ADVERTISEMENT

ಆರ್‌ಟಿಇ: 320 ಸೀಟು ಇನ್ನೂ ಖಾಲಿ

ಬಸವರಾಜ ಹವಾಲ್ದಾರ
Published 19 ಜುಲೈ 2017, 7:04 IST
Last Updated 19 ಜುಲೈ 2017, 7:04 IST

ಹುಬ್ಬಳ್ಳಿ: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)­ಯಡಿ ಧಾರವಾಡ ಜಿಲ್ಲೆಯಲ್ಲಿ 3,858 ಮಕ್ಕಳಿಗೆ ಪ್ರವೇಶಕ್ಕೆ ಅವಕಾಶ­ವಿದೆ. ಇಲ್ಲಿಯವರೆಗೆ 3,538 ವಿದ್ಯಾರ್ಥಿ­ಗಳು ಪ್ರವೇಶ ಪಡೆದಿದ್ದಾರೆ. ಮೂರನೇ ಸುತ್ತಿನಲ್ಲಿ ಪ್ರವೇಶ ಪಡೆಯಲು ಕೊನೆಯ ಎರಡು ದಿನ ಬಾಕಿ ಉಳಿದಿರುವಾಗಲೂ ಇನ್ನೂ 320 ಸೀಟುಗಳು ಖಾಲಿ ಉಳಿದಿವೆ.

ಮೊದಲ ಸುತ್ತಿನಲ್ಲಿ 3,197 ವಿದ್ಯಾರ್ಥಿ­­ಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ 2,723 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಎರಡನೇ ಸುತ್ತಿ­ನಲ್ಲಿ 975 ವಿದ್ಯಾರ್ಥಿಗಳು ಆಯ್ಕೆಯಾಗಿ­ದ್ದರೆ, 726 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಮೂರನೇ ಸುತ್ತಿನಲ್ಲಿ 240 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರೆ, ಜು.18ರ ವರೆಗೆ ಕೇವಲ 89 ವಿದ್ಯಾರ್ಥಿ­ಗಳು ಮಾತ್ರ ಪ್ರವೇಶ ಪಡೆದಿದ್ದಾರೆ.

ಆರ್‌ಟಿಇ ಅಡಿ ಇರುವ ಒಟ್ಟು ಸೀಟುಗಳಲ್ಲಿ 80 ಸೀಟುಗಳ ಪ್ರವೇಶಕ್ಕೆ ಯಾವುದೇ ಅರ್ಜಿ ಇರುವುದಿಲ್ಲ. ಹಾಗಾಗಿ ಅಷ್ಟೂ ಸೀಟುಗಳಿ ಹೆಚ್ಚು–ಕಡಿಮೆ ಖಾಲಿ ಉಳಿಯುವುದು ಬಹುತೇಕ ಖಚಿತವಾಗಿದೆ. ಉಳಿದ 240 ಸೀಟುಗಳಲ್ಲಿ ಆಕಾಂಕ್ಷಿಗಳಿದ್ದಾರೆ. ಆದರೆ, ಪ್ರವೇಶ ಪಡೆಯಲು ಮುಂದಾಗಿಲ್ಲ.

ADVERTISEMENT

‘ಮೂರನೇ ಸುತ್ತಿನಲ್ಲಿ ಆಯ್ಕೆಯಾಗಿ­ರು­ವವರಿಗೆ ಜು.20ರ ವರೆಗೆ ಪ್ರವೇಶ ಪಡೆಯಲು ಅವಕಾಶವಿದೆ. ಎರಡು ದಿನದಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದಾರೆ. ಕೊನೆಯ ದಿನದವರೆಗೂ ಕಾದು ನೋಡಲಾಗು­ತ್ತದೆ’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ಎಚ್‌. ನಾಗೂರ.

‘ಲಭ್ಯ ಇರುವ ಸೀಟುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಕೆಲವರು ವಾರ್ಡ್‌ ವ್ಯಾಪ್ತಿ ಮೀರಿ ಶಾಲೆಗೆ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿರುತ್ತಾರೆ.

ಅಂಥ ಅರ್ಜಿಗಳು ತಿರಸ್ಕೃತ ಆಗಿರುತ್ತವೆ. ಇನ್ನೂ ಕೆಲವರು ಅರ್ಜಿ ಹಾಕುವಾಗ ವಾರ್ಡ್‌ ವ್ಯಾಪ್ತಿಯ ನಾಲ್ಕೈದು ಶಾಲೆಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಅವರ ಆಯ್ಕೆ ಪಟ್ಟಿಯಲ್ಲಿರುವ ಮೊದಲ ಶಾಲೆ ಬಿಟ್ಟು, ಎರಡು ಅಥವಾ ಮೂರನೇ ಶಾಲೆಗೆ ಸೀಟು ಲಭ್ಯವಾದರೂ ಪ್ರವೇಶ ಪಡೆಯು­ವುದಿಲ್ಲ’ ಎಂದು ಹೆಸರು ಹೇಳಲು ಬಯ­ಸದ ಅಧಿಕಾರಿಯೊಬ್ಬರು ತಿಳಿಸಿದರು.

‘ಅರ್ಜಿ ಹಾಕಿದ ಕೆಲವರಿಗೆ ಮೊದಲ ಪಟ್ಟಿಯಲ್ಲಿ ಸೀಟು ಲಭ್ಯವಾಗಿರುವುದಿಲ್ಲ. ಎರಡು, ಮೂರನೇ ಸುತ್ತಿಗೆ ಕಾಯದೇ ಬೇರೆ ಶಾಲೆಗಯಲ್ಲಿ ಮಕ್ಕಳಿಗೆ ಸೇರ್ಪಡೆ ಮಾಡುತ್ತಾರೆ. ಆ ನಂತರ ಸುತ್ತಿನಲ್ಲಿ ಅವರಿಗೆ ಸೀಟು ಲಭ್ಯವಾದರೂ ಅವರು ಪ್ರವೇಶ ಪಡೆಯುವುದಿಲ್ಲ. ಅಲ್ಲಿಯೇ ಶಿಕ್ಷಣ ಮುಂದುವರಿಸುತ್ತಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.