನೀಡಬೇಕು ಇಲ್ಲದಿದ್ದರೆ ಅಂತವರ ವಿರುದ್ಧ ಸರ್ಕಾರ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಿದೆ. ಬೆಣ್ಣಿಹಳ್ಳಿ ಗ್ರಾಮವೊಂದರಲ್ಲಿ ಶೇ 65ರಷ್ಟು ಹೆಚ್ಚು ಕಾರ್ಡ್‌ಗಳಿವೆ ಎಂದು ಉದಾಹರಣೆ ನೀಡಿದರು.

ಈ ಹೆಚ್ಚುವರಿ ಕಾರ್ಡ್‌ಗಳು ರದ್ದು ಪಡಿಸುವವರೆಗೆ ಹೊಸ ಕಾರ್ಡಗಳಿಗೆ ನೋಂದಣಿ ಮಾಡಲಾಗುವುದಿಲ್ಲ. ಹರಪನಹಳ್ಳಿ ಪಟ್ಟಣದಲ್ಲಿ ಅಡುಗೆ ಅನಿಲ ಬೇಡಿಕೆ ಹೆಚ್ಚಾಗಿದ್ದು ಹೊಸ ಏಜೆನ್ಸಿಗಾಗಿ ಜಿಲ್ಲಾಧಿಕಾರಿಗಳು ಪ್ರಸ್ತಾವ ಸಲ್ಲಿಸಿದ್ದಾರೆ ಎಂದು ಸಭೆಗೆ ತಿಳಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹತ್ತನೆ ತರಗತಿ ಫಲಿತಾಂಶ ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆಯಾಗಿದ್ದು ಅಲ್ಲಿರುವ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆರಂಭಿಸಲು ಶಿಕ್ಷಕರಿಗೆ ಸೂಚಿಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ರಾಮಪ್ಪ ಸಭೆಗೆ ತಿಳಿಸಿದರು.

ಹರಪನಹಳ್ಳಿಯಿಂದ  ಅರಸೀಕೆರೆ, ಉಚ್ಚಂಗಿದುರ್ಗದಿಂದ ಹಿರೇಮೇಗಳಗೆರೆ ವರೆಗೆ ರಸ್ತೆಗಳು ತೀರಾ ಹದಗೆಟ್ಟಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ. ಕಳೆದ ಸಭೆಯಲ್ಲಿ ದುರಸ್ತಿ ಮಾಡಿಸುವುದಾಗಿ ನೀಡಿದ ಭರವಸೆ ಸುಳ್ಳಾಗಿದೆ. ಸಂಬಂಧಪಟ್ಟ ಎಂಜಿನಿಯರ್ ಸಭೆಗೆ ಗೈರುಹಾಜರಾಗಿದ್ದಾರೆ. ಅಪೂರ್ಣ ಮಾಹಿತಿಯೊಂದಿಗೆ ಸಭೆಗೆ ಬರಬೇಡಿ ಎಂದು ಇಲಾಖೆಯ ಮಹಿಳಾ ಎಂಜಿನಿಯರ್‌ ಅವರನ್ನು ಅಧ್ಯಕ್ಷರು ತರಾಟೆಗೆ ತೆಗೆದುಕೊಂಡರು.

ಅರಣ್ಯ ಇಲಾಖೆ ರಸ್ತೆ ಬದಿ ಮರಗಳನ್ನು ಬೆಳೆಸಲು ಲಕ್ಷಾಂತರ ಹಣ ಖರ್ಚುಮಾಡುತ್ತಾ ಬಂದರೂ ಒಂದೂ ಮರ ಕಾಣಿಸುತ್ತಿಲ್ಲ. ಒಂದು ಮರ ಬೆಳೆಸಲು ಪ್ರತಿ ವರ್ಷ ₹200 ವೆಚ್ಚ ತಗಲುತ್ತದೆ. ಇಲಾಖೆ ಸೂಕ್ತ ನಿರ್ವಹಣೆ  ಮಾಡುತ್ತಿಲ್ಲ ಎಂದು ಉಪಾಧ್ಯಕ್ಷ ಕೆ.ಮಂಜುನಾಥ್‌ ಅರಣ್ಯ ಇಲಾಖೆ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡುರು.

ತಾಲ್ಲೂಕಿನಲ್ಲಿ ಅಳವಡಿಸಿರುವ ಕುಡಿಯುವ ನೀರಿನ ಘಟಕಗಳು ಕೆಲವು ಕಾರ್ಯಾರಂಭ ಮಾಡಿಲ್ಲ. ಸೂಕ್ತ ನಿರ್ವಹಣೆ ಇಲ್ಲದೆ ಕೆಲವು ಕೆಟ್ಟು ಹೋಗಿವೆ. ಕುಡಿಯುವ ನೀರು ಪೂರೈಕೆ ಯಲ್ಲಿ ಅಡೆ ತಡೆಯಾಗದೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಂಜಿನಿಯರ್‌ಗೆ ತಾಕೀತು ಮಾಡಿದರು.  ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿಶ್ವನಾಥ್‌, ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ತಿಪ್ಪೇಸ್ವಾಮಿ ವೇದಿಕೆಯಲ್ಲಿ ಉಪಸ್ಥಿತ ರಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.