ADVERTISEMENT

‘ಅಂಬೇಡ್ಕರ್‌, ಗಾಂಧಿ ಜಾತಿಗೆ ಸೀಮಿತಬೇಡ’

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 9:25 IST
Last Updated 15 ಜುಲೈ 2017, 9:25 IST

ಧಾರವಾಡ: ‘ರಾಜಕೀಯ ಪಕ್ಷಗಳು ಮತ ಬ್ಯಾಂಕ್‌ ಉದ್ದೇಶದಿಂದ ದೇಶದ ಅಭಿವೃದ್ಧಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಂಬೇಡ್ಕರ್, ಗಾಂಧಿ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುತ್ತಿವೆ’ ಎಂದು ಶಾಸಕ ಅರವಿಂದ ಬೆಲ್ಲದ ವಿಷಾದ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ವಿಭಾಗದ ವತಿಯಿಂದ ಏರ್ಪಡಿಸಿರುವ ‘ಪ್ರಬುದ್ಧ ಭಾರತ ನಿರ್ಮಾಣಕ್ಕೆ ಡಾ. ಬಿ.ಆರ್. ಅಂಬೇಡ್ಕರ್‌ ಅವರ ಕೊಡುಗೆಗಳು’ ಎಂಬ ವಿಷಯದ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಈಗಾಗಲೇ ನಾಡಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಕಿತ್ತೂರುರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಕ್ಕಮಹಾದೇವಿ ಸೇರಿದಂತೆ ಹಲವು ನಾಯಕರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವ ಸಾಕಷ್ಟು ಪ್ರಯತ್ನಗಳು ನಡೆದಿವೆ. ಇದು ಸರಿಯಾದ ಬೆಳವಣಿಗೆಯಲ್ಲ. ದೇಶದಲ್ಲಿ ಜಾರಿ ಇರುವ ಜಾತಿ ವ್ಯವಸ್ಥೆ ಒಂದು ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಹೀಗಾಗಿ ವಿಶ್ವವಿದ್ಯಾಲಯ ಮಟ್ಟದಿಂದ ಹಿಡಿದು ಶಾಲಾ–ಕಾಲೇಜುಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳನ್ನು ಒಳಗೊಂಡ ಇಂಥ ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಪ್ರತಿಯೊಬ್ಬರೂ ಮುಂದಾಗಬೇಕು’ ಎಂದರು.

ADVERTISEMENT

‘ದೇಶದ ಅಭಿವೃದ್ಧಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯಾವ ಮಹನೀಯರು ಜಾತಿ ವ್ಯವಸ್ಥೆಯನ್ನು ಪೊರೆದು ಕಾರ್ಯ ನಿರ್ವಹಿಸಿಲ್ಲ. ಆದ್ದರಿಂದ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಈ ಜಾತಿ ಪದ್ಧತಿ ಸಮಸ್ಯೆ ಕೇವಲ ಭಾರತದ್ದಲ್ಲ. ಇಡೀ ವಿಶ್ವದಲ್ಲಿ ನಡೆಯುವಂತ ಪ್ರಕ್ರಿಯೆಯಾಗಿದೆ.

ಈ ಹಿನ್ನಲೆಯಲ್ಲಿಯೇ ವಿದೇಶಗಳಲ್ಲಿ ಅನೇಕ ಅಹಿತಕರ ಘಟನೆಗಳು ನಡೆಯುತ್ತಿವೆ’ ಎಂದರು. ‘ಭಾರತದಲ್ಲೂ ಬುದ್ಧ, ಬಸವ, ಅಂಬೇಡ್ಕರ್‌ ವಿಚಾರಗಳ ತದ್ವಿರುದ್ಧದ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಹೀಗಾಗಿ ಅಂಬೇಡ್ಕರ್‌ ಅವರು ದೇಶಕ್ಕಾಗಿ ಕೊಟ್ಟಂತ ಕೊಡುಗೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಇಂಥ ಮಹನೀಯರು ಹಾಕಿಕೊಟ್ಟ ಮಾರ್ಗದಲ್ಲಿ ದೇಶವನ್ನು ಅಭಿವೃದ್ಧಿಗೊಳಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು’ ಎಂದರು.

ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ 125ನೇ ಜಯಂತಿಯ ವರ್ಷಾಚರಣೆಯ ಆಯೋಜನಾ ಸಮಿತಿ ಸಂಯೋಜಕ ಡಾ. ಆರ್‌.ವಿ. ಚಂದ್ರಶೇಖರ ಮಾತನಾಡಿ, ‘ಸಮಾಜದ ಏಳಿಗೆಗೆ ಶ್ರಮಿಸಿದ ಅನೇಕ ಸಾಮಾಜಿಕ ಸುಧಾರಕರಲ್ಲಿ ಅಂಬೇಡ್ಕರ್ ಒಬ್ಬರಾಗಿದ್ದಾರೆ. ಆದರೆ, ದೇಶದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಅಂಬೇಡ್ಕರ್ ಅವರ ಮೂಲ ಸಿದ್ಧಾಂತವನ್ನು ಅಳವಡಿಸಿಕೊಂಡಿಲ್ಲ. ಸರ್ಕಾರಗಳೂ ಇದಕ್ಕೆ ಮುಂದಾಗಿಲ್ಲ.

ಅಲ್ಲದೇ, ಈ ನೆಲದ ಮೂಲವನ್ನು ಅರಿತುಕೊಂಡು ಸಮಸಮಾಜ ನಿರ್ಮಾಣಕ್ಕೆ ನಿರಂತರ ಪ್ರಯತ್ನಿಸಿದ ಅಂಬೇಡ್ಕರ್ ಅವರನ್ನು ಸಮಾಜ ಶಾಸ್ತ್ರದ ಪಠ್ಯದಲ್ಲಿಯೂ ಅಳವಡಿಸಿಲ್ಲ.  ದೇಶದ ಎಲ್ಲ ಸಮುದಾಯಗಳ ಉದ್ಧಾರಕ್ಕಾಗಿ ಅನೇಕ ಕರಡುಗಳನ್ನು ಸಿದ್ಧಪಡಿಸಿದ ಅಂಬೇಡ್ಕರ್‌ರ ಮೂಲ ಆಶಯಗಳನ್ನು ದೂರವಿಡಲಾಗಿದೆ.

ಅಂಬೇಡ್ಕರ್ ಅವರು ಕೇವಲ ದಲಿತ ನಾಯಕ ಎಂಬ ತಪ್ಪು ಕಲ್ಪನೆಯನ್ನು ಜನರಲ್ಲಿ ಮೂಡಿಸಲಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ’ ಎಂದರು. ಅಧ್ಯಕ್ಷತೆಯನ್ನು ಕವಿವಿ ಕುಲಪತಿ ಡಾ. ಪ್ರಮೋದ ಗಾಯಿ ವಹಿಸಿದ್ದರು. ನಂತರ, ‘ಮಹಿಳೆ, ಸಮಾನತೆ ಮತ್ತು ಅವಕಾಶಗಳು– ಡಾ. ಬಿ.ಆರ್‌.ಅಂಬೇಡ್ಕರ್ ದೃಷ್ಟಿಕೋನದಿಂದ’ ಹಾಗೂ ‘ಪ್ರಜಾಪ್ರಭುತ್ವ ಮತ್ತು ವ್ಯಕ್ತಿಯ ಘನತೆ; ಡಾ. ಬಿ.ಆರ್.ಅಂಬೇಡ್ಕರ್‌ ದೃಷ್ಟಿಕೋನ’ ಎಂಬ ವಿಷಯಗಳ ಕುರಿತು ಗೋಷ್ಠಿಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.