ADVERTISEMENT

ಕೃಷಿ ಭೂಮಿ ಇಳಿಕೆ: ಕಳವಳ

‘ಭಾರತದಲ್ಲಿ ಕೃಷಿ: ಅಂದು, ಇಂದು ಹಾಗೂ ಮುಂದೆ’ ವಿಷಯದ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 5:27 IST
Last Updated 2 ಫೆಬ್ರುವರಿ 2017, 5:27 IST
ಕೃಷಿ ಭೂಮಿ ಇಳಿಕೆ: ಕಳವಳ
ಕೃಷಿ ಭೂಮಿ ಇಳಿಕೆ: ಕಳವಳ   

ಧಾರವಾಡ: ‘ಮುಂದಿನ ಮೂರು ದಶಕಗಳು ಕೃಷಿಕರು ಹಾಗೂ ಸಂಶೋಧಕರಿಗೆ ಸವಾಲು ಎದುರಿಸುವ ಸಮಯವಾಗಲಿದ್ದು, ಇಳಿಮುಖವಾಗುತ್ತಿರುವ ಕೃಷಿಭೂಮಿಯಲ್ಲಿ ಏರುತ್ತಿರುವ ಜನಸಂಖ್ಯೆಗೆ ಆಹಾರ ಪೂರೈಸಬೇಕಾದ ಪರಿಸ್ಥಿತಿ ಎದುರಾಗಲಿದೆ’ ಎಂದು ಮಹಾರಾಷ್ಟ್ರದ ರಹೋರಿಯಲ್ಲಿರುವ ಮಹಾತ್ಮಾ ಫುಲೆ ಕೃಷಿ ವಿದ್ಯಾಪೀಠದ ಕುಲಪತಿ ಡಾ. ಕೆ.ಪಿ.ವಿಶ್ವನಾಥ ಆತಂಕ ವ್ಯಕ್ತಪಡಿಸಿದರು.

ಡಾ. ಎಸ್‌.ಡಬ್ಲ್ಯು ಮೆಣಸಿಕಾಯಿ ಪ್ರತಿಷ್ಠಾನದ ವತಿಯಿಂದ ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಸ್ಥಾಪಕ ಕುಲಪತಿ ಡಾ. ಎಸ್‌.ಡಬ್ಲ್ಯು. ಮೆಣಸಿನಕಾಯಿ ಸ್ಮರಣಾರ್ಥ ಬುಧವಾರ ನಡೆದ ಕಾರ್ಯಕ್ರಮದಲ್ಲಿ ‘ಭಾರತದಲ್ಲಿ ಕೃಷಿ: ಅಂದು, ಇಂದು ಹಾಗೂ ಮುಂದೆ’ ಎಂಬ ವಿಷಯ ಕುರಿತು ಅವರು ಮಾತನಾಡಿದರು.

‘ದೇಶದ ಜನಸಂಖ್ಯೆ 2050ರ ಹೊತ್ತಿಗೆ 1.7 ಶತಕೋಟಿ ದಾಟಲಿದೆ. ಇದೇ ಸಂದರ್ಭದಲ್ಲಿ ಹವಾಮಾನ ಬದಲಾವಣೆ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಕೃಷಿ ಭೂಮಿಯ ಪ್ರಮಾಣವೂ ಗಣನೀಯವಾಗಿ ಇಳಿಮುಖವಾಗಲಿದೆ. ಹೀಗಾಗಿ ಇಷ್ಟು ದೊಡ್ಡ ಸಂಖ್ಯೆಯಲ್ಲಿನ ಜನರಿಗೆ ಆಹಾರ ಪೂರೈಕೆ ಮಾಡಬೇಕಾದ ಸವಾಲು ಕೃಷಿಕರಿಗೆ ಹಾಗೂ ಕೃಷಿ ಸಂಶೋಧಕರಿಗೆ ಎದುರಾಗಲಿದೆ. ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಹಾಗೂ ಕೃಷಿ ಇಳುವರಿ ಹೆಚ್ಚಿಸಲು ಜೈವಿಕ ತಂತ್ರಜ್ಞಾನ, ನ್ಯಾನೊ ತಂತ್ರಜ್ಞಾನ, ನಿಖರ ಕೃಷಿ, ಸಹಕಾರ ಬೇಸಾಯ, ಕಾರ್ಪೊರೇಟ್ ಕೃಷಿ ಇತ್ಯಾದಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ’ ಎಂದರು.

