ADVERTISEMENT

‘ಆಯುಕ್ತ ಸಿದ್ಧಲಿಂಗಯ್ಯ ಬಂಧನವಾಗುವವರೆಗೂ ಹೋರಾಟ’

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 7:08 IST
Last Updated 10 ನವೆಂಬರ್ 2017, 7:08 IST
ವಕೀಲ ಸಂತೋಷ ನರಗುಂದ ಅವರೊಂದಿಗೆ ಪಾಲಿಕೆ ಆಯುಕ್ತರು ಅನುಚಿತ ವರ್ತನೆ ತೋರಿದ್ದಾರೆ ಎಂದು ಆರೋಪಿಸಿದ ವಕೀಲರ ಸಂಘದ ಸದಸ್ಯರ ಆಯುಕ್ತರ ಬಂಧನಕ್ಕೆ ಒತ್ತಾಯಿಸಿ ಅವರ ಪ್ರತಿಕೃತಿ ದಹಿಸಿದರು
ವಕೀಲ ಸಂತೋಷ ನರಗುಂದ ಅವರೊಂದಿಗೆ ಪಾಲಿಕೆ ಆಯುಕ್ತರು ಅನುಚಿತ ವರ್ತನೆ ತೋರಿದ್ದಾರೆ ಎಂದು ಆರೋಪಿಸಿದ ವಕೀಲರ ಸಂಘದ ಸದಸ್ಯರ ಆಯುಕ್ತರ ಬಂಧನಕ್ಕೆ ಒತ್ತಾಯಿಸಿ ಅವರ ಪ್ರತಿಕೃತಿ ದಹಿಸಿದರು   

ಹುಬ್ಬಳ್ಳಿ: ಪಾಲಿಕೆ ಆವರಣದಲ್ಲಿರುವ ಆಯುಕ್ತರ ಮನೆಗೆ ಮನವಿ ಸಲ್ಲಿಸಲು ತೆರಳಿದ ವಕೀಲ ಸಂತೋಷ ನರಗುಂದ ಅವರ ಮೇಲೆ ಸಿದ್ಧಲಿಂಗಯ್ಯ ಹಿರೇಮಠ ಅವರು ಅಕ್ರಮ ಪ್ರವೇಶ ಮಾಡಿದ ಪ್ರಕರಣ ದಾಖಲಿಸಿದ್ದಲ್ಲದೇ, ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿ ವಕೀಲರ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.
ನ್ಯಾಯಾಲಯ ಕಲಾಪಗಳಿಂದ ದೂರ ಉಳಿದ ವಕೀಲರು ಸಂಘದ ಸಭಾಂಗಣದಲ್ಲಿ ಸಭೆ ನಡೆಸಿ ನಂತರ ಕೋರ್ಟ್‌ ವೃತ್ತದಲ್ಲಿ ಆಯುಕ್ತರ ಪ್ರತಿಕೃತಿ ದಹಿಸಿದರು.

‘ತಪ್ಪಿನ ಅರಿವಾದ ಬಳಿಕ ಈಗ ವಕೀಲ ಸಮುದಾಯದ ಕ್ಷಮೆ ಕೇಳುವುದಾಗಿ ಆಯುಕ್ತರು ಹೇಳಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ಪ್ರತಿ ಬಾರಿ ಹೀಗೆ ಆದಾಗಲೂ ಕ್ಷಮೆ ಕೇಳಿದ ಬಳಿಕ ವಕೀಲರು ಸುಮ್ಮನಾಗುತ್ತಾರೆ ಎಂಬ ಮನೋಭಾವ ಅಧಿಕಾರಿಗಳಲ್ಲಿ ಬೆಳೆಯುವುದು ಬೇಡ.

ಅವರ ವಿರುದ್ಧ ದಾಖಲಾದ ದೂರಿನ ಅನ್ವಯ ಪೊಲೀಸರು ಅವರನ್ನು ಬಂಧಿಸಬೇಕು ಹಾಗೂ ಸಾರ್ವಜನಿಕರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ಅರಿಯದ ಆಯುಕ್ತರನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ವಕೀಲರ ಸಂಘದ ಕಾರ್ಯದರ್ಶಿ ಅಶೋಕ ಅಣವೇಕರ ಒತ್ತಾಯಿಸಿದರು.

ADVERTISEMENT

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಹಿರಿಯ ವಕೀಲ ಎಂ.ವಿ. ಸೋಮಣ್ಣ, ‘ಪೊಲೀಸರು ಸಂಧಾನಕ್ಕೆ ಯತ್ನಿಸುವ ಬದಲು ನಾವು ಕೊಟ್ಟ ದೂರಿನನ್ವಯ ಆಯುಕ್ತರನ್ನು ಬಂಧಿಸಬೇಕು. ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿ ಆಯುಕ್ತರ ವಿರುದ್ಧ ಕ್ರಮಕ್ಕೆ ಒತ್ತಾಯಿಸೋಣ’ ಎಂದರು.

ವಕೀಲರಾದ ಸಿ.ಬಿ. ಪಾಟೀಲ, ಆರ್‌.ಬಿ. ಉಳ್ಳಾಗಡ್ಡಿ ಹಾಗೂ ಎ.ವಿ. ಬಳಿಗೇರ, ‘ವಕೀಲರು ಎಂದರೆ ಅಧಿಕಾರಿಗಳಿಗೆ ಅಸಡ್ಡೆ ಎಂಬಂತಾಗಿದೆ. ದಿನದ 24 ಗಂಟೆಯೂ ಪಾಲಿಕೆ ಆಯುಕ್ತರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅದನ್ನು ಬಿಟ್ಟು ಮನವಿ ಸಲ್ಲಿಸಲು ಹೋದ ವಕೀಲರ ಮೇಲೆ ಪ್ರಕರಣ ದಾಖಲಿಸಿದ್ದು ಅಕ್ಷಮ್ಯ’ ಎಂದು ಟೀಕಿಸಿದರು.
ವಕೀಲರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಡಿಸಿಪಿ ರೇಣುಕಾ ಸುಕುಮಾರ್‌ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.