ADVERTISEMENT

ಇನ್‌ಸ್ಪೆಕ್ಟರ್‌ ಜತೆ ಕಾಂಗ್ರೆಸ್‌ ಮುಖಂಡ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 8:25 IST
Last Updated 20 ಡಿಸೆಂಬರ್ 2017, 8:25 IST

ಧಾರವಾಡ: ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ವಿಷಯದಲ್ಲಿ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಮುರುಗೇಶ ಚನ್ನಣ್ಣವರ ಹಾಗೂ ಕಾಂಗ್ರೆಸ್ ಮುಖಂಡ ಇಮ್ರಾನ್ ಕಳ್ಳಿಮನಿ ನಡುವೆ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಮಧ್ಯಾಹ್ನ ಮಾತಿನ ಚಕಮಕಿ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಮಧ್ಯಾಹ್ನ ಕಾರಿನಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಇಮ್ರಾನ್ ಕಳ್ಳಿಮನಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಹಿಂದಿ ಪ್ರಚಾರ ಸಭಾ ಕಡೆ ಹೋಗುತ್ತಿದ್ದರು. ನಿಧಾನವಾಗಿ ಚಲಿಸುತ್ತಿದ್ದ ಅವರಿಗೆ ಬೇಗನೆ ಮುಂದೆ ಹೋಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಮುರುಗೇಶ ಅವರು ಹೇಳಿದ್ದೇ ಜಗಳಕ್ಕೆ ಕಾರಣವಾಯಿತು.

ಅರ್ಧ ಗಂಟೆ ಕಾಲ ಇಬ್ಬರ ನಡುವೆ ವಾಗ್ವಾದ ನಡೆಯಿತು. ಪೊಲೀಸ್ ಜೀಪ್‌ ಚಾಲಕ ತನ್ನನ್ನು ಏಕವಚನದಲ್ಲಿ ಮಾತನಾಡಿಸಿದ್ದಾರೆ ಎಂದು ಇಮ್ರಾನ್ ವಾಗ್ವಾದಕ್ಕೆ ಇಳಿದರು. ಈ ಸಂದರ್ಭದಲ್ಲಿ ವಾಹನದ ದಾಖಲೆ ತೋರಿಸುವಂತೆ ಇನ್‌ಸ್ಪೆಕ್ಟರ್‌ ಕೇಳಿದಾಗ ಇನ್ನಷ್ಟು ಸಿಟ್ಟಾಗಿ ಏರು ಧ್ವನಿಯಲ್ಲಿ ಮಾತನಾಡಿದರು.

ADVERTISEMENT

ನಡುರಸ್ತೆಯಲ್ಲಿ ನಡೆಯುತ್ತಿದ್ದ ಜಗಳ ಬಿಡಿಸಲು ಸಾರ್ವಜನಿಕರು ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ‘ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್ ಬಳಕೆ, ಸೀಟ್ ಬೆಲ್ಟ್‌ ಧರಿಸದಿರುವುದು, ಹೊಗೆ ತಪಾಸಣೆ ಪ್ರಮಾಣ ಪತ್ರ ಇಲ್ಲದಿರುವುದಕ್ಕೆ ದಂಡ ಕಟ್ಟಿ’ ಎಂದು ಮುರುಗೇಶ ಹೇಳಿದರು.

‘ದಂಡದ ಮೊತ್ತ ನೀಡಲು ನಗದು ಇಲ್ಲ. ಬೇಕಿದ್ದರೆ, ಎಟಿಎಂ ಕಾರ್ಡ್‌ನಿಂದ ಪಡೆಯಿರಿ. ಪ್ರಧಾನಿ ಮೋದಿ ಸರ್ಕಾರ ಎಲ್ಲವನ್ನೂ ಡಿಜಿಟಲ್ ಮಾಡಿದೆ. ಸಂಚಾರ ಪೊಲೀಸರಿಗೆ ಸ್ವೈಪಿಂಗ್‌ ಯಂತ್ರ ಖರೀದಿಸಲಾಗದೇ ಎಂದು ಇಮ್ರಾನ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುರುಗೇಶ, ‘ನಮ್ಮ ಬಳಿ ಅಂಥ ಯಂತ್ರಗಳು ಇಲ್ಲ. ನ್ಯಾಯಾಲಯದಲ್ಲೇ ಹಣ ಕಟ್ಟಿ’ ಎಂದು ನೋಟಿಸ್‌ ನೀಡಿ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.