ADVERTISEMENT

ಕೇಂದ್ರೀಕೃತ ತೈಲ ದರ ಪರಿಷ್ಕರಣೆ ವ್ಯವಸ್ಥೆ ಶೀಘ್ರ

ಮನೋಜ ಕುಮಾರ್ ಗುದ್ದಿ
Published 14 ಜುಲೈ 2017, 9:19 IST
Last Updated 14 ಜುಲೈ 2017, 9:19 IST

ಹುಬ್ಬಳ್ಳಿ: ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬೆಲೆ ವ್ಯತ್ಯಾಸವಾದ ಕೂಡಲೇ ಅದರ ಲಾಭವನ್ನೂ ಗ್ರಾಹಕರಿಗೆ ವರ್ಗಾಯಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ದಿನನಿತ್ಯ ತೈಲ ಪರಿಷ್ಕರಣೆ ವ್ಯವಸ್ಥೆಗೆ ಜಿಲ್ಲೆಯ ಪೆಟ್ರೋಲ್‌ ಬಂಕ್‌ ಡೀಲರ್‌ಗಳು ಇನ್ನಷ್ಟೇ ಹೊಂದಿಕೊಳ್ಳಬೇಕಿದೆ.

ನಿತ್ಯ ತೈಲ ಬೆಲೆ ಪರಿಷ್ಕರಣೆಯಿಂದ (ಡೈನಮಿಕ್‌ ಪ್ರೈಸಿಂಗ್‌) ತಮಗೆ ನಷ್ಟವಾಗುತ್ತದೆ ಎಂದು ಕರ್ನಾಟಕ ರಾಜ್ಯ ಪೆಟ್ರೋಲ್‌ ಡೀಲರ್‌ಗಳ ಒಕ್ಕೂಟದವರು ಬುಧವಾರ (ಜುಲೈ 12) ತೈಲ ಮಾರಾಟ ಮತ್ತು ಖರೀದಿ ಬಂದ್‌ ಮಾಡುವುದಾಗಿ ಎಚ್ಚರಿಕೆ ನೀಡಿದ್ದರಾದರೂ ಕೊನೆ ಗಳಿಗೆಯಲ್ಲಿ ಮುಷ್ಕರವನ್ನು ವಾಪಸ್ ಪಡೆದಿದ್ದರು.

ಈ ನಡುವೆ,  ಜಿಲ್ಲೆಯ ಶೇ 20ರಷ್ಟು ಬಂಕ್‌ಗಳ ತೈಲ ವಿತರಣಾ ವ್ಯವಸ್ಥೆಯನ್ನು (ಆಟೊಮೇಷನ್‌) ಸ್ವಯಂಚಾಲಿತಗೊಳಿಸಲಾಗಿದೆ. ಈ ಯಂತ್ರಗಳಿಗೆ ಆಯಾ ತೈಲ ಕಂಪೆನಿಗಳ ಕೇಂದ್ರ ಕಚೇರಿಯಿಂದಲೇ ಸರ್ವರ್‌ ಮೂಲಕ ಬೆಲೆ ಪರಿಷ್ಕರಣೆಯಾಗಲಿದೆ. ಉಳಿದ 120ಕ್ಕೂ ಅಧಿಕ ತೈಲ ವಿತರಣಾ ಯಂತ್ರಗಳಲ್ಲಿ ಆಯಾ ಬಂಕ್‌ ಮಾಲೀಕರೇ ಬೆಲೆಯನ್ನು ಸಿಬ್ಬಂದಿಯ ಸಹಾಯದಿಂದ ಬದಲಾಯಿಸಬೇಕಾಗುತ್ತದೆ.

