ADVERTISEMENT

ಉತ್ತರ ಕರ್ನಾಟಕ ಸಮಸ್ಯೆ ನಿರ್ಲಕ್ಷ್ಯಕ್ಕೆ ಕಿಡಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 8:32 IST
Last Updated 15 ನವೆಂಬರ್ 2017, 8:32 IST

ಧಾರವಾಢ: ‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಉದಾಸೀನ ಧೋರಣೆಯಿಂದಾಗಿ ಉತ್ತರ ಕರ್ನಾಟಕದ ಸಮಸ್ಯೆಗಳು ನಿವಾರಣೆಯಾಗದೆ ಹಾಗೇ ಉಳಿದಿವೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು. ರಾಷ್ಟ್ರೀಯ ಹೆದ್ದಾರಿ 4ರ ನರೇಂದ್ರ ಬೈಪಾಸ್‌ನಿಂದ ಬೆಳಗಾವಿ ವರೆಗೆ ಮಂಗಳವಾರ ಆಯೋಜಿಸಿದ್ದ ‘ವಿಕಾಸಯಾತ್ರೆ’ಯಲ್ಲಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕದ ಹಲವಾರು ವಿಷಯಗಳ ಬಗ್ಗೆ ಕಾರ್ಯಕರ್ತರು ಹಾಗೂ ರೈತರ ಜತೆಗೆ ಸುದೀರ್ಘವಾಗಿ ಚರ್ಚೆ ನಡೆಸುವ ಸಲುವಾಗಿ ಬೆಳಗಾವಿಯಲ್ಲಿ ರೈತರ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಅಲ್ಲಿ ಎಲ್ಲಾ ವಿಷಯಗಳ ಕುರಿತು ಮಾತನಾಡುತ್ತೇನೆ’ ಎಂದರು.

‘ಬೆಳಗಾವಿ ಅಧಿವೇಶನದ ಮೂಲಕ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಆದರೆ, ವಿರೋಧಪಕ್ಷದ ನಾಯಕರು  ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಆಗ್ರಹಿಸಿ ಕಲಾಪ ನಡೆಸಲು ಬಿಡುತ್ತಿಲ್ಲ. ವಿರೋಧ ಪಕ್ಷದ ಮುಖಂಡರು ಈ ರೀತಿ ಕಲಾಪಗಳಿಗೆ ಅಡ್ಡಿಪಡಿಸುವುದರಿಂದ ಈ ಭಾಗದ ಸಮಸ್ಯೆ ಪರಿಹಾರಕ್ಕೆ ಮತ್ತೆ ತೊಡಕಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ರೈತರ ಹಾಗೂ ಜನಸಾಮಾನ್ಯರ ಬೇಡಿಕೆ ಈಡೇರಿಸುವಲ್ಲಿ ರಾಜ್ಯ ಸರ್ಕಾರ ಉದಾಸೀನತೆ ತೋರುತ್ತಿದೆ. ಹೀಗಾಗಿ ಬರಲಿರುವ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್‌ ಮತ್ತು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಜನರ ಆಶೀರ್ವಾದ ಇದ್ದರೆ 2018ರ ವಿಧಾನಸಭೆ ಚುನಾವಣೆಯಲ್ಲಿ ರೈತರ ಪರವಾದ ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನರೇಂದ್ರ ಬೈಪಾಸ್ ಬಳಿ ವಿಕಾಸ ಯಾತ್ರೆ ನಡೆದ ಕಾರಣ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಆದರೆ, ಈ ಸಂದರ್ಭದಲ್ಲಿ ಸ್ಥಳದಲ್ಲಿ ಪೊಲೀಸರು ಇರಲಿಲ್ಲದ ಕಾರಣ ಕಾರ್ಯಕರ್ತರೇ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದರು. ಯಾತ್ರೆ ಅತ್ತ ಬೆಳಗಾವಿ ಕಡೆ ಹೊರಟ ನಂತರ ಪೊಲೀಸರು ಬಂದರು. ನಂತರ ಸುಮ್ಮನೆ ಮರಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ, ‘ವಿಕಾಸ ಯಾತ್ರೆ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಸರಿಯಾದ ಮಾಹಿತಿ ನೀಡದ ಕಾರಣ ಸಂಚಾರ ದಟ್ಟಣೆ ಉಂಟಾಗಿತ್ತು. ಮುಂಚಿತವಾಗಿ ಇಲಾಖೆಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಬಂದೋಬಸ್ತ್‌ ನಿಯೋಜನೆಯಲ್ಲಿ ಗೊಂದಲ ಉಂಟಾಗಿತ್ತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.