ADVERTISEMENT

ಅವಳಿ ನಗರದ ಎಲ್ಲ ಪ್ರದೇಶವೂ ಆಗಲ್ಲ ಸ್ಮಾರ್ಟ್‌

Published 11 ಮಾರ್ಚ್ 2017, 11:53 IST
Last Updated 11 ಮಾರ್ಚ್ 2017, 11:53 IST
ಅವಳಿ ನಗರದ ಎಲ್ಲ ಪ್ರದೇಶವೂ ಆಗಲ್ಲ ಸ್ಮಾರ್ಟ್‌
ಅವಳಿ ನಗರದ ಎಲ್ಲ ಪ್ರದೇಶವೂ ಆಗಲ್ಲ ಸ್ಮಾರ್ಟ್‌   
 
ಹುಬ್ಬಳ್ಳಿ: ಕೇಂದ್ರ ಸರ್ಕಾರದ ‘ಸ್ಮಾರ್ಟ್‌ ಸಿಟಿ’ ಯೋಜನೆಗೆ ಹುಬ್ಬಳ್ಳಿ ಆಯ್ಕೆಯಾದ ನಂತರ ಸ್ಥಳೀಯ ಜನ­ರಲ್ಲಿ ಆಸೆಗಳು ಗರಿಗೆದರಿವೆ. ‘ನಮ್ಮ ನಗರವೂ ಸ್ಮಾರ್ಟ್‌’ ಆಗುತ್ತದೆ ಎನ್ನುವ ಭಾವನೆ ಬಹುತೇಕರದು. ಆದರೆ, ನಿಜಕ್ಕೂ ಏನಾಗುತ್ತದೆ?
 
ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವನ್ನು ‘ಪ್ರಜಾ­ವಾಣಿ’ ಮಾಡಲಿದೆ. ಯೋಜನೆಯ ಪರಿಚಯ, ಅದಕ್ಕೆ ಖರ್ಚು ಮಾಡುವ ಮೊತ್ತ ಮತ್ತು ಕೈಗೊಳ್ಳುವ ಅಭಿವೃದ್ಧಿ ಕಾಮ­ಗಾರಿಗಳ ಬಗ್ಗೆ ‘ಪ್ರಜಾವಾಣಿ’ ವಿಸ್ತೃತ­ವಾಗಿ ವರದಿಗಳನ್ನು ಪ್ರಕಟಿಸಲಿದೆ.
 
‘ಸ್ಮಾರ್ಟ್‌ ಸಿಟಿ’ ಯೋಜನೆಗೆ ಹುಬ್ಬಳ್ಳಿ– ಧಾರವಾಡ ಅವಳಿ ನಗರ ಆಯ್ಕೆ ಆಗಿದೆ ಎಂದು ಎಲ್ಲೆಡೆ ಹೇಳಲಾಗುತ್ತದೆ. ಕೇಂದ್ರ ಸರ್ಕಾರದ ನಗರಾಭಿ­ವೃದ್ಧಿ ಇಲಾ­ಖೆಯ ದಾಖಲೆಗಳ­ಲ್ಲಿಯೂ ಅದು ಹಾಗೆಯೇ ಇದೆ. ಆದರೆ, ನಿಜಕ್ಕೂ ಅವಳಿ ನಗರ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಕಾಣುತ್ತದೆಯೇ ಎನ್ನುವ ಪ್ರಶ್ನೆ ಎದ್ದಿದೆ.
 
ಯೋಜನೆಯ ಅನುಷ್ಠಾನದ ಜವಾಬ್ದಾರಿ ಹೊತ್ತಿ­ರುವ ಮಹಾನಗರ ಪಾಲಿಕೆ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಅವರ ಪ್ರಕಾರ ಪಾಲಿಕೆಯ 992 ಎಕರೆ ಪ್ರದೇಶ ಮಾತ್ರ ಸ್ಮಾರ್ಟ್‌ ಸಿಟಿ ಯೋಜನೆ ವ್ಯಾಪ್ತಿಗೆ ಸೇರಿದೆ.
 
ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯು 202.3 ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಇದರಲ್ಲಿ ಏಳು ವಾರ್ಡ್‌ಗಳು ಪೂರ್ಣ ಪ್ರಮಾಣದಲ್ಲಿ ಹಾಗೂ ಆರು ವಾರ್ಡ್‌ಗಳು ಭಾಗಶಃ ಮಾತ್ರ ಈ ಯೋಜನೆ­ಯಡಿ ಅಭಿವೃದ್ಧಿಯಾಗಲಿವೆ. ಜನದಟ್ಟಣೆ ಇರುವ ಹಳೆ ಹುಬ್ಬಳ್ಳಿಯ ಶೇ33ರಷ್ಟು ಪ್ರದೇಶ, ಹೊಸ ಬಡಾವಣೆಗಳ ಶೇ30ರಷ್ಟು ಹಾಗೂ ಅಭಿವೃದ್ಧಿ ಹೊಂದು­­­ತ್ತಿರುವ ಶೇ36ರಷ್ಟು ಪ್ರದೇಶವನ್ನು ಯೋಜ­ನೆಯ ‘ಪ್ರದೇಶಾಧಾರಿತ ಅಭಿವೃದ್ಧಿ’ಗೆ ಸೇರಿಸಲಾಗಿದೆ.
 
‘ನಗರದ ಒಂದು ನಿರ್ದಿಷ್ಟ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯ ಸೇರಿದಂತೆ ಇ–ಆಡಳಿತ ಜಾರಿಗೊಳಿಸುವುದು ಯೋಜ­ನೆಯ ಉದ್ದೇಶ. ಸ್ವಚ್ಛ ಪರಿಸರ ಮತ್ತು 'ಸ್ಮಾರ್ಟ್' ಪರಿ­ಹಾ­ರ­ಗಳ ಮೂಲಕ ಕನಿಷ್ಠ ಮೂಲ­ಸೌಕರ್ಯ ಮತ್ತು ಯೋಗ್ಯ ಗುಣಮಟ್ಟದ ಜೀವನ­ವನ್ನು ಒದ­­ಗಿ­ಸುವುದು ಕೂಡ ಉದ್ದೇಶ­ಗಳಲ್ಲಿ ಸೇರಿವೆ’ ಎಂದು ಸಿದ್ಧಲಿಂಗಯ್ಯ ಹೇಳುತ್ತಾರೆ.
 
ನಗರ ಅಭಿವೃದ್ಧಿಗೆ ಅನೇಕ ಮಾರ್ಗ­ಸೂಚಿಗಳನ್ನು ರೂಪಿಸ­ಲಾಗಿದೆ. ನಗರ ವಾಸಿಗಳ ಕಲ್ಪನೆಯಲ್ಲಿ ಸ್ಮಾರ್ಟ್ ಸಿಟಿ ಎಂದರೆ ಮೂಲಸೌಕರ್ಯ ಮತ್ತು ಆಧುನಿಕ ಸೇವೆಗಳು ಇರುತ್ತವೆ. ನಾಗರಿಕರ ಈ ಅವಶ್ಯಕತೆಗಳನ್ನು ಪೂರೈಸಲು ನಗರ ಯೋಜಕರು ನಗರದ ಸಮಗ್ರ ಪರಿಸರ ವ್ಯವಸ್ಥೆ ಅಭಿವೃದ್ಧಿಯ ಗುರಿಯೊಂದಿಗೆ ಯೋಜನೆ ರೂಪಿಸಿ­ದ್ದಾರೆ.
 
ಸಮಗ್ರ ಅಭಿವೃದ್ಧಿಯಲ್ಲಿ ಸಾಂಸ್ಥಿಕ, ಭೌತಿಕ, ಸಾಮಾಜಿಕ ಮತ್ತು ಆರ್ಥಿಕ ಮೂಲಸೌಕರ್ಯ ಎಂಬ ನಾಲ್ಕು ಸ್ತಂಭಗಳಿವೆ. ಇದು ದೀರ್ಘಕಾಲದ ಗುರಿಯಾಗಿದ್ದು, ನಗರದ ಪರಿಸರ ವ್ಯವಸ್ಥೆಯನ್ನು ಹಂತ-ಹಂತವಾಗಿ ಬೆಳೆಸಿ, ಈ ಪದರಗಳ ಮೂಲಕ ಸಮಗ್ರ ಮೂಲಸೌಕರ್ಯ ಕಲ್ಪಿಸುವುದು ಉದ್ದೇಶ.
 

