ADVERTISEMENT

ಉದ್ಯೋಗಾವಕಾಶ ಹೆಚ್ಚಿಸುವ ಜಿಟಿಟಿಸಿ ಅಧ್ಯಯನ

ಗುಣಮಟ್ಟದ ತಾಂತ್ರಿಕ ಶಿಕ್ಷಣ ಮಂಚೂಣಿಯಲ್ಲಿ ಕೂಡಲಸಂಗಮದ ಸರ್ಕಾರಿ ತರಬೇತಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 25 ಮೇ 2017, 9:09 IST
Last Updated 25 ಮೇ 2017, 9:09 IST
ಪ್ರಾಯೋಗಿಕ ತರಬೇತಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು
ಪ್ರಾಯೋಗಿಕ ತರಬೇತಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು   

ಕೂಡಲಸಂಗಮ: ಕೆಳ ಹಾಗೂ ಮಧ್ಯಮ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿಕ್ಷಣದ ಜೊತೆಗೆ ಉದ್ಯೋಗ ಕೊಡುವಂತಹ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು (ಜಿಟಿಟಿಸಿ) ಕೂಡಲಸಂಗಮದಲ್ಲಿ 17 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ.

ಈ ಕೇಂದ್ರದಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ದೇಶ–ವಿದೇಶಗಳ ಕಂಪೆನಿಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವ ಎಸ್ಸೆಸ್ಸೆಲ್ಸಿ ಪಾಸಾಗಿರುವ ವಿದ್ಯಾರ್ಥಿಗಳು ಜಿಟಿಟಿಸಿಯಲ್ಲಿ ಪ್ರವೇಶ ಪಡೆಯಬಹುದು.

4 ವರ್ಷದ ಡಿಪ್ಲೊಮಾ ಕೋರ್ಸ್‌ನಿಂದ ಹಿಡಿದು ಅಲ್ಪಾವಧಿ ಸರ್ಟಿಫಿಕೆಟ್ ಕೋರ್ಸ್ ಇಲ್ಲಿವೆ. 2017–18ನೇ ಶೈಕ್ಷಣಿಕ ವರ್ಷದ ಪ್ರವೇಶಕ್ಕಾಗಿ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 5 ಕೊನೆಯ ದಿನ.

ಟೂಲ್ ಆ್ಯಂಡ್ ಡೈ ಮೇಕಿಂಗ್ ಮೂರು ವರ್ಷದ ವಿಷಯಾಧಾರಿತ ತರಬೇತಿ ಹಾಗೂ ಒಂದು ವರ್ಷದ ಕೈಗಾರಿಕೆಗಳಲ್ಲಿ ಉದ್ಯಮ ತರಬೇತಿ ಇರುತ್ತದೆ. ಉದ್ಯಮ ತರಬೇತಿ ಪಡೆಯುವ ಪ್ರತಿ ವಿದ್ಯಾರ್ಥಿಗೂ ಪ್ರತಿ ತಿಂಗಳು ₹ 10 ರಿಂದ 13 ಸಾವಿರ ಗೌರವ ಧನ ನೀಡಲಾಗುತ್ತದೆ.

ಸೆಮಿಸ್ಟೆರ್ ಪದ್ಧತಿ ಅಳವಡಿಸಿಕೊಳ್ಳಲಾಗಿದ್ದು, ಪ್ರತಿ ಸೆಮಿಸ್ಟರ್‌ಗೆ ₹11,000 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಕೊನೆಯ ಒಂದು ವರ್ಷಕ್ಕೆ ₹ 11,000 ಶುಲ್ಕ ಭರಿಸಬೇಕಾಗುತ್ತದೆ.

ಟೂಲ್ ಆ್ಯಂಡ್ ಡೈ ಮೇಕಿಂಗ್ ವಿಭಾಗದಲ್ಲಿ 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೆರಿಟ್ ಕಮ್ ರೋಸ್ಟರ್ ಪದ್ಧತಿಯಲ್ಲಿ ಆಯ್ಕೆ ಮಾಡಲಾಗುತ್ತದೆ. 20 ಸೀಟುಗಳು ವಿದ್ಯಾರ್ಥಿನಿಯರಿಗೆ ಮೀಸಲಾಗಿವೆ.

ಒಂದು ವರ್ಷ ಅವಧಿಯ ಕಾಂಪೋಸಿಟ್ ಮೆಷಿನಿಸ್ಟ್ ಮತ್ತು 2 ವರ್ಷ ಅವಧಿಯ ಟೂಲ್ ಆ್ಯಂಡ್ ಡೈ ಟೆಕ್ನಿಷಿಯನ್, ಮೂರು ವರ್ಷದ ಕಾಂಫಿಟೆನ್ಸಿ ಸರ್ಟಿಫಿಕೆಟ್ ಡಿಪ್ಲೊಮಾ ಮುಂತಾದ ಅಲ್ಪಾವಧಿ ವೃತ್ತಿ ತರಬೇತಿ ಕೋರ್ಸ್‌ಗಳಿವೆ.

ಒಂದು ವರ್ಷದ ಅಧ್ಯಯನಕ್ಕೆ ₹ 20 ಸಾವಿರ ಶುಲ್ಕ ಭರಿಸಬೇಕಾಗುತ್ತದೆ. ಕಾಂಪೋಸಿಟ್ ಮೆಷಿನಿಸ್ಟ್‌ನಲ್ಲಿ 30 ಸೀಟು ಹಾಗೂ ಟೂಲ್ ಆಂಡ್ ಡೈ ಟೆಕ್ನಿಷಿಯನ್‌ನಲ್ಲಿ 30 ಸೀಟುಗಳಿವೆ.

ಜಿಟಿಟಿಸಿಯಲ್ಲಿ ನಾಲ್ಕು ವರ್ಷದ ಡಿಪ್ಲೊಮಾ ಓದಿದ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮೂರನೇ ಸೆಮಿಸ್ಟರ್‌ಗೆ ಪ್ರವೇಶ ಹೊಂದಲು ಅವಕಾಶವಿದೆ. ಅತ್ಯಾಧುನಿಕ ಯಂತ್ರೋಪಕರಣ ಅಳವಡಿಸಲಾಗಿದೆ. ತರಬೇತಿ ನೀಡಲು 15 ಉಪನ್ಯಾಸಕರು, 8 ಶಿಕ್ಷಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಪ್ರತಿ ವರ್ಷ ಕ್ಯಾಂಪಸ್ ಸಂದರ್ಶನ ನಡೆಯುತ್ತದೆ. ಶಿಕ್ಷಣ ಕೇಂದ್ರ 10 ಎಕರೆ ವಿಶಾಲವಾದ ಜಾಗದಲ್ಲಿ ಇದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯ ಇವೆ.

ಸಂಪರ್ಕಕಕ್ಕೆ ಪ್ರಾಚಾರ್ಯರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಕೂಡಲಸಂಗಮ – 587115.
ದೂರವಾಣಿ ಸಂಖ್ಯೆ 08351-–268048, ಮೊ. 74118 11916/81471 23234
ಶ್ರೀಧರ ಗೌಡರ

*
ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ, ಮಧ್ಯಮ ವರ್ಗದ ಮಕ್ಕಳು ನಿಶ್ಚಿತವಾಗಿ ಬಹುಬೇಗ ಉದ್ಯೋಗ ಹೊಂದಲು ಜಿಟಿಟಿಸಿ ಉತ್ತಮ ಆಯ್ಕೆ.
-ಯಲ್ಲಪ್ಪ ಸವದತ್ತಿ,
ಪ್ರಾಚಾರ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.