ADVERTISEMENT

ಹೊನ್ನಾಳಿ: ಬಿಜೆಪಿ ಬೈಕ್‌ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 9:34 IST
Last Updated 8 ಸೆಪ್ಟೆಂಬರ್ 2017, 9:34 IST

ಹೊನ್ನಾಳಿ: ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್ ಕುಮಾರ್ ಹತ್ಯೆಗೆ ಕಾರಣವಾದ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಯುವ ಮೋರ್ಚಾ ಗುರುವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೈಕ್‌ ರ‍್ಯಾಲಿಯನ್ನು ಪೊಲೀಸರು ತಡೆದರು.

ಇದರಿಂದ ಬಿಜೆಪಿ ಮುಖಂಡರಾದ ಎಂ.ಪಿ. ರೇಣುಕಾಚಾರ್ಯ, ಎಂ.ಆರ್‌.ಮಹೇಶ್‌, ಸಿ.ಆರ್‌.ಶಿವಾನಂದ ಹಾಗೂ ಪೊಲೀಸರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಸುಮಾರು ಒಂದು ಗಂಟೆ ಕಾಲ ರ‍್ಯಾಲಿಯನ್ನು ತಡೆಹಿಡಿದ ಪಿಎಸ್‌ಐ ಕಾಡದೇವರ ಮಠ ಹಾಗೂ ಪೊಲೀಸ್‌ ಸಿಬ್ಬಂದಿ ಬಂಧಿಸಲು ಮುಂದಾದರು. ಆದರೆ, ಪೊಲೀಸರ ಎಚ್ಚರಿಕೆಯನ್ನು ಲೆಕ್ಕಿಸದೇ, ರೇಣುಕಾಚಾರ್ಯ ಅವರು ಬೈಕ್‌ನಲ್ಲಿ ತೆರಳಿ ತಹಶೀಲ್ದಾರ್‌ ಎನ್‌.ಜೆ. ನಾಗರಾಜ್‌ ಅವರಿಗೆ ಮನವಿ ಸಲ್ಲಿಸಿದರು.

‘ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಸಾಹಿತಿಗಳು ಮತ್ತು ಚಿಂತಕರ ಹತ್ಯೆಗಳು ನಡೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ದೂರಿದರು.

ADVERTISEMENT

ಕೇರಳ ಮುಖ್ಯಮಂತ್ರಿ ಪಿಣರಾಯಿ ಅವರು ಮಂಗಳೂರಿನಲ್ಲಿ ಸಮಾವೇಶ ನಡೆಸುವುದಕ್ಕೆ ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಹಠಕ್ಕೆ ಬಿದ್ದು ಕೆಂಪು ಹಾಸಿನ ಸ್ವಾಗತ ನೀಡಿತು. ಟಿಪ್ಪು ಜಯಂತಿ ಬಗ್ಗೆಯೂ ರಾಜ್ಯದ ಜನ ವಿರೋಧಿಸಿದ್ದರೂ ಸರ್ಕಾರವೇ ಮುಂದೆ ನಿಂತು ಆಚರಿಸಿದೆ. ಮಂಗಳೂರಿನಲ್ಲಿ ಕೋಮು ಗಲಭೆ ನಡೆಯುತ್ತಿರುವಾಗಲೇ ಕಾಂಗ್ರೆಸ್ ಸಮಾವೇಶ ನಡೆಸಲು ಅನುಮತಿ ನೀಡಲಾಗಿದೆ’ ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಆರ್.ಮಹೇಶ್, ಸುರೇಂದ್ರನಾಯ್ಕ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಶಿವಾನಂದ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶಾಂತರಾಜ್ ಪಾಟೀಲ್, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ರಂಗನಾಥ್, ಮರಿಕನ್ನಪ್ಪ, ಮುಖಂಡ ಪ್ರೇಮ್‌ಕುಮಾರ ಬಂಡಿಗಡಿ ಅವರೂ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.