ADVERTISEMENT

ಕೇಸೂ ಇಲ್ಲ, ವಿದ್ಯುತ್‌ ಕಡಿತವೂ ಇಲ್ಲ!

ನೆಪ ಮಾತ್ರಕ್ಕೆ ಅಕ್ರಮ ಪಂಪ್‌ಸೆಟ್ ತೆರವು ಕಾರ್ಯಾಚರಣೆ; ರೈತ ಒಕ್ಕೂಟ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 10:04 IST
Last Updated 18 ಜನವರಿ 2018, 10:04 IST
ನಾಲೆಯಲ್ಲಿ ಅಕ್ರಮವಾಗಿ ಅಳವಡಿಸಿದ್ದ ಪಂಪ್‌ಸೆಟ್‌ಗಳನ್ನು ಅಧಿಕಾರಿಗಳು ತೆರವುಗೊಳಿಸಿದ ದೃಶ್ಯ. (ಸಂಗ್ರಹ ಚಿತ್ರ)
ನಾಲೆಯಲ್ಲಿ ಅಕ್ರಮವಾಗಿ ಅಳವಡಿಸಿದ್ದ ಪಂಪ್‌ಸೆಟ್‌ಗಳನ್ನು ಅಧಿಕಾರಿಗಳು ತೆರವುಗೊಳಿಸಿದ ದೃಶ್ಯ. (ಸಂಗ್ರಹ ಚಿತ್ರ)   

ದಾವಣಗೆರೆ: ತೆರವುಗೊಳಿಸಿದ ಪಂಪ್‌ಸೆಟ್‌ಗಳನ್ನು ಸಂಬಂಧಿಸಿದ ರೈತರಿಗೆ ಹಿಂದಿರುಗಿಸಲಾಗುತ್ತಿದೆ. ಈ ಪಂಪ್‌ಸೆಟ್‌ಗಳನ್ನು ರೈತರು ಮತ್ತೆ ಅಳವಡಿಸಿ, ನೀರು ಕದಿಯುತ್ತಿದ್ದಾರೆ. ಅಕ್ರಮ ಪಂಪ್‌ಸೆಟ್ ಅಳವಡಿಸಿದ ಒಬ್ಬ ರೈತನ ವಿರುದ್ಧವೂ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಭಾರತೀಯ ರೈತ ಒಕ್ಕೂಟದ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಅವರನ್ನು ನಿವಾಸದ ಕಚೇರಿಯಲ್ಲಿ ಬುಧವಾರ ಭೇಟಿ ಮಾಡಿದ ಪದಾಧಿಕಾರಿಗಳು, ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಅಕ್ರಮ ಪಂಪ್‌ಸೆಟ್‌ ತೆರವಿಗೆ ವಿಶೇಷ ಕಾರ್ಯಾಚರಣೆ ನಡೆಸಿದ ಅವರ ಪ್ರಯತ್ನವನ್ನು ಶ್ಲಾಘಿಸಿದರು.

ಎಳ್ಳು–ಬೆಲ್ಲ ನೀಡಿ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಹೇಳಿದ ಒಕ್ಕೂಟದ ಪದಾಧಿಕಾರಿಗಳು, ಭದ್ರಾ ನಾಲೆಯ ಇಕ್ಕೆಲಗಳಲ್ಲಿ ಅಳವಡಿಸಿರುವ ಪಂಪ್‌ಸೆಟ್‌ಗಳನ್ನು ನೀರಾವರಿ ಮತ್ತು ಬೆಸ್ಕಾಂ ಅಧಿಕಾರಿಗಳು ನೆಪ ಮಾತ್ರಕ್ಕೆ ತೆರವುಗೊಳಿಸುತ್ತಿದ್ದಾರೆ ಎಂದು ದೂರಿದರು.

ADVERTISEMENT

ಅಕ್ರಮವಾಗಿ ಪಡೆದ ವಿದ್ಯುತ್‌ ಸಂಪರ್ಕವನ್ನು ಇದುವರೆಗೂ ಕಡಿತಗೊಳಿಸಿಲ್ಲ. ನೆಪ ಮಾತ್ರಕ್ಕೆ ನಾಲೆಯುದ್ದಕ್ಕೂ ಹೋಗಿ ಬರುತ್ತಿದ್ದಾರೆ. ಇದರಿಂದ ನೀರು ಬಿಟ್ಟು 11 ದಿನಗಳು ಕಳೆದರೂ ಕೊನೆಭಾಗಕ್ಕೆ ತಲುಪಿಲ್ಲ ಎಂದು ಆರೋಪಿಸಿದರು.

