ADVERTISEMENT

ಉತ್ತರ–ದಕ್ಷಿಣ ಭೇದ ಮರೆತು, ಅಭಿವೃದ್ಧಿಗೆ ಚಿಂತಿಸಿ

‘ಪಾಪು– 98’ ಅಭಿವಂದನಾ ಸಮಾರಂಭದಲ್ಲಿ ಎಚ್.ಡಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 19:30 IST
Last Updated 30 ಜನವರಿ 2017, 19:30 IST
ವೇದಿಕೆಗೆ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರನ್ನು ಕರೆದುಕೊಂಡು ಬಂದ ಎಚ್.ಡಿ. ದೇವೇಗೌಡ. ಶಾಸಕ ಎನ್‌.ಎಚ್‌.ಕೋನರಡ್ಡಿ ಇದ್ದಾರೆ
ವೇದಿಕೆಗೆ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರನ್ನು ಕರೆದುಕೊಂಡು ಬಂದ ಎಚ್.ಡಿ. ದೇವೇಗೌಡ. ಶಾಸಕ ಎನ್‌.ಎಚ್‌.ಕೋನರಡ್ಡಿ ಇದ್ದಾರೆ   

ಹುಬ್ಬಳ್ಳಿ: ‘ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಮತ್ತು ಮೈಸೂರು ಕರ್ನಾಟಕ ಎಂಬ ಭೇದ ಸಲ್ಲದು. ರಾಜ್ಯದ ಒಟ್ಟಾರೆ ಅಭಿವೃದ್ಧಿಗಾಗಿ ಚಿಂತನೆ ನಡೆಯಬೇಕು’ ಎಂದು ಜೆ.ಡಿ.ಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಸಲಹೆ ನೀಡಿದರು.

ಡಾ.ಪಾಟೀಲ ಪುಟ್ಟಪ್ಪ ವಿಚಾರ ವೇದಿಕೆ ಹಾಗೂ ಅವ್ವ ಸೇವಾ ಟ್ರಸ್ಟ್‌ ವತಿಯಿಂದ ನಗರದ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಪಾಪು–98’ ಅಭಿವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜಕಾರಣಿಗಳು ಈ ಭಾಗದ ಅಭಿವೃದ್ಧಿಗಾಗಿ ಏನೂ ಮಾಡಲಿಲ್ಲ ಎಂಬ ಭಾವನೆ ಇಲ್ಲಿನ ಹೋರಾಟಗಾರರು ಮತ್ತು ಕೆಲ ಮಠಾಧೀಶರಲ್ಲಿ ಇದೆ. ಇದು ಸರಿಯಲ್ಲ. ಅನೇಕ ಹಿರಿಯರು ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ತಾರತಮ್ಯದ ಮಾತುಗಳನ್ನು ಆಡಿ ಅವರಿಗೆ ನೋವು ತರುವುದು ಬೇಡ’ ಎಂದರು.

ADVERTISEMENT

‘ಕಾವೇರಿ ನದಿ ನೀರಿಗೆ ಸಂಬಂಧಿಸಿ ನಾನು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಕ್ಕೆ ವಿಶೇಷ ಕಾರಣವಿದೆ. ಮಹಾದಾಯಿ ವಿಷಯದಲ್ಲೂ ಸಂದರ್ಭ ಬಂದಾಗ ಹೋರಾಟಕ್ಕೆ ಇಳಿಯುತ್ತೇನೆ’ ಎಂದು ದೇವೇಗೌಡ ಹೇಳಿದರು. 

ದೆವ್ವವಾಗಿ ಕಾಡುತ್ತೇನೆ: ಸನ್ಮಾನ ಸ್ವೀಕರಿಸಿದ ಪಾಟೀಲ ಪುಟ್ಟಪ್ಪ, ‘ನನಗೆ ವಯಸ್ಸಾಗುತ್ತಿದ್ದಂತೆಯೇ ಅನ್ಯಾಯ ಮಾಡುವ ಕೆಲವರಿಗೆ ಖುಷಿಯಾಗುತ್ತಿದೆ. ಆದರೆ ಅನ್ಯಾಯದಲ್ಲಿ ತೊಡಗುವವರನ್ನು ದೆವ್ವವಾಗಿ ಕಾಡುತ್ತೇನೆ ಹುಷಾರ್!’ ಎಂದು ಹೇಳಿ ನಗೆಯುಕ್ಕಿಸಿದರು.

ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿಗಳಾದ ಹಂ.ಪ. ನಾಗರಾಜಯ್ಯ ಹಾಗೂ ಶಾಂತಿನಾಥ ದಿಬ್ಬದ ಅಭಿನಂದನಾ ನುಡಿಗಳನ್ನಾಡಿದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.