ADVERTISEMENT

ಕಾಂಗ್ರೆಸ್, ಜೆಡಿಎಸ್‌ನಿಂದ ‘ಕರಾಳ ದಿನ’ ಆಚರಣೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 6:11 IST
Last Updated 9 ನವೆಂಬರ್ 2017, 6:11 IST

ಧಾರವಾಡ: ಪ್ರಧಾನಿ ನರೇಂದ್ರ ಮೊದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ವರ್ಷ ಕೈಗೊಂಡ ಗರಿಷ್ಠ ಮುಖಬೆಲೆಯ ನೋಟು ರದ್ದತಿಯಿಂದಾದಿ ತೊಂದರೆ ಖಂಡಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ, ತಾಲ್ಲೂಕು ಕಾಂಗ್ರೆಸ್ ಸಮಿತಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಜೆಡಿಎಸ್ ಸೇವಾದಳ ಘಟಕದ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತ್ಯೇಕ ಪ್ರತಿಭಟನೆ ನಡೆಸುವ ಮೂಲಕ ‘ಕರಾಳ ದಿನ’ ಎಂದು ಆಚರಿಸಿದರು.

ಸ್ವಾಮಿ ವಿವೇಕಾನಂದ ವೃತ್ತ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಹಾಗೂ ತಹಶೀಲ್ದಾರ್ ಕಚೇರಿ ಎದುರು ತಾಲ್ಲೂಕು ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.

ಕೆಪಿಸಿಸಿ ಸದಸ್ಯ ದೀಪಕ ಚಿಂಚೋರೆ ಮಾತನಾಡಿ, ‘ನೋಟು ರದ್ದತಿಯ ಉದ್ದೇಶ ವಿಫಲವಾಗಿದೆ. ಹಣಕ್ಕಾಗಿ ಬ್ಯಾಂಕ್‌ಗಳ ಮುಂದೆ ಸರತಿಸಾಲಿನಲ್ಲಿ ನಿಂತು ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ದೇಶದ ಅರ್ಥಿಕ ವ್ಯವಸ್ಥೆ ಹದಗೆಟ್ಟಿದ್ದು, ಒಂದು ವರ್ಷವಾದರೂ ಜನ ಸಾಮಾನ್ಯರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಕೆಪಿಸಿಸಿ ಸದಸ್ಯರಾದ ರಾಬರ್ಟ್ ದದ್ದಾಪುರಿ, ಪ್ರಕಾಶ ಘಾಟಿಗೆ, ಪಾಲಿಕೆ ವಿರೋಧ ಪಕ್ಷದ ನಾಯಕ ಸುಭಾಸ ಶಿಂಧೆ,  ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಆನಂದ ಜಾದವ್, ವಸಂತ ಅರ್ಕಾಚಾರಿ, ಸ್ವಾತಿ ಮಾಳಗಿ, ಹೇಮಂತ ಗುರ್ಲಹೊಸುರ, ದಾನಪ್ಪ ಕಬ್ಬೇರ, ಮರಿಗೌಡ ಪಾಟೀಲ, ಬುರಾನ ಗೌಳಿ, ಬಸವರಾಜ ಕಿತ್ತೂರ ಇದ್ದರು.

ಗ್ರಾಮೀಣ ಬ್ಲಾಕ್ ಕಾಂಗ್ರೆಸ್: ಗ್ರಾಮೀಣ ಬ್ಲಾಕ್ ವತಿಯಿಂದಲೂ ಕಾರ್ಯಕರ್ತರು ಪ್ರತಿಭಟಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ ಮಾತನಾಡಿ, ‘ಕೇಂದ್ರದ ನಿರ್ಧಾರಕ್ಕೆ ಜನಸಾಮಾನ್ಯರು ಬಲಿಯಾಗಿದ್ದಾರೆ. ಬೃಹತ್ ಉದ್ದಿಮೆದಾರರ ಸಾಲ ಮನ್ನಾ ಮಾಡುವ ಭರಾಟೆಯಲ್ಲಿ ರೈತರ ಹಿತಾಸಕ್ತಿಯನ್ನು ಮರೆತುಬಿಟ್ಟಿದೆ. ಈ ಕೂಡಲೇ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

ಗ್ರಾಮೀಣ ಬ್ಲಾಕ್ ಅಧ್ಯಕ್ಷ ಮಹೇಶ ಜೋಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕಾ ಕಳ್ಳಿಮನಿ, ಪಾಲಿಕೆ ಸದಸ್ಯ ಯಾಸಿನ್ ಹಾವೇರಪೇಟ್, ಆನಂದ ಸಿಂಗನಾಥ, ಹನುಮಂತ ಮಾರಡಗಿ, ಗೌರಿ ನಾಡಗೌಡರ ಇದ್ದರು. ಜಿಲ್ಲಾ ಜೆಡಿಎಸ್ ಸೇವಾದಳ ಘಟಕ: ಜಿಲ್ಲಾ ಜೆಡಿಎಸ್ ಕಚೇರಿ ಎದುರು ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಜೆಡಿಎಸ್ ಸೇವಾದಳ ಘಟಕದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಸೇವಾದಳ ಜಿಲ್ಲಾಧ್ಯಕ್ಷ ಮೋಹನ ಅರ್ಕಸಾಲಿ, ಗ್ರಾಮೀಣ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಟಗರಿ, ಶಿವಾನಂದ ಮಾಕಡವಾಲೆ, ಹಸನ ಮೆಣಸಗಿ, ರಾಜು ಸಜ್ಜನಶೆಟ್ಟಿ, ಮಂಜುನಾಥ ಹಾನಗಲ್, ಗೌಸುಸಾಬ್ ನದಾಫ್, ಕಮಲಾ ಹೊಂಬಳ, ರೇಖಾ ನಾಯ್ಕರ, ಸೋಮು ರಾಮನಗೌಡರ, ಅಲ್ತಾಫ್ ನಧಾಫ್, ಬಿಪೀನ್ ಪಿಸೆ, ಆರೀಫ್ ಜೋರಮ್ಮನವರ, ರಿಯಾಜ ಜಮಖಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.