ADVERTISEMENT

ಅವ್ಯವಸ್ಥೆ ವಿರುದ್ಧ ಮೇಯರ್‌ ಆಕ್ರೋಶ

ಧಾರವಾಡದ 19ನೇ ವಾರ್ಡ್‌ನಲ್ಲಿ ಪ್ರಗತಿ ಪರಿಶೀಲಿಸಿದ ಅಶ್ವಿನಿ ಮಜ್ಜಗಿ

​ಪ್ರಜಾವಾಣಿ ವಾರ್ತೆ
Published 27 ಮೇ 2015, 7:05 IST
Last Updated 27 ಮೇ 2015, 7:05 IST

ಧಾರವಾಡ: ‘ಅವಳಿನಗರದ ಯಾವ ರಸ್ತೆಯ ಮೇಲೂ ಚರಂಡಿ ನೀರು ರಸ್ತೆ ಮೇಲೆ ಹರಿಯದಂತೆ ಕ್ರಮ ಕೈಗೊಳ್ಳ ಬೇಕು. ಹಾಗೇನಾದರೂ ಆದರೆ ಅದಕ್ಕೆ ಅಧಿಕಾರಗಳನ್ನೇ ನೇರ ಹೊಣೆಗಾರ ರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸ ಲಾಗುವುದು’ ಎಂದು ಮೇಯರ್‌ ಅಶ್ವಿನಿ ಮಜ್ಜಗಿ ಅಧಿಕಾರಿಗಳಿಗೆ ಖಡಕ್‌ ಸಂದೇಶ ನೀಡಿದರು.

ಇಲ್ಲಿನ 19ನೇ ವಾರ್ಡ್‌ಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ‘ಈ ವಾರ್ಡ್‌ನಲ್ಲಿ ಬಹುತೇಕ ಚರಂಡಿ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ವಾರ್ಡ್‌ನಲ್ಲಿ ಕಸ ವಿಲೇವಾರಿಯೂ ಆಗಿಲ್ಲ. ಎಲ್ಲೆಂದ ರೆಲ್ಲಿ ಕಸ ಬಿದ್ದಿದೆ. ಗಟಾರುಗಳು ಗಬ್ಬೆದ್ದು ನಾರುತ್ತಿವೆ. ಅಧಿಕಾರಿಗಳೇನು ಕೆಲಸ ಮಾಡುತ್ತಿದ್ದೀರಿ? ನೀವೇನು ಕೇವಲ ಸಂಬಳ ಪಡೆಯುವ ಸಲುವಾಗಿಯೇ ಇದ್ದೀರಾ?’ ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ಇನ್ನೇನು ಮಳೆಗಾಲ ಪ್ರಾರಂಭ ವಾಗುತ್ತದೆ. ಈಗಲೇ ಈ ವಾರ್ಡ್‌ನಲ್ಲಿ ಇಷ್ಟು ಗಲೀಜು ಇದೆ. ಇನ್ನು ಮಳೆ ಗಾಲದಲ್ಲಿ ಇಲ್ಲಿನ ಜನತೆ ಎಷ್ಟು ಕಷ್ಟ ಅನುಭವಿಸಬೇಕಾಗುತ್ತದೆ ಎಂಬುದು ಅಧಿಕಾರಿಗಳ ಗಮನದಲ್ಲಿರಲಿ. ಶೀಘ್ರದಲ್ಲೇ ಇಲ್ಲಿನ ಅವ್ಯವಸ್ಥೆಯನ್ನು ಸಂಬಂಧಿಸಿದ ಅಧಿಕಾರಿಗಳು ಬಗೆ ಹರಿಸಬೇಕು. ಚರಂಡಿಯಲ್ಲಿ ಸರಾಗವಾಗಿ ನೀರು ಹರಿದು ಹೋಗುವಂತಾಗಬೇಕು. ಗಟಾರುಗಳನ್ನು ಪ್ರತಿದಿನ ಸ್ವಚ್ಛಗೊಳಿಸಲು ಸಿಬ್ಬಂದಿಗೆ ಸೂಚಿಸಬೇಕು’ ಎಂದು ಅಧಿಕಾರಿಗಳಿಗೆ ಹೇಳಿದರು.

‘ಈ ವಾರ್ಡಿನಲ್ಲಿ 24 ಗಂಟೆ ನೀರು ಸರಬರಾಜಿಗೆ ಸಂಬಂಧಿಸಿದ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದೆ. ಎಸ್‌ಟಿಪಿ ಘಟಕದ ಕಾಮಗಾರಿ ಅನುದಾನದ ಕೊರತೆ ಯಿಂದ ನಿಧನವಾಗಿ ಸಾಗುತ್ತಿರುವುದ ರಿಂದ ಈ ಭಾಗದಲ್ಲಿ ಚರಂಡಿ ಸಮಸ್ಯೆ ತಲೆದೋರಿದೆ. ಸದ್ಯ ಅನುದಾನ ಬಂದಿದ್ದು, ಎಸ್‌ಟಿಪಿ ಘಟಕದ ಕಾಮ ಗಾರಿಯನ್ನು ಶೀಘ್ರವೇ ಪ್ರಾರಂಭ ಮಾಡ ಲಾಗುವುದು.

ಈ ವಾರ್ಡಿನ ಪ್ರಮುಖ ರಸ್ತೆ ಪಿಬಿ ರಸ್ತೆಗೆ ಹೊಂದಿಕೊಂಡಿರುವುದರಿಂದ ಹಾಗೂ ಇಲ್ಲಿ ಬಿಆರ್‌ಟಿಎಸ್ ಕಾಮಗಾರಿ ಕೈಗೊಂಡಿರುವುದರಿಂದಲೂ ಇಲ್ಲಿ ಚರಂಡಿ ಸಮಸ್ಯೆ ಉದ್ಭವವಾಗುತ್ತಿದೆ  ಎಂದು ಅಧಿಕಾರಿಗಳು ಹೇಳಿದರು. ‘ಮುಂದಿನ ದಿನ ಗಳಲ್ಲಿ ಈ ರೀತಿಯ ಸಮಸ್ಯೆ ತಲೆದೋರದಂತೆ ಪಾಲಿಕೆ ಯಿಂದ ಎಚ್ಚರಿಕೆ ವಹಿಸಲಾಗುತ್ತದೆ’ ಎಂದು ಮೇಯರ್‌ ಹೇಳಿದರು. ಉಪಮೇಯರ್ ಸ್ಮಿತಾ ಜಾಧವ, ಪಾಲಿಕೆ ಸದಸ್ಯರಾದ ಶೈಲಜಾ ಕಾಮರಡ್ಡಿ, ರಘು ಲಕ್ಕಣ್ಣವರ ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.