ADVERTISEMENT

ಎಲೆಕೋಸು: ರೈತನಿಗೆ ಬೆಲೆ ಕುಸಿತದ ಆತಂಕ

ಕೆ.ಎಸ್.ವೀರೇಶ್ ಪ್ರಸಾದ್
Published 19 ಜನವರಿ 2018, 9:38 IST
Last Updated 19 ಜನವರಿ 2018, 9:38 IST
ಸಂತೇಬೆನ್ನೂರು ಸಮೀಪದ ಭೀಮನೆರೆ ಗ್ರಾಮದಲ್ಲಿ ಬೆಳೆದ ಸಮೃದ್ಧ ಎಲೆಕೋಸು
ಸಂತೇಬೆನ್ನೂರು ಸಮೀಪದ ಭೀಮನೆರೆ ಗ್ರಾಮದಲ್ಲಿ ಬೆಳೆದ ಸಮೃದ್ಧ ಎಲೆಕೋಸು   

ಸಂತೇಬೆನ್ನೂರು: ಸಮೀಪದ ಭೀಮನೆರೆ ಗ್ರಾಮದಲ್ಲಿ ಹನಿ ನೀರಾವರಿಯಲ್ಲಿ ಬೆಳೆದ ಎಲೆಕೋಸು ಬೆಳೆಗೆ ಬೆಲೆ ಕುಸಿತದ ಆತಂಕ ಕಾಡುತ್ತಿದೆ. ‘ಕಳೆದ ವಾರವಷ್ಟೇ ಪ್ರತಿ ಕೆ.ಜಿ. ಎಲೆಕೋಸನ್ನು ಸಗಟು ವ್ಯಾಪಾರದಲ್ಲಿ ₹ 30–40ರವರೆಗೆ ಖರೀದಿಸಲಾಗಿತ್ತು. ಈಗ ಕೆ.ಜಿ.ಗೆ ₹ 5ಕ್ಕೆ ಕುಸಿದಿದೆ. ಬೆಲೆಯಲ್ಲಿ ತೀವ್ರ ಕುಸಿತದಿಂದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದ ಸ್ಥಿತಿಯಲ್ಲಿದ್ದೇವೆ. ಇನ್ನೆರಡು ದಿನಗಳಲ್ಲಿ ಕಟಾವು ಮಾಡಿ ಮಾರಾಟಕ್ಕೆ ಸಿದ್ಧಗೊಳಿಸಬೇಕು. ಉತ್ತಮ ಇಳುವರಿಯ ಭರವಸೆಯೂ ಇಲ್ಲವಾಗಿದೆ’ ಎನ್ನುತ್ತಾರೆ ರೈತ ರುದ್ರೇಶ್.

ಅಡಿಕೆ ಬೆಳೆ ನಡುವೆ 1 ಎಕರೆಯಲ್ಲಿ ಎಲೆಕೋಸು ಬೆಳೆಯಲಾಗಿದೆ. ಎರಡು ತಿಂಗಳಿನಿಂದ ಉತ್ತಮ ಲಾಭದ ನಿರೀಕ್ಷೆಯಲ್ಲಿ ಎಲೆಕೋಸು ಕೃಷಿ ಪ್ರಾರಂಭಿಸಲಾಗಿತ್ತು. ಸುಮಾರು 10ರಿಂದ 12 ಟನ್ ಎಲೆಕೋಸು ಸಿಗಲಿದೆ. ಪ್ರತಿ ಟನ್‌ಗೆ ಕೇವಲ ₹ 5 ಸಾವಿರ ಧಾರಣೆ ಇದೆ. ₹ 50 ಸಾವಿರ ಮಾರಾಟ ಬೆಲೆ ಸಿಗಲಿದೆ. ಇದುವರೆಗೆ ₹ 35 ಸಾವಿರ ಖರ್ಚುಮಾಡಲಾಗಿದೆ ಎನ್ನುತ್ತಾರೆ ರೈತ ವೆಂಕಟೇಶ್.

‘ಏಕ ಬೆಳೆ ಪದ್ಧತಿಯಿಂದ ವಿಮುಖರಾಗಿ ಬದಲಿ ತರಕಾರಿ ಬೆಳೆಗೆ ಪ್ರಯತ್ನಪಟ್ಟೆವು. ಎಲೆಕೋಸು ಕೈ ಹಿಡಿಯುವ ನಂಬಿಕೆಯಿಂದ ಶ್ರಮ ವಹಿಸಿದೆವು. ಅಸ್ಥಿರ ಮಾರುಕಟ್ಟೆ ವ್ಯವಸ್ಥೆಯಲ್ಲಿ ರೈತರಿಗೆ ಸದಾ ಆತಂಕವೇ ಹೆಚ್ಚು. ಅಪರೂಪಕ್ಕೊಮ್ಮೆ ಅದೃಷ್ಟವಶಾತ್ ಭರ್ಜರಿ ಧಾರಣೆ ಸಿಗಲಿದೆ. ಅದನ್ನೇ ನಂಬಿ ರೈತರು ಶ್ರಮ ವಹಿಸಿ ವೈವಿಧ್ಯಮಯ ಬೆಳೆಗೆ ಪ್ರಯತ್ನಿಸುತ್ತೇವೆ. ಮಾರುಕಟ್ಟೆ ವ್ಯವಸ್ಥೆ ಯಾರ ಹಿಡಿತದಲ್ಲಿದೆ? ಬೆಲೆಯಲ್ಲಿ ಅವೈಜ್ಞಾನಿಕ ಏರುಪೇರುಗಳಾಗುವುದು ಹೇಗೆ? ಸ್ಥಿರ ಧಾರಣೆಗೆ ನಿಯಂತ್ರಿತ ವ್ಯವಸ್ಥೆ ಸರ್ಕಾರಕ್ಕೆ ಕಲ್ಪಿಸಲು ಸಾಧ್ಯವಿಲ್ಲವೇ? ಎಂಬ ಅನುಮಾನಗಳು ಸದಾ ಕಾಡುತ್ತಿವೆ’ ಎನ್ನುತ್ತಾರೆ ರೈತರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.