ADVERTISEMENT

ಕಿಮ್ಸ್: ಪ್ರಸಕ್ತ ವರ್ಷದಿಂದ 50 ವೈದ್ಯಕೀಯ ಸೀಟುಗಳು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 15 ಮೇ 2017, 5:36 IST
Last Updated 15 ಮೇ 2017, 5:36 IST

ಹುಬ್ಬಳ್ಳಿ: ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ್‌) ಪ್ರಸಕ್ತ ಶೈಕ್ಷಣಿಕ ವರ್ಷದಿಂದ 50 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಲು ಅನುಮತಿ ಸಿಕ್ಕಿದೆ’ ಎಂದು ಕಿಮ್ಸ್‌ ನಿರ್ದೇಶಕ ಡಾ. ದತ್ತಾತ್ರೇಯ ಡಿ. ಬಂಟ್‌ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ವೈದ್ಯಕೀಯ ಸೀಟು ಪಡೆಯಲು ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಕಾಯುತ್ತಿರುತ್ತಾರೆ. ಈಗ ಸೀಟುಗಳ ಸಂಖ್ಯೆ ಹೆಚ್ಚಳವಾಗಿರುವುದರಿಂದ 50 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದರಿಂದ ಕಿಮ್ಸ್‌ನಲ್ಲಿ ಒಟ್ಟು 200 ವಿದ್ಯಾರ್ಥಿಗಳಿಗೆ ವೈದ್ಯಕೀಯ ವ್ಯಾಸಂಗ ಮಾಡಲು ಅವಕಾಶ ಲಭಿಸಲಿದೆ’ ಎಂದರು.

‘ಸಂಸ್ಥೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ವ್ಯಾಸಂಗ ಮಾಡಬೇಕು ಎನ್ನುವ ಕಾರಣಕ್ಕೆ ಸೀಟು ಹೆಚ್ಚಿಸಲು ವರ್ಷದಿಂದ ಪ್ರಯತ್ನಿಸುತ್ತಿದ್ದೆವು. ಮುಂದಿನ ವರ್ಷ ಸೀಟು ಹೆಚ್ಚಳ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಈ ವರ್ಷವೇ ಸೀಟುಗಳನ್ನು ಹೆಚ್ಚಳ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಹೆಚ್ಚುವರಿ ಸೀಟುಗಳು ಮಂಜೂರು ಮಾಡಿದರೆ ತರಗತಿಗಳನ್ನು ನಡೆಸಲು ಕೊಠಡಿಗಳ ಲಭ್ಯತೆ, ಅಗತ್ಯ ಸಿಬ್ಬಂದಿ ಸೇರಿದಂತೆ ಇತರ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ  ಮನವರಿಕೆ ಮಾಡಿಕೊಡಲಾಗಿದೆ’ ಎಂದೂ ಮಾಹಿತಿ ನೀಡಿದರು.

ಶಿಕ್ಷಣ ಗುಣಮಟ್ಟ ಕುಸಿಯಲ್ಲ: ‘ಸೀಟುಗಳ ಸಂಖ್ಯೆ ಹೆಚ್ಚಳವಾಗಿರುವುದರಿಂದ ಶಿಕ್ಷಣ ಗುಣಮಟ್ಟ ಕುಸಿಯುವುದಿಲ್ಲ. ಅಗತ್ಯ ಸೌಲಭ್ಯಗಳು ಮತ್ತು ಸಿಬ್ಬಂದಿ ಸಂಸ್ಥೆಯಲ್ಲಿ ಇದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಕಿಮ್ಸ್‌ನಲ್ಲಿ ಅಪರೂಪದ ಶ್ವಾಸನಾಳದ ಶಸ್ತ್ರಚಿಕಿತ್ಸೆ: ಶ್ವಾಸನಾಳದ ಭಾಗವನ್ನು ಕತ್ತರಿಸಿ ಮರು ಜೋಡಣೆ ಮಾಡುವ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಕಿಮ್ಸ್‌ನ ವೈದ್ಯರು ಮಾಡಿದ್ದಾರೆ.
‘ಕ್ರಿಮಿನಾಶಕ ಸೇವಿಸಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗುವ ರೋಗಿಗಳು ಕೆಲ ದಿನಗಳಲ್ಲಿ ಕಿವಿ, ಮೂಗು ಮತ್ತು ಗಂಟಲು ಸಂಬಂಧಿತ ನೋವಿನಿಂದ ಬಳಲುತ್ತಾರೆ.

ಈ ರೀತಿಯ ರೋಗ ಅತ್ಯಂತ ಅಪಾಯಕಾರಿಯಾಗಿದ್ದು ಶಸ್ತ್ರಚಿಕಿತ್ಸೆಯ ಮೂಲಕ ಸಮಸ್ಯೆ ಪರಿಹರಿಸಲು ಸಾಧ್ಯವಿದೆ. ಇಂಥ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಸಂಸ್ಥೆಯ ವೈದ್ಯರು ಮಾಡಿದ್ದಾರೆ’ ಎಂದು ಬಂಟ್‌ ಹೇಳಿದರು.

‘ಧಾರವಾಡದ ಸುರೇಶ್‌ ಎಂಬುವವರು ಕೀಟನಾಶನ ಸೇವಿಸಿ ಚಿಕಿತ್ಸೆಗಾಗಿ 2014ರ ಜೂನ್‌ನಲ್ಲಿ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದರು. ವಿಪರೀತ ಉಸಿರಾಟದ ಸಮಸ್ಯೆಯಿಂದ ಬಳಲಿದ ಕಾರಣ ಶ್ವಾಸನಾಳದಲ್ಲಿ ಕೃತಕ ರಂಧ್ರ ರಚಿಸಲಾಗಿತ್ತು. ಒಂದು ವರ್ಷದ ಬಳಿಕ ಪರಿಶೀಲಿಸಿದಾಗ ನಾಲ್ಕು ಸೆಂ.ಮೀ. ಭಾಗ ಸಣ್ಣದಾಗಿರುವುದು ಕಂಡುಬಂತು.

ಆದ್ದರಿಂದ ಆ ವ್ಯಕ್ತಿಗೆ ಸಣ್ಣದಾದ ಶ್ವಾಸನಾಳದ ಭಾಗ ತೆಗೆದು ಮರು ಜೋಡಣೆ ಮಾಡಲಾಯಿತು. ಈ ಶಸ್ತ್ರಚಿಕಿತ್ಸೆಗೆ ಐದು ಗಂಟೆ ಬೇಕಾಯಿತು. ಇದೇ ವರ್ಷದ ಜನವರಿಯಲ್ಲಿ ನಡೆದ ಶಸ್ತ್ರಚಿಕಿತ್ಸೆಯ ಬಳಿಕ ಅವರು ಚೇತರಿಸಿಕೊಂಡಿದ್ದಾರೆ’ ಎಂದು ಅವರು ವಿವರಿಸಿದರು.

ಕಿವಿ, ಮೂಗು ಮತ್ತು ಗಂಟಲು ತಜ್ಞರಾದ ಡಾ. ಬಿ.ಎಂ. ಸೋಮನಾಥ, ಡಾ.ಕೆ. ವಿಕ್ರಮ ಭಟ್ ನಡೆಸಿದ್ದಾರೆ. ಅರವಳಿಕೆ ತಜ್ಞರಾದ ಡಾ. ಜ್ಯೋತಿ ಮತ್ತು ಡಾ. ಪುಷ್ಪಾ ಅವರನ್ನು ಒಳಗೊಂಡ ತಂಡ ಶಸ್ತ್ರಚಿಕಿತ್ಸೆಗೆ ನೆರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.