‘ಇಂಥ ಸಂದರ್ಭದಲ್ಲಿ ಮುಂದುವರಿದ ರಾಷ್ಟ್ರಗಳು ಕೃಷಿ ವಲಯದಲ್ಲಿ ಇರುವ ಸಂಪನ್ಮೂಲ ಬಳಸಿಕೊಂಡು ತೋರಿರುವ ಜಾಣ್ಮೆಯನ್ನು ನಾವು ಗಮನಿಸಬೇಕಿದೆ. ಹವಾಮಾನ ವೈಪರಿತ್ಯವನ್ನು ತಡೆದುಕೊಳ್ಳುವ ತಳಿಗಳ ಅಭಿವೃದ್ಧಿ, ಜೈವಿಕ ಒತ್ತಡದ ನಿಯಂತ್ರಣ, ಬೆಳೆಗಳ ಜೈವಿಕ ಸಾರವರ್ಧನೆ, ಪೋಷಕಾಂಶಗಳ ವ್ಯವಸ್ಥಿತ ಬಳಕೆ ಹಾಗೂ ಕಾಮನಬಿಲ್ಲು ಕ್ರಾಂತಿಯಂತ ವಿಚಾರಗಳನ್ನು ಅಳವಡಿಸಿಕೊಂಡು ಉತ್ಪಾದಕತೆಯನ್ನು ಹೆಚ್ಚಿಸಬೇಕಾಗಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿವಿ ಕುಲಪತಿ ಡಾ. ಡಿ.ಪಿ.ಬಿರಾದಾರ ಮಾತನಾಡಿ, ‘ಡಾ. ಮೆಣಸಿನಕಾಯಿ ಅವರು ಕೃಷಿ ಮಹಾವಿದ್ಯಾಲಯ ಸ್ಥಾಪನೆ ಸಮಯದಲ್ಲಿ ತೋರಿದಂತಹ ತ್ಯಾಗ ಹಾಗೂ ವಿದ್ಯಾರ್ಥಿಗಳ ಮೇಲಿದ್ದ ಪ್ರೀತಿ ಇವು ಅನುಕರುಣೀಯ. ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಕೃಷಿ ವಿಶ್ವವಿದ್ಯಾಲಯವು ಈಗಲೂ ಮುಂದುವರೆದಿದೆ. ರಾಷ್ಟ್ರದಲ್ಲಿಯೇ ಅತ್ಯುತ್ತಮ ಕೃಷಿ ವಿಶ್ವವಿದ್ಯಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಮೆಣಸಿನಕಾಯಿಯವರು ನಂಬಿದ್ದ ತತ್ವ ಹಾಗೂ ಸಿದ್ಧಾಂತಗಳಿಗೆ ಮರುಸಮರ್ಪಣೆ ಮಾಡಿಕೊಳ್ಳಲಾಗುವುದು’ ಎಂದರು.

ಗೌರಾದೇವಿ ಮೆಣಸಿನಕಾಯಿ, ಡಾ. ಆರ್‌.ಎಸ್‌.ಗಿರಡ್ಡಿ, ಡಾ. ಜೆ.ವಿ.ಗೌಡ, ಡಾ. ಜೆ.ಎಚ್‌.ಕುಲಕರ್ಣಿ, ಈಶ್ವರಚಂದ್ರ ಹೊಸಮನಿ, ಡಾ. ಎಸ್‌.ಟಿ.ಕಜ್ಜಿಡೋಣಿ, ಡಾ.ಎಸ್‌.ಎಸ್‌.ಅಂಗಡಿ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.