ADVERTISEMENT

ಕೀಟನಾಶಕಗಳ ಬೆಲೆಯಲ್ಲಿ ಶೇ 12.5ರಷ್ಟು ಹೆಚ್ಚಳ

ಎಂ.ರವಿ
Published 17 ಜುಲೈ 2017, 6:10 IST
Last Updated 17 ಜುಲೈ 2017, 6:10 IST

ಹುಬ್ಬಳ್ಳಿ: ರಾಜ್ಯದಲ್ಲಿ ಮೂರ್ನಾಲ್ಕು ವರ್ಷಗಳಿಂದ ಬರ ಇರುವುದರಿಂದ ರೈತರು ಬೆಳೆ ಬೆಳೆಯಲಾಗದೆ ಕಂಗಾ­ಲಾಗಿ­ದ್ದಾರೆ. ಈ ನಡುವೆ ಜುಲೈ 1ರಿಂದ ಜಾರಿಯಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್‌.ಟಿ)ಯಿಂದಾಗಿ ಕೀಟ­ನಾಶ­ಕ­ಗಳ ಬೆಲೆ ಹೆಚ್ಚಾಗಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಲ್ಪಸ್ವಲ್ಪ ಮಳೆಯಲ್ಲೇ ಭೂಮಿ ಹದ ಮಾಡಿ, ಕೆಲ ರೈತರು ಬೀಜಗಳನ್ನು ಬಿತ್ತಿದ್ದಾರೆ. ಬೆಳೆ ಬಂದ ಕೂಡಲೇ ಅವುಗಳಿಗೆ ರೋಗ ತಗುಲದಂತೆ ಎಚ್ಚರ ವಹಿಸಿ ಕೀಟನಾಶಕ ಸಿಂಪಡಿಸಬೇಕು. ಇಲ್ಲವಾದಲ್ಲಿ ಬೆಳೆ ಸಂಪೂರ್ಣ ಹಾಳಾಗಲಿದೆ. ಆದರೆ, ಜಿ.ಎಸ್‌.ಟಿ ಜಾರಿ ಆಗುವ ಮುನ್ನಾ ಶೇ 5.5ರಷ್ಟು ಇದ್ದ ಕೀಟನಾಶಕಗಳ ಬೆಲೆ ಇದೀಗ ಶೇ 12.5ರಷ್ಟು ಹೆಚ್ಚಾಗಿದೆ. ಇದು ರೈತಾಪಿ ವರ್ಗಕ್ಕೆ ಹೊರೆ ಎನಿಸಿದೆ.

‘ಭತ್ತ, ಹತ್ತಿ, ಗೋವಿನ ಜೋಳ, ಉದ್ದು ಸೇರಿದಂತೆ ಇತರೆ ಬೆಳೆಗಳಿಗೆ ಬಳಸಲಾಗುವ ರಸಗೊಬ್ಬರಗಳ ಮೇಲೆ ಹಾಕುತ್ತಿದ್ದ ತೆರಿಗೆಯಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ. ಈ ಮೊದಲು ಶೇ 5.5 ರಷ್ಟು ಇದ್ದ ತೆರಿಗೆಯು ಜಿ.ಎಸ್‌.ಟಿ ಜಾರಿಯಾದ ಬಳಿಕ ಶೇ 0.5 ರಷ್ಟು  ಇಳಿಕೆಯಾಗಿದ್ದು, ಮೂಗಿಗೆ ತುಪ್ಪ ಸವರಿದಂತಾಗಿದೆ. ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ’ ಎಂಬುದು ರೈತರ ಅಳಲು.

ADVERTISEMENT

‘ಜಿ.ಎಸ್‌.ಟಿ ಜಾರಿಯಾದ ಬಳಿಕ ಕೀಟನಾಶಕಗಳ ಬೆಲೆ ಶೇ 12.5ರಷ್ಟು ಹೆಚ್ಚಾಗಿದೆ. ಮಳೆ ಇಲ್ಲದೇ ರೈತರು ತತ್ತರಿಸಿದ್ದಾರೆ. ಈ ನಡುವೆ ಕೀಟನಾಶಕಗಳ ಬೆಲೆ ಹೆಚ್ಚಳ ಆಗಿರುವುದರಿಂದ ವ್ಯಾಪಾರ ತಗ್ಗುವ ಸಾಧ್ಯತೆ ಇದೆ’ ಎಂದು ಹುಬ್ಬಳ್ಳಿ–ಧಾರವಾಡ ಆಗ್ರೊ ಟ್ರೇಡರ್ಸ್‌ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಉಲ್ಲಾಸ ತಾಳೆಬಾಳಿಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿತ್ತನೆ ಬೀಜ(ಪ್ಯಾಕೆಟ್‌)ಗಳ ಮೇಲೆ ಈ ಮೊದಲು ಯಾವುದೇ ತೆರಿಗೆ ಇರಲಿಲ್ಲ. ಆದರೆ, ಜಿ.ಎಸ್‌.ಟಿ ಜಾರಿಯಾದ ಬಳಿಕ ಇವುಗಳ ಮೇಲೆ ಶೇ 5ರಷ್ಟು ತೆರಿಗೆ ಹಾಕಲಾಗಿದೆ ಎಂದು ಬಿತ್ತನೆ ಬೀಜಗಳನ್ನು ವಿತರಿಸುವ ಕಂಪೆನಿ ವಿತರಕರು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ವ್ಯಾಪಾರಿಗಳಲ್ಲಿ ಗೊಂದಲ ಇದೆ. ಅಲ್ಲದೆ, ಜಿ.ಎಸ್‌.ಟಿ ಜಾರಿಗೂ ಮುನ್ನ ಅಂಗಡಿಗಳಲ್ಲಿ ಸಂಗ್ರಹಿಸಿಡಲಾಗಿದ್ದ ರಸಗೊಬ್ಬರ, ಬಿತ್ತನೆ ಬೀಜ ಮತ್ತು ಕೀಟನಾಶಕಗಳನ್ನು ಯಾವ ದರಕ್ಕೆ ಮಾರಾಟ ಮಾಡಬೇಕು ಎಂಬುದರ ಬಗ್ಗೆ ವ್ಯಾಪಾರಿಗಳಿಗೆ ಯಾವುದೇ ಮಾಹಿತಿ ಇಲ್ಲ’ ಎಂದು ಅವರು ವಿವರಿಸಿದರು.

ಬೆಳೆಗಳಿಗೆ ಕೀಟನಾಶಕಗಳನ್ನು ಸಿಂಪಡಿಸಲು ಬಳಸುವ ಸ್ಪ್ರೇಯರ್‌ (ಕೈ ಪಂಪ್‌)ಗಳ ಮೇಲೆ ಈ ಮೊದಲು ಯಾವುದೇ ತೆರಿಗೆ ಇರಲಿಲ್ಲ. ಇದೀಗ ಅವುಗಳ ಮೇಲೆ ಶೇ 18ರಷ್ಟು ತೆರಿಗೆ ಹಾಕಲಾಗಿದ್ದು, ರೈತರಿಗೆ ಮತ್ತಷ್ಟು ಹೊರೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.