ADVERTISEMENT

‘ಎಲ್ಲ ಯಂತ್ರಗಳೂ ಸ್ವಯಂಚಾಲಿತವಾಗಿ ಬೆಲೆ ಪಟ್ಟಿಯನ್ನು ಬದಲಾಯಿಸಲು ಬೆಂಗಳೂರಿನ ತಂತ್ರಜ್ಞರಿಗೆ ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌, ಭಾರತ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ ಪೆಟ್ರೋಲಿಯಂ ಕಂಪೆನಿಗಳು ಗುತ್ತಿಗೆ ನೀಡಿವೆ. ಆದರೆ, ಇದಕ್ಕಾಗಿ ಹಲವು ಉಪಕರಣಗಳು ಬೆಂಗಳೂರಿನಿಂದ ಬರಬೇಕಾಗಿರುವುದರಿಂದ ಇನ್ನಷ್ಟು ವಿಳಂಬವಾಗಲಿದೆ. ಅಲ್ಲಿಯವರೆಗೆ ನಾವೇ ಬದಲಾಯಿಸಿಕೊಳ್ಳಬೇಕಿದೆ’ ಎನ್ನುತ್ತಾರೆ ಧಾರವಾಡ ಜಿಲ್ಲಾ ಪೆಟ್ರೋಲಿಯಂ ಡೀಲರ್‌ಗಳ ಸಂಘದ ಅಧ್ಯಕ್ಷ ಶಾಂತರಾಜ ಪಿ.ಪೋಳ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ‘ಇಲ್ಲಿಯವರೆಗೆ ಸ್ವಯಂ ಚಾಲಿತ ವ್ಯವಸ್ಥೆ ಇಲ್ಲದೇ ಇರುವುದರಿಂದ ಹಳೆಯ ಪದ್ಧತಿಯಂತೆ ತೈಲ ಬೆಲೆ ಪರಿಷ್ಕರಣೆಯಾದ ಸಂದರ್ಭದಲ್ಲಿ ಮಾತ್ರ ಬದಲಾಯಿಸುತ್ತಿದ್ದೆವು. ಆದರೆ, ಈಗ ನಮ್ಮ ದೈನಂದಿನ ವ್ಯವಹಾರ ಮುಗಿಸಿದ ಬಳಿಕ ಸಿಬ್ಬಂದಿಯೇ ಹೊಸ ದರಕ್ಕೆ ಯಂತ್ರವನ್ನು ಹೊಂದಿಸುತ್ತಾರೆ’ ಎಂದರು.

ಜಿಲ್ಲೆಯಿಂದ ಜಿಲ್ಲೆಗೆ ದರ ವ್ಯತ್ಯಾಸ: ತೈಲ ಸಂಗ್ರಹಾಗಾರದಿಂದ ತೈಲವನ್ನು ಎಷ್ಟು ದೂರ ಕೊಂಡೊಯ್ಯಲಾಗುತ್ತದೆ ಎಂಬುದರ ಮೇಲೆ ಆಯಾ ತೈಲ ಕಂಪೆನಿಗಳು ಬೆಲೆಯಲ್ಲಿ ಹೆಚ್ಚು ಕಡಿಮೆ ಮಾಡುತ್ತವೆ. ಉದಾಹರಣೆಗೆ ಬಹುತೇಕ ತೈಲದ ದಾಸ್ತಾನು ಬರುವುದು ಗೋವಾದ ಬಂದರುಗಳ ಮೂಲಕ.

ವಾಸ್ಕೊದಿಂದ ಹುಬ್ಬಳ್ಳಿ ಸುಮಾರು 184 ಕಿ.ಮೀ. ದೂರವಿದೆ. ಆದರೆ, ಬೆಳಗಾವಿ ಕೇವಲ 137 ಕಿ.ಮೀ. ದೂರವಿದೆ. ಹೀಗಾಗಿ, ಹುಬ್ಬಳ್ಳಿಗಿಂತಲೂ ಬೆಳಗಾವಿಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ₹ 2.50ರಿಂದ ₹ 3 ಕಡಿಮೆ ಇರುತ್ತದೆ. ಧಾರವಾಡ ಜಿಲ್ಲೆಯ ತಾಲ್ಲೂಕಿನಿಂದ ತಾಲ್ಲೂಕಿಗೆ ಪೈಸೆಗಳ ಲೆಕ್ಕದಲ್ಲಿ ದರ ಹೆಚ್ಚು ಕಡಿಮೆಯಾಗುತ್ತದೆ ಎನ್ನುತ್ತಾರೆ ಧಾರವಾಡದ ಜ್ಯೋತಿ ಆಯಿಲ್‌ ಡಿಸ್ಟ್ರಿಬ್ಯೂಟರ್ಸ್‌ನ ಮಾಲೀಕ ಅಜಿತ್‌ ಗಾಂವ್ಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.