ಪ್ರಸ್ತಾವಕ್ಕೆ  3.6 ಲಕ್ಷ ನಾಗರಿಕರ ಸಲಹೆ
ಸ್ಮಾರ್ಟ್‌ ಸಿಟಿ ಯೋಜನೆಯ ಪ್ರಸ್ತಾವ ಸಿದ್ಧಪಡಿಸಲು 3.6 ಲಕ್ಷ ನಾಗರಿಕರು ನೆರವಾಗಿದ್ದಾರೆ. ನಗರ ಯೋಜಕರು, ಉದ್ಯಮಿಗಳು, ಶಿಕ್ಷಣ ತಜ್ಞರು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಅಧಿಕಾರಿಗಳು, ತಾಂತ್ರಿಕ ಸಮಿತಿ ಸದಸ್ಯರು, ಐಟಿ ತಜ್ಞರು, ಆಟೊ ಚಾಲಕರು, ಬೀದಿಬದಿ ವ್ಯಾಪಾರಿಗಳು, ವಿವಿಧ ಸಂಸ್ಥೆಗಳ ಮುಖ್ಯಸ್ಥರು ಪ್ರಸ್ತಾವನೆ ಸಿದ್ಧಪಡಿಸಲು ಸಲಹೆ ನೀಡಿದ್ದಾರೆ.

ಆನ್‌ಲೈನ್‌ನಲ್ಲಿ 135 ಸಾರ್ವಜನಿಕ ಸಂವಾದಗಳು ನಡೆದಿವೆ. ನಾಗರಿಕ ಸಲಹಾ ವೇದಿಕೆಗಳ ಸಭೆ, ನಗರ ಮಟ್ಟದ ನಾಗರಿಕ ಸಭೆ, ವಾರ್ಡ್‌, ವಲಯ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗಿತ್ತು. ಸ್ಥಳೀಯ ಸಂಸ್ಥೆಯ 13 ಸಭೆಗಳು ನಡೆದಿವೆ. ಅಂತರ ಇಲಾಖೆ, ತಾಂತ್ರಿಕ ಸಮಿತಿ ಸಭೆ, ಜಿಲ್ಲಾ ಉಸ್ತುವಾರಿ ಮಂತ್ರಿಗಳ ಸಭೆ, ಕಾರ್ಯಕಾರಿ ಸಮಿತಿಗಳ ಸಭೆಗಳು ಇದರಲ್ಲಿ ಸೇರಿವೆ.
 
ಸ್ಮಾರ್ಟ್‌ ಸಿಟಿಗೆ ಸಂಬಂಧಿಸಿದಂತೆ ಪ್ರಬಂಧ, ಚಿತ್ರಕಲೆ, ವಿನ್ಯಾಸ ಸ್ಪರ್ಧೆ, ಪಿಪಿಟಿ ಪ್ರಾತ್ಯಕ್ಷಿಕೆ ಸ್ಪರ್ಧೆ, ಮ್ಯಾರಥಾನ್‌, ವಾಕಥಾನ್‌, ಹ್ಯಾಕಥಾನ್‌ಗಳಂತಹ 8 ಕಾರ್ಯಕ್ರಮಗಳನ್ನೂ ಪಾಲಿಕೆ ನಡೆಸಿದೆ. ಇದಲ್ಲದೆ, ನಗರ ಯೋಜನೆ ಮತ್ತು ಐಟಿ ಸಲ್ಯೂಷನ್‌ ಸಭೆ, ಉದ್ಯಮಿಗಳ ಸಭೆಯನ್ನೂ ನಡೆಸಲಾಗಿದೆ ಎಂದು ಪಾಲಿಕೆ ಆಯುಕ್ತರು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.