ADVERTISEMENT

ಜಗಳೂರಿನ ಹುಣ್ಣಿಮೆ ಚರಿತ್ರಾರ್ಹ: ಡಾ.ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 8:47 IST
Last Updated 3 ಫೆಬ್ರುವರಿ 2018, 8:47 IST

ಸಿರಿಗೆರೆ: ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವವು ಚರಿತ್ರಾರ್ಹವಾಗಿ, ಅಭೂತಪೂರ್ವವಾಗಿ ಯಶಸ್ವಿಯಾಗಿದೆ. ಕಳೆದ 35 ವರ್ಷಗಳಿಗೆ ಹೋಲಿಸಿದರೆ ಅರ್ಥಗರ್ಭಿತವಾಗಿ ನಡೆದಿದೆ ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಶಿವಕುಮಾರ ಶಿವಾಚಾರ್ಯ ಸ್ವಾಮಿಜಿಯವರ ಐಕ್ಯಮಂಟಪದಲ್ಲಿ ಏರ್ಪಡಿಸಿದ್ದ ಹುಣ್ಣಿಮೆ ಮಹೋತ್ಸವದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾಡಿನ ಯಾವುದೇ ಭಾಗದಲ್ಲಿ ತರಳಬಾಳು ಹುಣ್ಣಿಮೆ ನಡೆದರೂ ಅಲ್ಲಿನ ಮೂಲ ಸಮಸ್ಯೆಗಳಿಗೆ ಸ್ಪಂದಿಸುವ ಮುಂದಾಲೋಚನೆ ಇಟ್ಟುಕೊಳ್ಳಲಾಗುತ್ತದೆ. ಹಳೇಬೀಡಿನಲ್ಲಿ ಮುಂದಿನ ವರ್ಷ ತರಳಬಾಳು ಹುಣ್ಣಿಮೆ ನಡೆಯಲಿದೆ ಎಂದು ತಿಳಿಸಿದರು.

ADVERTISEMENT

ಹುಣ್ಣಿಮೆ ಕಾರ್ಯಕ್ರಮದಲ್ಲಿ ಪ್ರತಿದಿನ ಆಧ್ಯಾತ್ಮಿಕ, ಆರೋಗ್ಯ, ಶಿಕ್ಷಣ, ನಾಡು ನುಡಿ, ಶರಣ ತತ್ವ, ಧರ್ಮ ಮತ್ತು ಸಂಸ್ಕೃತಿಗೆ ಹೆಚ್ಚು ಒತ್ತು ಕೊಡಲಾಗಿತ್ತು. ಕಾರ್ಯಕ್ರಮದ ಯಶಸ್ಸಿಗೆ ಜಗಳೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಕಾರ್ಯಕರ್ತರು, ಕಾರ್ಯಕ್ರಮದ ಸ್ವಾಗತ ಸಮಿತಿ ಹಾಗೂ ಭಕ್ತರು ಕಾರಣ ಎಂದರು.

ಕಾಣಿಕೆ ರೂಪದಲ್ಲಿ ಬಂದಿರುವುದನ್ನು ಉತ್ತಮ ಕಾರ್ಯಗಳಿಗೆ ಉಪಯೋಗಿಸಿಕೊಂಡು ಮುಂದಿನ ಸಮಸ್ಯೆಗಳಿಗೆ ವಿನಿಯೋಗ ಮಾಡಲಾಗುವುದು. ‘ಶ್ರೀಮಠ ನನಗೇನು ಮಾಡಿದೆ ಎನ್ನುವುದರ ಬದಲಾಗಿ ನಾನೇನು ಮಠಕ್ಕೆ ಕೊಡುಗೆ ನೀಡಿದ್ದೇನೆ’ ಎಂದು ಭಕ್ತರು ಸಮರ್ಪಿಸಿದ ಕಾಣಿಕೆ ಅತ್ಯಮೂಲ್ಯವಾದುದು. ಕೆರೆಯಿಂದ ಕೆರೆಗೆ ಪಾದಯಾತ್ರೆ ಸಂತೋಷಕರವಾಗಿತ್ತು. ಮುಂದಿನ ದಿನಗಳಲ್ಲಿಯೂ ಯೋಜನೆಗಳು ಸಮರ್ಪಕವಾಗಿ ನಡೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಜಗಳೂರು ಹುಣ್ಣಿಮೆಯ ಮಹೋತ್ಸವದ ಕಾರ್ಯಕರ್ತರಾದ ಸುಭಾಷ್ ಚಂದ್ರ ಬೋಸ್‌, ಕೆ.ಎಂ.ಬಸವರಾಜಪ್ಪ, ಡಾ.ಮಂಜುನಾಥಗೌಡ, ಚನ್ನಗಿರಿ ತುಮ್ಕೋಸ್‌ನ ಶಿವಕುಮಾರ್, ಪುಷ್ಪ, ಜಗಳೂರಿನ ಕಾರ್ಯಕರ್ತರು, ಆಡಳಿತಾಧಿಕಾರಿ ಎಸ್.ಬಿ.ರಂಗನಾಥ್‌, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಶಾಲಾ ಕಾಲೇಜುಗಳ ಅಧ್ಯಾಪಕ ವರ್ಗ, ಶಿಕ್ಷಕರು, ವಿದ್ಯಾರ್ಥಿಗಳು, ಸಿರಿಗೆರೆ ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.