ಒಕ್ಕೂಟದ ಪದಾಧಿಕಾರಿಗಳ ಮನವಿ ಆಲಿಸಿದ ಜಿಲ್ಲಾಧಿಕಾರಿ, ತಕ್ಷಣ ಉಪ ವಿಭಾಗಾಧಿಕಾರಿ ಎನ್‌.ಸಿದ್ದೇಶ್ವರ ಅವರಿಗೆ ಕರೆ ಮಾಡಿದರು. ‘ಕಾರ್ಯಾಚರಣೆ ನೆಪ ಮಾತ್ರಕ್ಕೆ ಆಗಬಾರದು. ಅಕ್ರಮ ಪಂಪ್‌ಸೆಟ್‌ ಅಳವಡಿಸಿದವರ ಮೇಲೆ ನಿರ್ದಾಕ್ಷಿಣ ಕ್ರಮ ಕೈಗೊಳ್ಳಬೇಕು. ತಕ್ಷಣ ತಹಶೀಲ್ದಾರ್‌ ಅವರಿಗೆ ಸೂಚನೆ ನೀಡಿ, ಪ್ರಕರಣಗಳನ್ನು ಪಟ್ಟಿ ಮಾಡಿ. ಕಾರ್ಯಾಚರಣೆಯಲ್ಲಿ ತೆರವು ಮಾಡಿ ತಂದ ಅಕ್ರಮ ಪಂಪ್‌ಸೆಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಿ’ ಎಂದು ಆದೇಶಿಸಿದರು.

ನಂತರ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್‌ ಪಾಟೀಲ್ ಅವರಿಗೆ ಕರೆ ಮಾಡಿದ ಅವರು, ‘ಇಷ್ಟೊಂದು ಅಕ್ರಮ ಪಂಪ್‌ಸೆಟ್‌ಗಳಿಗೆ ಯಾವ ರೀತಿ ವಿದ್ಯುತ್ ಸಂಪರ್ಕ ನೀಡಲಾಗಿತ್ತು? ಇದಕ್ಕೆ ನಿಮಗೆ ನಿಯಮಗಳಿಲ್ಲವೇ?’ ಎಂದು ಕೇಳಿದರು.

ಆ ಕಡೆಯಿಂದ ಉತ್ತರಿಸಿದ ಪಾಟೀಲ್, ‘ಕೊಳವೆಬಾವಿ ಕೊರೆಸಿದ್ದೇವೆ ಎಂದು ಪ್ರಮಾಣಪತ್ರ ನೀಡಿದ್ದಾರೆ. ಇದರ ಆಧಾರದ ಮೇಲೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ’ ಎಂದರು. ಇದರಿಂದ ಕೋಪಗೊಂಡ ಜಿಲ್ಲಾಧಿಕಾರಿ ‘ನಾನು ವಾಸದ ಮನೆಗಾಗಿ ವಿದ್ಯುತ್‌ ಸಂಪರ್ಕ ಪಡೆದು, ಅದನ್ನು ಪಕ್ಕದ ಇನ್ನೊಂದು ಕಟ್ಟಡಕ್ಕೆ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಂಡು, ಬೇರೆ ಚಟುವಟಿಕೆ ನಡೆಸಿದರೆ ನೀವು ಸುಮ್ಮನಿರುತ್ತೀರಾ? ಇದಕ್ಕೆ ಕಾನೂನು ಇಲ್ವಾ? ಅಲ್ಲಿ ಕೊಳವೆಬಾವಿಯೂ ಇಲ್ಲ, ಭೂಮಿಯಲ್ಲಿ ಒಂದು ರಂಧ್ರವೂ ಇಲ್ಲ. ನಾಲೆಯ ನೀರನ್ನು ಎತ್ತಲು ನೀವು ವಿದ್ಯುತ್ ಸಂಪರ್ಕ ಕೊಟ್ಟಿದ್ದೀರಿ. ಅಂತಹವುಗಳನ್ನು ಪತ್ತೆ ಮಾಡಿ ಮೊದಲು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ’ ಎಂದು ಆದೇಶಿಸಿದರು.

ಅಲ್ಲದೇ, ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಕೊಟ್ರೇಶ್ ಅವರಿಗೂ ಕರೆ ಮಾಡಿ, ‘ಕೊನೆಭಾಗಕ್ಕೆ ನೀರು ಹರಿಸಿ, ನಿಮಗೆ ಪೊಲೀಸ್‌ ಭದ್ರತೆ ಒದಗಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ನಿಯೋಗದಲ್ಲಿ ನೀರಾವರಿ ತಜ್ಞ ಪ್ರೊ.ಸಿ.ನರಸಿಂಹಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಿ.ಎಂ.ಸತೀಶ್, ಬಿ.ನಾಗೇಶ್ವರರಾವ್, ಎಚ್‌.ಜಿ.ಗಣೇಶ್, ಮಾಜಿ ಮೇಯರ್ ಎಚ್‌.ಗುರುನಾಥ್, ರೈತ ಮುಖಂಡರಾದ ಶಾಮನೂರು ಎಚ್‌.ಆರ್‌.ಲಿಂಗರಾಜ್, ಸಿದ್ದಪ್ಪ ಅಡಾಣಿ, ಕುಂದವಾಡದ ಜಿಮ್ಮಿ ಹನುಮಂತಪ್ಪ, ಹಂಚಿನಮನೆ ಅಣ್ಣಪ್ಪ, ಬೊಮ್ಮಜ್ಜರ ಸೋಮಶೇಖರ್, ಶಿರಮಗೊಂಡನಹಳ್ಳಿ ಮಂಜುನಾಥ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.